ಹಾಸನ: ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವದ ಖರ್ಚು-ವೆಚ್ಚದ ವಿವರಗಳನ್ನು ಗಮನಿಸಿ ಬೆಚ್ಚಿಬಿದ್ದಿದ್ದೇನೆ. ಜಾತ್ರೆಯ ಹೆಸರಿನಲ್ಲಿ ಹತ್ತಾರು ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆದರೆ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನಾಂಬ ಜಾತ್ರಾ ಮಹೋತ್ಸವದ ಖರ್ಚು-ವೆಚ್ಚದ ವಿವರಗಳನ್ನು ಓದಿ ಪ್ರಶ್ನೆಗಳ ಸುರಿಮಳೆಗೈದರು. ದೇವಸ್ಥಾನದ ಟೆಂಡರ್ಗಳನ್ನು ಪದೇಪದೇ ಒಬ್ಬರಿಗೇ ನೀಡಲಾಗುತ್ತಿದೆ. ಟೆಂಡರ್ನಲ್ಲಿ ಭಾಗವಹಿಸಲು ಮುಂದಾಗುವ ಇತರರಿಗೆ ಬೆದರಿಕೆ ಹಾಕಿ, ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದರು.
ಜಿಲ್ಲಾಡಳಿತವು ಗುತ್ತಿಗೆದಾರರನ್ನು ಕೂರಿಸಿಕೊಂಡು ಟೆಂಡರ್ ಕರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲ ವಿಚಾರಗಳ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ತನಿಖೆ ನಡೆಸುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ಟೆಂಡರ್ ಪ್ರಕ್ರಿಯೆಯಲ್ಲಿನ ಅಕ್ರಮಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದ ಸಭೆಗಳಿಗೆ ಪತ್ರಕರ್ತರನ್ನು ಹೊರಗಿಟ್ಟು ಗುತ್ತಿಗೆದಾರರನ್ನು ಕೂರಿಸಿಕೊಂಡು ಸಭೆ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೆ, ನಮಗೆ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆಯನ್ನೂ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
