ಲೇಹ್: ಲಡಾಖ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಘಟನೆಗಳಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದು, 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆಂದೋಲನಕಾರರು ಲಡಾಖ್‌ನಲ್ಲಿರುವ ಬಿಜೆಪಿ ಕಚೇರಿ ಮತ್ತು ಹಿಲ್ ಕೌನ್ಸಿಲ್‌ನ ಕಚೇರಿಗೂ ಬೆಂಕಿ ಹಚ್ಚಿದ್ದಾರೆ.
ಈ ಅಶಾಂತಿಯ ಹಿಂದೆ ಕಾಂಗ್ರೆಸ್‌ನ ಪಿತೂರಿ ಇದೆ ಎಂದು ಆರೋಪಿಸಿರುವ ಬಿಜೆಪಿ, ಕಾಂಗ್ರೆಸ್ ಕೌನ್ಸಿಲರ್ ಪುಂಟ್ಸೋಗ್ ಸ್ಟಾಂಜಿನ್ ತ್ಸೆಪಾಂಗ್ ಪ್ರತಿಭಟನೆಗಳಲ್ಲಿ ಭಾಗವಹಿಸಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ಬಿಜೆಪಿ ಸಂಸದ ಸಂಬಿತ್ ಪಾತ್ರ ಮಾತನಾಡಿ, “ಲಡಾಖ್‌ನಲ್ಲಿ ನಡೆದ ಪ್ರತಿಭಟನೆಗಳನ್ನು ‘ಜನ್ ಝಡ್’ (ಜನರೇಷನ್ ಝಡ್) ಪ್ರತಿಭಟನೆ ಎಂದು ಬಿಂಬಿಸಲು ಯತ್ನಿಸಲಾಯಿತು. ಆದರೆ ತನಿಖೆಯಿಂದ ಇದು ಕಾಂಗ್ರೆಸ್ ಪ್ರೇರಿತ ಪ್ರತಿಭಟನೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಕೌನ್ಸಿಲರ್ ಪುಂಟ್ಸೋಗ್ ಸ್ಟಾಂಜಿನ್ ತ್ಸೆಪಾಂಗ್ ಈ ಗಲಭೆಗಳಲ್ಲಿ ಭಾಗವಹಿಸಿದ್ದಾರೆ. ಅವರ ಮತ್ತು ಕಾರ್ಯಕರ್ತರ ಹಿಂಸೆಯನ್ನು ಪ್ರಚೋದಿಸುತ್ತಿರುವ ಅನೇಕ ಫೋಟೊಗಳು ನಮ್ಮ ಗಮನಕ್ಕೆ ಬಂದಿವೆ. ಅವರು ಕೈಯಲ್ಲಿ ಆಯುಧ ಹಿಡಿದು ಬಿಜೆಪಿ ಕಚೇರಿಯತ್ತ ಧಾವಿಸುತ್ತಿರುವ ಫೋಟೊಗಳು ಬಹಿರಂಗವಾಗಿವೆ. ಗುಂಪನ್ನು ಪ್ರಚೋದಿಸಿ ಬಿಜೆಪಿ ಕಚೇರಿಯನ್ನು ಗುರಿಯಾಗಿಸಿಕೊಂಡಿದ್ದಾರೆ” ಎಂದು ಹೇಳಿದರು.
ಬಿಜೆಪಿ ಪ್ರದರ್ಶಿಸಿದ ಫೋಟೊಗಳು ಮತ್ತು ವಿಡಿಯೊಗಳ ಆಧಾರದ ಮೇಲೆ, ಸ್ಥಳೀಯ ಪೊಲೀಸರು ತ್ಸೆಪಾಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.