ಪಹಲ್ಗಾಮ್: ದೇಶಾದ್ಯಂತ ಸಂಚಲನ ಮೂಡಿಸಿದ ಪಹಲ್ಗಾಮ್ ಉಗ್ರರ ದಾಳಿ ಪ್ರಕರಣದ ತನಿಖೆ ಮುಂದುವರಿದಿದೆ. ಈ ತನಿಖೆಯ ವೇಳೆ ಇದೀಗ ಒಂದು ಪ್ರಮುಖ ಅಂಶ ಬೆಳಕಿಗೆ ಬಂದಿದೆ.
ಉಗ್ರರು ದಾಳಿಗೆ ಅಗತ್ಯವಿರುವ ವಸ್ತುಗಳನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಸಿದ್ದಾರೆ ಎಂದು ತನಿಖಾ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಉಗ್ರರಿಗೆ ನೆರವು ನೀಡಿದ ಓರ್ವ ಓವರ್ ಗ್ರೌಂಡ್ ವರ್ಕರ್‌ನನ್ನು (OGW) ಬಂಧಿಸಲಾಗಿದೆ. ಈ ವ್ಯಕ್ತಿಯನ್ನು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ನಿವಾಸಿ ಮೊಹಮ್ಮದ್ ಯೂಸುಫ್ ಕಟಾರಿ (26) ಎಂದು ಗುರುತಿಸಲಾಗಿದೆ.
ತನಿಖೆಯಲ್ಲಿ ಬಯಲಾದ ವಿಷಯಗಳು:
ಈ ವರ್ಷದ ಏಪ್ರಿಲ್ 22 ರಂದು ‘ಮಿನಿ ಸ್ವಿಟ್ಜರ್ಲೆಂಡ್’ ಎಂದು ಕರೆಯಲ್ಪಡುವ ಬೈಸರಾಸ್ ಕಣಿವೆಯಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಈ ದಾಳಿಯನ್ನು ನಡೆಸಿದ ಮೂವರು ಉಗ್ರರನ್ನು ಜುಲೈ 29 ರಂದು ‘ಆಪರೇಷನ್ ಮಹಾದೇವ್’ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಹತ್ಯೆ ಮಾಡಿದ್ದವು.
ಈ ಕಾರ್ಯಾಚರಣೆಯ ನಂತರ, ಎನ್‌ಕೌಂಟರ್ ನಡೆದ ಸ್ಥಳದಿಂದ ಮೂರು ಮೊಬೈಲ್ ಚಾರ್ಜರ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ತಾಂತ್ರಿಕ ಪರಿಶೀಲನೆಯಲ್ಲಿ ಈ ಮೂರು ಚಾರ್ಜರ್‌ಗಳಲ್ಲಿ ಒಂದು ಮೊಬೈಲ್ ಫೋನ್‌ನೊಂದಿಗೆ ಬಂದಿರುವುದು ತಿಳಿದುಬಂದಿದೆ. ಉಗ್ರರು ತಮ್ಮ ಹ್ಯಾಂಡ್ಲರ್‌ಗಳು ಮತ್ತು ಕೆಳಮಟ್ಟದ ಕಾರ್ಯಕರ್ತರೊಂದಿಗೆ ಸಂವಹನ ನಡೆಸಲು ಈ ಚಾರ್ಜರ್‌ಗಳನ್ನು ಆನ್‌ಲೈನ್ ವೇದಿಕೆಯ ಮೂಲಕ ಖರೀದಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ವಿಚಾರಣೆ ವೇಳೆ, ಈ ಚಾರ್ಜರ್ ಅನ್ನು ತಾನೇ ಉಗ್ರರಿಗೆ ತಲುಪಿಸಿರುವುದಾಗಿ ಕಟಾರಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.