Home ದೇಶ ಲಾಲ್‌ ಕೃಷ್ಣ ಅಡ್ವಾಣಿಗೆ ಭಾರತರತ್ನ: ಪ್ರಧಾನಿ ಮೋದಿ ಘೋಷಣೆ

ಲಾಲ್‌ ಕೃಷ್ಣ ಅಡ್ವಾಣಿಗೆ ಭಾರತರತ್ನ: ಪ್ರಧಾನಿ ಮೋದಿ ಘೋಷಣೆ

0

ದೆಹಲಿ: ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಭಾರತ ರತ್ನ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ನೀಡಿದ್ದಾರೆ. ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ನೀಡಲಾಗುವುದು ಎಂದು ತಿಳಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಮೋದಿ ಬರೆದಿದ್ದಾರೆ. ಅವರೊಂದಿಗೆ ಮಾತನಾಡಿ ಅಭಿನಂದನೆ ಸಲ್ಲಿಸಿದ್ದೇನೆ. ಅವರು ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜಕಾರಣಿ. ದೇಶದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ. ತಳಮಟ್ಟದಿಂದ ಕೆಲಸ ಆರಂಭಿಸಿ ದೇಶದ ಉಪಪ್ರಧಾನಿ ಹುದ್ದೆಗೆ ತಲುಪಿದ್ದರು ಎಂದೂ ಅವರು ಟ್ವಿಟರ್‌ ಹೇಳಿಕೆಯಲ್ಲಿ ಬರೆದಿದ್ದಾರೆ.

ಜನವರಿ 23ರಂದು, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ (ಮರಣೋತ್ತರ) ನೀಡುವುದಾಗಿ ಘೋಷಿಸಲಾಯಿತು. ಅಧ್ಯಕ್ಷೆ ದ್ರೌಪದಿ ಮುರ್ಮು ಠಾಕೂರ್ ಅವರ 100ನೇ ಜನ್ಮ ವಾರ್ಷಿಕೋತ್ಸವದ ಒಂದು ದಿನ ಮೊದಲು ಜನವರಿ 24ರಂದು ಈ ಘೋಷಣೆ ಮಾಡಿದರು. ಕರ್ಪೂರಿ ಠಾಕೂರ್ ಅವರು ಎರಡು ಬಾರಿ ಬಿಹಾರದ ಮುಖ್ಯಮಂತ್ರಿ ಮತ್ತು ಒಮ್ಮೆ ಉಪ ಮುಖ್ಯಮಂತ್ರಿಯಾಗಿದ್ದರು. ಅವರು ಹಿಂದುಳಿದ ವರ್ಗಗಳ ಹಿತಾಸಕ್ತಿಗಳ ಪ್ರತಿಪಾದನೆಗೆ ಹೆಸರುವಾಸಿಯಾಗಿದ್ದರು.

ಬಿಜೆಪಿಯ ಸ್ಥಾಪಕ ಸದಸ್ಯ, 2015ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ಪಡೆದರು.

ಅಡ್ವಾಣಿಯವರು 8 ನವೆಂಬರ್ 1927ರಂದು ಕರಾಚಿಯಲ್ಲಿ ಜನಿಸಿದರು. 2002 ಮತ್ತು 2004ರ ನಡುವೆ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ 7ನೇ ಉಪಪ್ರಧಾನಿಯಾಗಿದ್ದರು. ಇದಕ್ಕೂ ಮೊದಲು ಅವರು 1998 ಮತ್ತು 2004ರ ನಡುವೆ ಎನ್‌ಡಿಎ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದರು. ಅವರು ಬಿಜೆಪಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರು. 2015ರಲ್ಲಿ ಅವರು ಪದ್ಮವಿಭೂಷಣ ಪಡೆದರು.

  • ಅಡ್ವಾಣಿಯವರ ರಾಜಕೀಯ ಜೀವನವು 1942ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸ್ವಯಂಸೇವಕರಾಗಿ ಪ್ರಾರಂಭವಾಯಿತು.
  • ಅಡ್ವಾಣಿ 1970ರಿಂದ 1972 ರವರೆಗೆ ಜನಸಂಘದ ದೆಹಲಿ ಘಟಕದ ಅಧ್ಯಕ್ಷರಾಗಿದ್ದರು. 1973ರಿಂದ 1977ರವರೆಗೆ ಜನಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು.
  • 1970ರಿಂದ 1989ರವರೆಗೆ ಅವರು ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. ಇದೇ ವೇಳೆ 1977ರಲ್ಲಿ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು.
  • 1977ರಿಂದ 1979ರವರೆಗೆ ಅವರು ಕೇಂದ್ರದಲ್ಲಿ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪಕ್ಷದ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದರು.
  • ಅವರು 1986-91 ಮತ್ತು 1993-98 ಮತ್ತು 2004-05ರಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. 1989ರಲ್ಲಿ, ಅವರು 9ನೇ ಲೋಕಸಭೆಗೆ ದೆಹಲಿಯಿಂದ ಸಂಸದರಾಗಿ ಆಯ್ಕೆಯಾದರು.
  • 1989-91ರಿಂದ ಅವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. 1991, 1998, 1999, 2004, 2009 ಮತ್ತು 2014ರಲ್ಲಿ ಅವರು ಗಾಂಧಿನಗರದಿಂದ ಲೋಕಸಭಾ ಸಂಸದರಾಗಿ ಆಯ್ಕೆಯಾದರು.
  • 1998ರಿಂದ 2004ರವರೆಗೆ NDA ಸರ್ಕಾರದಲ್ಲಿ ಗೃಹ ಸಚಿವರಾಗಿದ್ದರು. ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ 2002ರಿಂದ 2005ರವರೆಗೆ ಉಪ ಪ್ರಧಾನಿಯಾಗಿದ್ದರು.
  • 2015ರಲ್ಲಿ, ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣವನ್ನು ನೀಡಲಾಯಿತು. ಅವರು ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಈ ಗೌರವ ಸ್ವೀಕರಿಸಿದರು.
  • ಬಾಬರಿ ಮಸೀದಿ ದ್ವಂಸದಲ್ಲೂ ಅಡ್ವಾಣಿ ಬಹಳ ಮುಖ್ಯ ಪಾತ್ರ ವಹಿಸುವುದರ ಜೊತೆಗೆ ಈ ಕುರಿತು ದೇಶಾದ್ಯಂತ ರಥಯಾತ್ರೆ ನಡೆಸಿದ್ದರು.
  • ಭಾರತದ ಕೋಮುವಾದಿ ರಾಜಕಾರಣದ ಇತಿಹಾಸದಲ್ಲಿ ಅಡ್ವಾಣಿಯವರದು ಅಚ್ಚಳಿಯದ ಹೆಸರು.

You cannot copy content of this page

Exit mobile version