Home ರಾಜ್ಯ ಧಾರವಾಡ ಹುಬ್ಬಳ್ಳಿ: ಲವ್ ಜಿಹಾದ್ ಆರೋಪ ಮಾಡಿ ಉಲ್ಟಾ ಹೊಡೆದ ಯುವತಿ; ವಿಡಿಯೋ ಮೂಲಕ ಹೇಳಿಕೆ ವಾಪಸ್

ಹುಬ್ಬಳ್ಳಿ: ಲವ್ ಜಿಹಾದ್ ಆರೋಪ ಮಾಡಿ ಉಲ್ಟಾ ಹೊಡೆದ ಯುವತಿ; ವಿಡಿಯೋ ಮೂಲಕ ಹೇಳಿಕೆ ವಾಪಸ್

0

ಹುಬ್ಬಳ್ಳಿ: ನಗರದಲ್ಲಿ ಜಿಮ್ ಟ್ರೈನರ್ ಒಬ್ಬರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದ ಬೆನ್ನಲ್ಲೇ, ‘ಲವ್ ಜಿಹಾದ್’ ಎಂದು ಬಿಂಬಿತವಾಗಿದ್ದ ಮತ್ತೊಂದು ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಧಾರವಾಡ ಮೂಲದ ಯುವಕನೊಬ್ಬನ ಮೇಲೆ ಅತ್ಯಾಚಾರದ ದೂರು ದಾಖಲಿಸಿದ್ದ ೨೩ ವರ್ಷದ ಯುವತಿ, ಈಗ ವಿಡಿಯೋವೊಂದರ ಮೂಲಕ ತನ್ನ ಹೇಳಿಕೆಯನ್ನು ಬದಲಿಸಿದ್ದು, ಕೆಲವರ ಒತ್ತಡಕ್ಕೆ ಮಣಿದು ದೂರು ನೀಡಿದ್ದಾಗಿ ತಿಳಿಸಿದ್ದಾರೆ.

ಧಾರವಾಡ ಮೂಲದ ಮುಫೀಜ್ ಮಿಯಾನವರ್ ಎಂಬಾತ ತನ್ನ ಮೇಲೆ ೨೦೨೫ರ ನವೆಂಬರ್‌ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಮತ್ತು ಈ ವಿಷಯ ಯಾರಿಗಾದರೂ ತಿಳಿಸಿದರೆ ಪೋಷಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಕೇಶವಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಪೊಲೀಸರು ತಕ್ಷಣವೇ ಮುಫೀಜ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಹುಬ್ಬಳ್ಳಿ-ಧಾರವಾಡ ಉಪ ಪೊಲೀಸ್ ಕಮಿಷನರ್ ಶ್ರುತಿ ಎಂ.ಎಸ್. ಅವರು ಈ ಕುರಿತು ಮಾಹಿತಿ ನೀಡಿ, ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ಆದರೆ, ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಪ್ರಕಟವಾಗಿದ್ದು, ಅದರಲ್ಲಿ ಯುವತಿಯು ಸ್ಫೋಟಕ ಹೇಳಿಕೆ ನೀಡಿದ್ದಾರೆ. “ಮುಫೀಜ್ ನನ್ನನ್ನು ಮದುವೆಯಾಗಲು ಸಿದ್ಧನಿದ್ದ ಮತ್ತು ಆತನ ಪೋಷಕರು ಕೂಡ ಒಪ್ಪಿಗೆ ನೀಡಿದ್ದರು. ಆದರೆ ಕೆಲವು ಅಪರಿಚಿತ ವ್ಯಕ್ತಿಗಳು ನನ್ನ ಬಳಿ ಬಂದು ಒತ್ತಡ ಹೇರಿ, ಮುಫೀಜ್ ವಿರುದ್ಧ ದೂರು ನೀಡುವಂತೆ ಬಲವಂತ ಮಾಡಿದರು,” ಎಂದು ಯುವತಿ ಆ ವಿಡಿಯೋದಲ್ಲಿ ಹೇಳಿರುವುದು ಕಂಡುಬಂದಿದೆ. ಈ ಬೆಳವಣಿಗೆಯು ಪ್ರಕರಣದ ದಿಕ್ಕನ್ನೇ ಬದಲಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಜತ್ ಉಳ್ಳಾಗಡ್ಡಿಮಠ, “ಮುಂಬರುವ ಉಪಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಮತ್ತು ಇತರ ಸಂಘಟನೆಗಳು ವೈಯಕ್ತಿಕ ವಿಚಾರಗಳನ್ನು ‘ಲವ್ ಜಿಹಾದ್’ ಎಂದು ಬಿಂಬಿಸಿ ಕೋಮು ಪ್ರಚೋದನೆ ನೀಡುತ್ತಿವೆ. ಇದು ಬಿಜೆಪಿಯ ‘ಟೂಲ್‌ಕಿಟ್’ ರಾಜಕಾರಣದ ಭಾಗ” ಎಂದು ಆರೋಪಿಸಿದ್ದಾರೆ. ಸದ್ಯ ಈ ಪ್ರಕರಣವು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

You cannot copy content of this page

Exit mobile version