ಕುವೈಟ್ ಎಂಡ್‌ಪಾಯಿಂಟ್: ಗಲ್ಫ್ ವಲಯದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ತಾರಕಕ್ಕೇರಿದೆ. ಬುಧವಾರ ಕುವೈಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು (Kuwait International Airport) ಗುರಿಯಾಗಿಸಿಕೊಂಡು ಇರಾನ್ ಪಡೆಗಳು ನಡೆಸಿದ ಭೀಕರ ಡ್ರೋನ್ ಮತ್ತು ಕ್ಷಿಪಣಿ ದಾಳಿಯಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ದುರ್ಮರಣಕ್ಕೀಡಾಗಿದ್ದಾರೆ.
ಈ ಭೀಕರ ದಾಳಿಯಲ್ಲಿ ಕನಿಷ್ಠ 63 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಕುವೈಟ್ ದೇಶದ ಮಿಲಿಟರಿ ಮೂಲಗಳು ದೃಢಪಡಿಸಿವೆ.
ಮೃತಪಟ್ಟ ವ್ಯಕ್ತಿ ಭಾರತೀಯ ಪ್ರಜೆಯಾಗಿದ್ದು, ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ (Indian Embassy) ಈ ವಿಷಯವನ್ನು ಖಚಿತಪಡಿಸಿದೆ. ಮೃತರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ನೆರವು ನೀಡಲಾಗುತ್ತಿದೆ ಎಂದು ರಾಯಭಾರ ಕಚೇರಿ ಪ್ರಕಟಿಸಿದೆ.
ಇರಾನ್‌ನ ಗೆರುಕ್ ಮತ್ತು ಖೇಶ್ಮ್ ದ್ವೀಪಗಳ ಮೇಲಿನ ಅಮೆರಿಕದ ಇತ್ತೀಚಿನ ವಾಯುದಾಳಿಗಳಿಗೆ ಪ್ರತಿಕಾರವಾಗಿ ಇರಾನ್ ಈ ದಾಳಿ ನಡೆಸಿದೆ ಎನ್ನಲಾಗಿದೆ. ಕುವೈಟ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳು ಹಾಗೂ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಇರಾನ್ ಪಡೆಗಳು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಕಾಮಿಕಾಜೆ ಡ್ರೋನ್‌ಗಳ ಮೂಲಕ ಈ ದಾಳಿ ನಡೆಸಿವೆ.
ಈ ಭೀಕರ ದಾಳಿಯಿಂದಾಗಿ ಕುವೈತ್ ವಿಮಾನ ನಿಲ್ದಾಣದ ಟರ್ಮಿನಲ್-1 (Terminal 1) ಭವನಕ್ಕೆ ಅತ್ಯಂತ ಭಾರಿ ಪ್ರಮಾಣದ ಹಾನಿಯಾಗಿದೆ. ರನ್‌ವೇ ಮತ್ತು ಪಾರ್ಕಿಂಗ್ ಪ್ರದೇಶಗಳಲ್ಲಿ ಅವಶೇಷಗಳು ಮತ್ತು ಬೆಂಕಿ ಕಾಣಿಸಿಕೊಂಡ ಸಾಮಾಜಿಕ ಮಾಧ್ಯಮಗಳ ದೃಶ್ಯಗಳು ಪರಿಸ್ಥಿತಿಯ ಗಂಭೀರತೆಯನ್ನು ಬಿಂಬಿಸುತ್ತಿವೆ.
ದಾಳಿಯ ಬೆನ್ನಲ್ಲೇ ಕುವೈತ್ ನಾಗರಿಕ ವಿಮಾನಯಾನ ಪ್ರಾಧಿಕಾರವು ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ, ಎಲ್ಲಾ ವಾಣಿಜ್ಯ ವಿಮಾನಗಳ ಸಂಚಾರವನ್ನು ತಕ್ಷಣವೇ ಸ್ಥಗಿತಗೊಳಿಸಿತು.
ಕುವೈತ್‌ಗೆ ಬರಬೇಕಿದ್ದ ಹಲವಾರು ಅಂತರರಾಷ್ಟ್ರೀಯ ವಿಮಾನಗಳನ್ನು ನೆರೆಹೊರೆಯ ಸುರಕ್ಷಿತ ವಲಯಗಳಿಗೆ ತಿರುಗಿಸಲಾಗಿದೆ. ತದನಂತರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಟರ್ಮಿನಲ್-4 ರ ಮೂಲಕ ಕೆಲವು ವಿಮಾನ ಸೇವೆಗಳನ್ನು ಭಾಗಶಃ ಪುನರಾರಂಭಿಸಲಾಗಿದೆ.
ಇರಾನ್‌ನ ಈ ಕೃತ್ಯವನ್ನು ಕುವೈತ್ ರಕ್ಷಣಾ ಸಚಿವಾಲಯದ ವಕ್ತಾರ ಬ್ರಿಗೇಡಿಯರ್ ಜನರಲ್ ಸೌದ್ ಅಬ್ದುಲ್ ಅಜೀಜ್ ಅಲ್-ಅತ್ವಾನ್ ಕಠಿಣ ಪದಗಳಲ್ಲಿ ಖಂಡಿಸಿದ್ದು, ಇದು ಕೃಮಿನಲ್ ಆಕ್ರಮಣಶೀಲತೆ ಎಂದು ಕರೆದಿದ್ದಾರೆ. ಇತ್ತ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಈ ದಾಳಿಯನ್ನು ಉದ್ದೇಶಪೂರ್ವಕ ಮತ್ತು ಅಸಮರ್ಥನೀಯ ಎಂದು ಬಣ್ಣಿಸಿದೆ.
ಗಲ್ಫ್ ವಲಯದಲ್ಲಿ ಏಪ್ರಿಲ್ 8 ರಂದು ಜಾರಿಗೆ ಬಂದಿದ್ದ ಕದನ ವಿರಾಮ ಒಪ್ಪಂದದ ನಂತರ ನಡೆದ ಮೊದಲ ಭೀಕರ ಮತ್ತು ಪ್ರಾಣಾಪಾಯ ಉಂಟುಮಾಡಿದ ದಾಳಿ ಇದಾಗಿದೆ. ಇದರಿಂದಾಗಿ ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ಭೀತಿ ಆವರಿಸಿದೆ.
