Home ಅಂಕಣ ಕುದ್ಮಲ್‌ ರಂಗರಾಯರು: ಬ್ರಾಹ್ಮಣರಿಗೆ ಮಾದರಿ ವ್ಯಕ್ತಿತ್ವ

ಕುದ್ಮಲ್‌ ರಂಗರಾಯರು: ಬ್ರಾಹ್ಮಣರಿಗೆ ಮಾದರಿ ವ್ಯಕ್ತಿತ್ವ

0

(ಜ.30 ರಂದು ಅಂದರೆ ಇಂದು ಕುದ್ಮಲ್‌ ರಂಗರಾಯರ ಪುಣ್ಯತಿಥಿ ಸ್ಮರಣಾರ್ಥ ಈ ಬರಹ.)

ಮಂಗಳೂರಿನ ನ್ಯಾಯಾಲಯದಲ್ಲಿ ಪೇದೆ ಕೆಲಸವೊಂದು ಖಾಲಿ ಬಿದ್ದ ಕಾರಣ ಅರ್ಜಿಗಳನ್ನು ಆಹ್ವಾನಿಸಿದ್ದರು. ಅಲ್ಪ ವಿದ್ಯಾಭ್ಯಾಸ ಮಾಡಿದ್ದ ದಲಿತ ಸಮುದಾಯದ ಬೆಂದೂರು ಬಾಬು ಎನ್ನುವವರು ಅದಕ್ಕೆ ಅರ್ಜಿ ಹಾಕಿದ್ದರು. ಸಂದರ್ಶನದಲ್ಲಿ ಜಿಲ್ಲಾ ನ್ಯಾಯಾಧೀಶರಿಗೆ ಆತ ಅರ್ಹನೆಂದು ಕಂಡಿತು. ಇದು ಮೇಲ್ಜಾತಿಯವರ ಅಸಹನೆಗೆ ಕಾರಣವಾಯಿತು.

ಆತನನ್ನು ಆ ಹುದ್ದೆಗೆ ಆಯ್ಕೆ ಮಾಡಬಾರದೆಂದು ನ್ಯಾಯಾಲಯದಲ್ಲಿ ಗಲಭೆ ಎಬ್ಬಿಸಿದರು. ದಲಿತರು ಯಾರೂ ಆ ವರೆಗೆ ಜಿಲ್ಲಾ ನ್ಯಾಯಾಲಯದಲ್ಲಿ ನೌಕರಿ ಮಾಡಿರಲಿಲ್ಲ. ನ್ಯಾಯಾಧೀಶರು ಆಕ್ಷೇಪಗಳನ್ನು ಲೆಕ್ಕಿಸದೆ ಬೆಂದೂರು ಬಾಬುಗೆ ನೇಮಕಾತಿಯ ಆದೇಶ ಕೊಟ್ಟೇ ಬಿಟ್ಟರು.

ಕುದ್ಮಲ್ ರಂಗರಾಯರು ಅದೇ ನ್ಯಾಯಾಲಯದಲ್ಲಿ ವಕೀಲರಾಗಿದ್ದರು. ಅವರಿಗೆ ಬೆಂದೂರು ಬಾಬುವಿನ ಆಯ್ಕೆ ಸಮಂಜಸವೆಂದು ತೋರಿತ್ತು. ಅವರು ನ್ಯಾಯಾಧೀಶರ ನಿರ್ಧಾರದ ಪರವಾಗಿದ್ದರು.

ಇದು ಸವರ್ಣೀಯರನ್ನು ಕೆರಳಿಸಿ, ಬ್ರಿಟಿಷ್ ಗವರ್ನರ್ ಗೆ ವಿಷಯ ತಿಳಿಸಿ ನೇಮಕಾತಿಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರಿದರು. ಆ ಸಮಯದಲ್ಲಿ ಬ್ರಿಟಿಷ್ ರೆಸಿಡೆನ್ಸಿ ಮದರಾಸಿನಲ್ಲಿತ್ತು. ಗವರ್ನರ್ ಪರಿಶೀಲನೆಗಾಗಿ ನ್ಯಾಯಾಧೀಶನನ್ನು ಅಲ್ಲಿಗೆ ಕರೆಸಿಕೊಂಡರು.

ಮದರಾಸಿಗೆ ಹೋಗಿದ್ದ ಬ್ರಿಟಿಷ್ ನ್ಯಾಯಾಧೀಶರು ಹಿಂದಕ್ಕೆ ಬಂದು ಕುದ್ಮಲ್ ರಂಗರಾಯರು,ಬೆಂದೂರು ಬಾಬು ಇಬ್ಬರನ್ನೂ ತನ್ನ ಕೊಠಡಿಗೆ ಬರಲು ಹೇಳುತ್ತಾರೆ. ಅವರ ಮುಖದಲ್ಲಿ ಮ್ಲಾನತೆ ಇರುತ್ತದೆ. ತನ್ನ ಪ್ರಯತ್ನ ವಿಫಲವಾಗಿದ್ದನ್ನು ತಿಳಿಸಿ ಬೆಂದೂರು ಬಾಬುಗೆ ನೇಮಕಾತಿ ಪತ್ರ ನೀಡಿದ ಕಾರಣಕ್ಕೆ ತನಗೆ ವರ್ಗಾವಣೆಯಾದ ಪತ್ರವನ್ನು ತೋರಿಸುತ್ತಾರೆ.

“ ನೋಡಿ ರಂಗರಾಯರೇ, ನಾನು ಬಾಬುಗೆ ನೇಮಕಾತಿ ಪತ್ರ ಕಳಿಸಿದ್ದೆ. ಅದನ್ನು ತಡೆ ಹಿಡಿಯಲಾಗಿದೆ. ಅದಲ್ಲದೆ ಅವನು ಇಲ್ಲಿ ನೆಮ್ಮದಿಯಿಂದ ಕೆಲಸ ಮಾಡುವುದು ಕಷ್ಟ. ಅವನು ಉದ್ಧಾರವಾಗಲು ಬಿಡಲಾರರು. ಅವನಿಗೆ ಮತ್ತು ಅವನ ಜಾತಿ ಮಕ್ಕಳಿಗೆ ಅನುಕೂಲವಾಗುವಂತೆ ನೀವೇ ಏನಾದರೂ ಪರಿಹಾರ ಕಂಡುಕೊಳ್ಳಬೇಕು”
ನ್ಯಾಯಾಧೀಶರು ಬೇಸರದಿಂದ ಹೇಳುತ್ತಾರೆ. ಈ ಮಾತುಗಳು ರಂಗರಾಯರ ಮೇಲೆ ತೀವ್ರವಾದ ಪರಿಣಾಮವನ್ನು ಬೀರುತ್ತವೆ. ಅವರು ಅನ್ನ, ನೀರು ಬಿಟ್ಟು ಮುಂದೇನು ಮಾಡಬೇಕೆಂದು ಯೋಚಿಸುತ್ತಾರೆ.

ಪರಿವರ್ತನೆಯ ಹರಿಕಾರ
ತಮ್ಮಂತೆ ಮನುಷ್ಯರೇ ಆದವರನ್ನು ಪಶುಗಳಿಗಿಂತಲೂ ಕೀಳಾಗಿ ಕಾಣುವ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಕುದ್ಮಲ್ ರಂಗರಾಯರಿಗೆ ಸಹಿಸಲಾರದ ನೋವು ಇರುತ್ತದೆ. ಅವರು ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು, ಜಾತೀಯ ವೈಷಮ್ಯವನ್ನು ದೂರ ಮಾಡಲು, ಅಸ್ಪೃಶ್ಯತೆಯ ಪಿಡುಗನ್ನು ನಿವಾರಣೆ ಮಾಡಲು ತನ್ನ ಬಾಳನ್ನು ಮುಡುಪಾಗಿಡುವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಈ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವ ಉದ್ದೇಶದಿಂದ, ʼ ಸತ್ಯ- ನ್ಯಾಯ ಎಂದರೆ ಕುದ್ಮಲ್ ರಂಗರಾವ್ʼ ಎನ್ನುವ ಮಟ್ಟಿಗೆ ಹೆಸರು ಮಾಡಿದ್ದ ವಕೀಲಿ ವೃತ್ತಿಯನ್ನು ಬಿಟ್ಟು ಬಿಡುತ್ತಾರೆ.

ಅಕ್ಷರವನ್ನೇ ತಿಳಿಯದ ದಲಿತರ ಪರಿಸ್ಥಿತಿಯನ್ನು ಶಿಕ್ಷಣ ನೀಡುವ ಸುಧಾರಿಸಿಬಹುದೆಂದು ಶಾಲೆಗಳನ್ನು ತೆರೆಯುವ ಯೋಚನೆಯನ್ನು ಮಾಡುತ್ತಾರೆ. ಮಂಗಳೂರಿನ ಚಿಲಿಂಬಿಯಲ್ಲಿ ಹುಲ್ಲು ಛಾವಣಿಯ ಮನೆಯೊಂದನ್ನು ಬಾಡಿಗೆಗೆ ಪಡೆದು ಮೊದಲ ಪ್ರಾಥಮಿಕ ಶಾಲೆ ಆರಂಭಿಸುತ್ತಾರೆ. ಇದು ಸವರ್ಣೀಯರ ಕೆಂಗಣ್ಣಿಗೆ ಗುರಿಯಾಗುತ್ತದೆ. ಶಿಕ್ಷಣದಿಂದ ಆಪತ್ತು ಬರುತ್ತದೆ ಎಂದು ದಲಿತರನ್ನು ಬೆದರಿಸುತ್ತಾರೆ. ಮಕ್ಕಳು ಶಾಲೆಗೆ ಬರದಂತೆ ತಡೆಯುವ ಉದ್ದೇಶದಿಂದ ಶಾಲೆಗೆ ಬರುವ ದಾರಿಯಲ್ಲಿ ಮುನಿಸಿಪಾಲಿಟಿಯ ಮಲವನ್ನು ಸುರಿಯುತ್ತಾರೆ. ದಾರಿಗಡ್ಡವಾಗಿ ಕಲ್ಲುಗಳನ್ನು ಪೇರಿಸಿ ಮಕ್ಕಳನ್ನು ತಡೆಯುತ್ತಾರೆ. ಇದರಿಂದ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ. ರಂಗರಾಯರು ಬೇರೆ ದಾರಿ ಇಲ್ಲದೆ ಶಾಲೆಯನ್ನು ಮುಚ್ಚಬೇಕಾಗುತ್ತದೆ.
ಆದರೆ ಈ ಅನುಭವದಿಂದ ರಂಗರಾಯರು ಕಂಗೆಡುವುದಿಲ್ಲ. 1892 ರಲ್ಲಿ ಡಿಪ್ರೆಸ್ಡ್ ಕ್ಲಾಸಸ್ ಮಿಶನ್ (ಡಿ ಎಸ್ ಎಸ್ ) ಎನ್ನುವ ಸಂಸ್ಥೆಯನ್ನು ಹುಟ್ಟು ಹಾಕುತ್ತಾರೆ. ಹಿಂದಿನ ಅನುಭವದಿಂದ ಪಾಠ ಕಲಿತು ಸಮಾನ ಮನಸ್ಸಿನ ಕೆಲವರ ನೆರವನ್ನು ಪಡೆಯುತ್ತಾರೆ. ಸಂಸ್ಥೆಯ ವತಿಯಿಂದ ದಡ್ಡಲಕಾಡು, ಶೇಡಿಗುಡ್ಡೆ, ಅತ್ತಾವರ, ನೇಜಾರು, ಬಾಬುಗುಡ್ಡೆ, ಕಂಕನಾಡಿ, ಮುಲ್ಕಿ, ಬನ್ನಂಜೆ, ಉಡುಪಿ, ಬೋಳೂರು ಮುಂತಾದ ಅವಿಭಜಿತ ದಕ್ಷಿಣ ಕನ್ನಡದ ಹಲವು ಕಡೆಗಳಲ್ಲಿ ಶಾಲೆಗಳನ್ನು ತೆರೆಯುತ್ತಾರೆ.

ಶಾಲೆಗಳನ್ನು ಆರಂಭಿಸಿದರೂ ಹೆಚ್ಚು ವಿದ್ಯಾರ್ಥಿಗಳು ಬರುತ್ತಿರಲಿಲ್ಲ. ಶಾಲೆಯಲ್ಲಿ ಕಲಿಸಲು ಅಧ್ಯಾಪಕರ ಕೊರತೆಯೂ ಇತ್ತು.

ರಂಗರಾಯರು ಮಕ್ಕಳು ಶಾಲೆಗೆ ಬರುವಂತೆ ಮಾಡಲು ಮಕ್ಕಳಿಗೆ ಎರಡು ಪೈಸೆ, ಆರು ಪೈಸೆ ಹಣವನ್ನು ಕೊಟ್ಟು ಪ್ರತಿ ದಿನ ಶಾಲೆಗೆ ತಪ್ಪದೇ ಬರುವಂತೆ ಪ್ರೇರೇಪಿಸುತ್ತಾರೆ. ಸವರ್ಣೀಯರು ಪಾಠ ಮಾಡಲು ಒಪ್ಪದಿದ್ದಾಗ ಕ್ರೈಸ್ತ ಅಧ್ಯಾಪಕರನ್ನು ನೇಮಿಸಿಕೊಳ್ಳುತ್ತಾರೆ.

ಆದರೆ ದೂರದ ಮಕ್ಕಳಿಗೆ ಶಾಲೆಗೆ ದಿನಾ ಬಂದು ಹೋಗಲು ಸಾಧ್ಯವಾಗುತ್ತಿರಲಿಲ್ಲ. ಇದರ ಬಗ್ಗೆ ಯೋಚಿಸಿ ವಸತಿ ಶಾಲೆಗಳನ್ನು ತೆರೆಯುವ ತೀರ್ಮಾನ ಮಾಡುತ್ತಾರೆ. ಆ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯೆಯ ಅಗತ್ಯ ಇಲ್ಲವೆಂದೇ ತಿಳಿದಿದ್ದರು. ರಂಗರಾಯರು ಹುಡುಗಿಯರಿಗೂ ಸಮಾನ ವಿದ್ಯಾಭ್ಯಾಸ ಇರಬೇಕೆಂದು 1899 ರಲ್ಲಿ ಮಂಗಳೂರಿನ ಶೇಡಿಗುಡ್ಡೆಯಲ್ಲಿ ವಿದ್ಯಾರ್ಥಿನಿ ನಿಲಯವನ್ನು ಆರಂಭಿಸುತ್ತಾರೆ. ತಮ್ಮ ಹೆಣ್ಣು ಮಕ್ಕಳನ್ನೂ ಸಾಮಾನ್ಯ ಶಾಲೆಗಳಲ್ಲಿಯೇ ಓದಿಸುತ್ತಾರೆ.

ಮೂಢನಂಬಿಕೆ, ಕೆಟ್ಟ ಪದ್ಧತಿಗಳ ನಿವಾರಿಸಿ, ಸ್ವಚ್ಚತೆಯನ್ನು ತಿಳಿಸಿಕೊಡುವುದಕ್ಕಾಗಿ ರಂಗರಾಯರು ಹಗಲು- ರಾತ್ರಿ ದಲಿತರ ಕೇರಿಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಮದ್ಯಪಾನ ಮಾಡಬೇಡಿ, ಕೆಟ್ಟ ಚಟಗಳಿಂದ ದೂರವಿರಿ ಎಂದು ತಿಳಿವಳಿಕೆ ಹೇಳುತ್ತಿದ್ದರು. ದಲಿತ ಮಕ್ಕಳನ್ನು ಸ್ವತಃ ಮೀಯಿಸಿ, ತೊಡೆಯ ಮೇಲೆ ಕೂರಿಸಿಕೊಳ್ಳುತ್ತಿದ್ದರು. ಸ್ವಚ್ಚತಾ ಕೆಲಸದಲ್ಲಿ ತಾವೇ ಭಾಗಿಯಾಗುತ್ತಿದ್ದರು.

ಕುದ್ಮಲ್ ರಂಗರಾಯರು ಮಾಡುತ್ತಿದ್ದ ಅಸ್ಪೃಶ್ಯತೆ ನಿವಾರಣೆಯ ಕೆಲಸವನ್ನು ಸವರ್ಣೀಯರು ಸಹಿಸಿಕೊಳ್ಳುತ್ತಿರಲಿಲ್ಲ. ಅವರು ಸಾರಸ್ವತ ಬ್ರಾಹ್ಮಣ ಸಮಾಜದ ವಿರೋಧಕ್ಕೆ ಗುರಿಯಾಗಬೇಕಾಗುತ್ತದೆ. ರಂಗರಾಯರು ಸೇರಿದಂತೆ ಅವರ ಕುಟುಂಬದ ಎಲ್ಲರೂ ಬಹಿಷ್ಕಾರಕ್ಕೆ ಒಳಗಾಗುತ್ತಾರೆ.
ಸವರ್ಣೀಯರ ಆಕ್ರೋಶ ಇಷ್ಟಕ್ಕೇ ನಿಲ್ಲುವುದಿಲ್ಲ. ಅವರ ಮೂವರು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ತಡೆಯೊಡುತ್ತಾರೆ. ಮಾನಭಂಗದ, ಹತ್ಯೆಯ ಬೆದರಿಕೆಗಳು ಬರುತ್ತವೆ. ಆದರೆ ರಂಗರಾಯರು ತಮ್ಮ ನಿಲುವಿನಿಂದ ಕಿಂಚಿತ್ತೂ ಹಿಂದೆ ಸರಿಯುವುದಿಲ್ಲ.

ಶಿಕ್ಷಣದಿಂದ ಮಾತ್ರವೇ ಅಸ್ಪೃಶ್ಯರ ಉದ್ಧಾರವಾಗದು ಎಂದು ರಂಗರಾಯರಿಗೆ ತಿಳಿದಿರುತ್ತದೆ. ದಲಿತರು ಸ್ವತಂತ್ರವಾಗಿ ಬದುಕಲು ಅವಕಾಶ ಕಲ್ಪಿಸುವ ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ. ಹೃದಯವಂತಿಕೆ ಇರುವ ಜಮೀನುದಾರರಿಂದ, ವ್ಯವಹಾರಸ್ಥರಿಂದ ಜಮೀನು, ಧನವನ್ನು ದೇಣಿಗೆಯಾಗಿ ಪಡೆಯುತ್ತಾರೆ. ರಂಗರಾಯರ ಕೆಲಸವನ್ನು ಗಮನಿಸಿದ ಬ್ರಿಟಿಷ್ ಸರಕಾರ ಖಾಲಿ ಬಿದ್ದ ಭೂಮಿಯನ್ನು, ಗೋಮಾಳವನ್ನು ಉಚಿತವಾಗಿ ಕೊಡುತ್ತದೆ. ದೇಶಭಕ್ತ ಕಾರ್ನಾಡು ಸದಾಶಿವರಾಯರು ತಮ್ಮ ಆಸ್ತಿಯ ಕೆಲವು ಅಂಶವನ್ನೂ, ಹಣವನ್ನೂ ಕೊಡುತ್ತಾರೆ. ದಾನವಾಗಿ ಪಡೆದ ಭೂಮಿಯನ್ನು ದಲಿತರಿಗೆ ಉಳಲು, ವಾಸಿಸಲು ಯೋಗ್ಯವಾಗುವಂತೆ ಹಂಚಿಕೆ ಮಾಡುವ ರಂಗರಾಯರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಲಿತರು ಸ್ವಂತ ಅಸ್ತಿಯನ್ನು ಹೊಂದಲು ಕಾರಣರಾಗುತ್ತಾರೆ.

ರಂಗರಾಯರು ಪರಿಶಿಷ್ಟ ಸಮುದಾಯದಲ್ಲಿ ಸ್ವ ಉದ್ಯೋಗವನ್ನು ಪ್ರೋತ್ಸಾಹಿಸುವ ಕೆಲಸದಲ್ಲಿ ತೊಡಗುತ್ತಾರೆ. ಬಡಗಿ ಕೆಲಸ, ತೋಟಗಾರಿಕೆ, ನೇಯ್ಗೆ, ರೇಷ್ಮೆ ಹುಳು ಸಾಕಾಣಿಕೆ ಮತ್ತು ಸಣ್ಣ ಕೈಗಾರಿಕೆಗಳಲ್ಲಿ ತರಬೇತಿ ಕೊಡಿಸಿ ಸ್ವಂತ ಉದ್ಯೋಗಳಲ್ಲಿ ತೊಡಗುವಂತೆ ಮಾಡುತ್ತಾರೆ. ಅವರ ಉತ್ಪತ್ತಿಗೆ ಮಾರುಕಟ್ಟೆ ಮತ್ತು ಅವಶ್ಯವಾದ ಹಣಕಾಸಿನ ನೆರವಿಗಾಗಿ ʼ ಕೋರ್ಟ್ ಹಿಲ್ ಆದಿ ದ್ರಾವಿಡ ಸಂಘ ʼ ಎನ್ನುವ ಸಂಸ್ಥೆಯನ್ನು ಸ್ಥಾಪಿಸುತ್ತಾರೆ. ಯುವಕ, ಯುವತಿಯರಿಗೆ ಸಣ್ಣ ಕೈಗಾರಿಕೆಯಲ್ಲಿ, ಕುಶಲ ಕರ್ಮಗಳಲ್ಲಿ ಪರಿಣತಿ ನೀಡುವ ಉದ್ದೇಶದಿಂದ ಐಟಿಐಯ ಸ್ಥಾಪನೆಯೂ ಆಗುತ್ತದೆ.

ಅಸ್ಪೃಶ್ಯರ ಸಮಗ್ರ ಏಳಿಗೆಯಾಗಬೇಕಾದರೆ ರಾಜಕೀಯದಲ್ಲೂ ಅವಕಾಶ ಇರಬೇಕೆನ್ನುವುದು ಅವರ ನಿಲುವಾಗಿತ್ತು. ಪರಿಶಿಷ್ಟರಿಗೆ ಮೀಸಲಾತಿ ನೀಡಬೇಕೆಂದು ಹೋರಾಟ ನಡೆಸುತ್ತಾರೆ. ಇದರ ಫಲವಾಗಿ ಅವರ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಅಂಗಾರ ಮಾಸ್ತರ್ ಜಿಲ್ಲಾ ಬೋರ್ಡ್ ಗೆ ನೇಮಕಗೊಳ್ಳುತ್ತಾರೆ. ಪ್ರತಿಷ್ಠಿತ ಮಂಗಳೂರು ಮುನಿಸಿಪಾಲಿಟಿಯಲ್ಲಿ ದಲಿತರಾದ ಗೋವಿಂದ ಮಾಸ್ತರ್ ಸದಸ್ಯತ್ವ ಪಡೆಯುತ್ತಾರೆ.
ದಲಿತರ, ತಳ ಸಮುದಾಯದರ ಏಳಿಗೆಗಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನೂ ಮಾಡಿದ ರಂಗರಾಯರು ತನಗಾಗಿ ಏನನ್ನೂ ಬಯಸಿದವರಲ್ಲ. ಆಗಿನ ಬ್ರಿಟಿಷ್ ಸರಕಾರ ರಂಗರಾಯರು ದೀನ ದಲಿತರಿಗೆ ಮಾಡಿದ ಕೆಲಸವನ್ನು ಗುರುತಿಸಿ ʼ ರಾವ್ ಬಹದ್ದೂರ್ ʼ ಬಿರುದನ್ನೂ ಪದಕ, ಪ್ರಮಾಣ ಪತ್ರಗಳನ್ನೂ ಕೊಟ್ಟು ಅವರನ್ನು ಗೌರವಿಸುತ್ತದೆ. ಈ ಬಿರುದು. ಪ್ರಮಾಣ ಪತ್ರಗಳು ಹೆಮ್ಮೆ, ಅಹಂಕಾರಗಳಿಗೆ ಕಾರಣವಾಗುತ್ತದೆಂದು ಅವೆಲ್ಲವನ್ನೂ ಬೆಂಕಿಗೆ ಹಾಕಿ ನಿಶ್ಚಿಂತರಾಗಿ ಉಳಿದ ಮಹನೀಯರು ಅವರು.

“ನಾನು ಬದುಕಿರುವಾಗಲೇ ನನ್ನ ಶಾಲೆಯಲ್ಲಿ ಕಲಿತ ಓರ್ವ ದಲಿತ ಸಮುದಾಯದ ಹುಡುಗ ಪದವೀಧರನಾಗಿ ಉನ್ನತ ಉದ್ಯೋಗ ಹೊಂದಿ, ಅವನದೇ ಆದ ಮೋಟಾರು ವಾಹನದಲ್ಲಿ ನಮ್ಮೂರ ರಸ್ತೆಯಲ್ಲಿ ಹೋಗುತ್ತಿರುವಾಗ ರಸ್ತೆಯಲ್ಲಿ ಎದ್ದ ಧೂಳು ನನ್ನ ತಲೆಗೆ ತಾಕಿದರೆ ನನ್ನ ಜನ್ಮ ಸಾರ್ಥಕ” ಎಂದು ಹೇಳುತ್ತಿದ್ದ ಅವರಿಗೆ ದಲಿತರ ಸರ್ವತೋಮುಖ ಏಳಿಗೆಯ ಕನಸಿತ್ತು.

ಕುದ್ಮಲ್ ರಂಗರಾಯರ ಕನಸು ಅವರು ಬದುಕಿದ್ದಾಗ ನೆರವೇರುವುದಿಲ್ಲ. 1928ರ ಜನವರಿ 30ರಂದು ತಮ್ಮ ಅರವತೊಂಬತ್ತನೇ ವಯಸ್ಸಲ್ಲಿ ಅವರು ತೀರಿಕೊಂಡ ಎರಡು ವರ್ಷಗಳ ಬಳಿಕ ಅವರ ಸಂಸ್ಥೆಯಲ್ಲಿ ಓದಿದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಯೊಬ್ಬ ಪದವೀಧರನಾಗಿ ಉನ್ನತ ಉದ್ಯೋಗವನ್ನು ಪಡೆಯುತ್ತಾನೆ.

ಜಡ್ಡುಗಟ್ಟಿದ ಸಮಾಜ

ಕುದ್ಮಲ್ ರಂಗರಾಯರು ತಮ್ಮ ಬದುಕಿನುದ್ದಕ್ಕೂ ಅಸಮಾನತೆಯ, ಅಸ್ಪೃಶ್ಯತೆಯ ವಿರುದ್ಧ ಹೋರಾಟ ಮಾಡಿದರು. ಅದರಿಂದ ಕಷ್ಟ, ನಷ್ಟಗಳನ್ನು ಅನುಭವಿಸಿ ಸಮಾಜದ ಅಸಹನೆಗೂ ಗುರಿಯಾದರು. ಆದರೆ ತಾನು ಕನಸಿದ ಸಮಾಜವನ್ನು ಅವರಿಗೆ ಕಾಣಲಾಗಲಿಲ್ಲ. ಅವರ ನಂತರವಾದರೂ ಅವರ ಆಶೋತ್ತರಗಳು ನೆರವೇರಿದವೇ ? ಎಂದು ನಾವು ಯೋಚಿಸಬೇಕಾಗಿದೆ.

ಅವರು ಹೋರಾಟ ಆರಂಭಿಸಿ ಸುಮಾರು ಹದಿನಾಲ್ಕು ದಶಕಗಳು ಕಳೆದಿವೆ. ಆದರೆ ತಾರತಮ್ಯಗಳು ಅಳಿದಿಲ್ಲ. ದುಃಸ್ವಪ್ನದಂತೆ ಹೊಸ ಹೊಸ ರೀತಿಯಲ್ಲಿ ಸಮಾಜದಲ್ಲಿ ವೈಷಮ್ಯಗಳು ಹೆಚ್ಚುತ್ತಿವೆ. ಜನರ ಉಡುಗೆ ತೊಡುಗೆಗಳಲ್ಲಿ, ರಸ್ತೆ, ಕಟ್ಟಡಗಳ ರಚನೆಯಲ್ಲಿ ಬದಲಾವಣೆ ಕಂಡು ಬಂದರೂ ಸಮಾಜದ ರೀತಿನೀತಿಗಳಲ್ಲಿ, ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣುವ ದೃಷ್ಟಿಯಲ್ಲಿ ಪರಿವರ್ತನೆಯಾಗಿದ್ದು ಕಡಿಮೆ.

ದಲಿತರಿಗೆ, ಕೊರಗರಿಗೆ ಕುದ್ಮಲ್ ರಂಗರಾಯರು ಕೊಡಿಸಿದ ಸೈಟ್ ಗಳು, ಉಳುಮೆಯ ಭೂಮಿ ಪರರ ಸೊತ್ತಾಗಿದೆ. ಹಲವು ಆಮಿಷ, ಬೆದರಿಕೆಗಳನ್ನು ಒಡ್ಡಿ ಅದನ್ನು ಅವರಿಂದ ವಶ ಪಡಿಸಿಕೊಳ್ಳಲಾಗಿದೆ. ನಾವೆಲ್ಲಾ ಒಂದೇ ಎನ್ನುವ ತೋರ್ಪಡಿಕೆ ಕೇವಲ ಬೂಟಾಟಿಕೆಯಾಗಿದೆ. ಇತ್ತೀಚೆಗೆ ಕೊರಗ ಸಮುದಾಯದವರು ಮೆರವಣಿಗೆಯಲ್ಲಿ ತೆರಳಿ ತಮ್ಮ ಹಕ್ಕುಗಳಿಗಾಗಿ ಬೇಡಿಕೆ ಸಲ್ಲಿಸಿ, ಹೋರಾಟದ ಸೂಚನೆ ನೀಡಿದುದು ಇದಕ್ಕೆ ಸಾಕ್ಷಿ.

ಮಂಗಳೂರಿನ ನಂದಿಗುಡ್ಡೆಯಲ್ಲಿ ರಂಗರಾಯರ ಸಮಾಧಿಯಿದೆ. ಅದನ್ನು ಮಂಗಳೂರಿನವರು ಮರೆತೇ ಬಿಟ್ಟಿದ್ದಾರೆ. ರಂಗರಾಯರ ಬಗ್ಗೆ ತಿಳಿದಿರುವ ಕೆಲವರು ಅಪರೂಪಕ್ಕೆ ಹೋಗಿ ಬರುವುದುಂಟು. ಅವರ ಆದರ್ಶಗಳಿಗೆ, ಮಾಡಿದ ಕೆಲಸ ಕಾರ್ಯಗಳಿಗೆ, ಸಮಾನತೆಯ ಸಮಾಜದ ಕನಸಿಗೆ ಸಮಾಧಿ ಕಟ್ಟಿರುವಾಗ ಇದೇನು ದೊಡ್ಡ ವಿಷಯವಲ್ಲ!

  • ಎಂ.ನಾಗರಾಜ ಶೆಟ್ಟಿ

You cannot copy content of this page

Exit mobile version