Friday, June 14, 2024

ಸತ್ಯ | ನ್ಯಾಯ |ಧರ್ಮ

ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳ ಶೂನ್ಯತೆ ತೊಲಗಲಿ; ಆದಷ್ಟು ಬೇಗ ಅರ್ಹರ ಆಯ್ಕೆಯಾಗಲಿ

ಕಳೆದ ಐದು ವರ್ಷಗಳಿಂದ ಅಕಾಡೆಮಿ ಹಾಗೂ ಪ್ರಾಧಿಕಾರಗಳು ಸಂಘ ಪರಿವಾರದ ಸಿದ್ದಾಂತಕ್ಕೆ ಪೂರಕವಾಗಿ ಕೆಲಸ ಮಾಡಿ ಸಾಂಸ್ಕೃತಿಕ ಸಂಸ್ಥೆಗಳನ್ನು ಕೋಮುವಾದೀಕರಣ ಮಾಡಿವೆ. ಈಗ ಆ ಕಳಂಕವನ್ನು ತೊಳೆಯಬೇಕಿದೆ. ಅದಕ್ಕಾಗಿ ಅರ್ಹತೆ ಇರುವ ಅನುಭವಿ ಸಾಧಕರನ್ನು ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನಾಗಿ ಸರಕಾರ ನೇಮಿಸಬೇಕಿದೆ. ಹಾಗೂ ಕನ್ನಡ ಕಲೆ ಭಾಷೆ ಸಂಸ್ಕೃತಿ ಕುರಿತು ಅರಿವು ಮತ್ತು ಕಳಕಳಿ ಇರುವ ಕ್ರಿಯಾಶೀಲ ಸಾಧಕರನ್ನು ಈ ಎಲ್ಲಾ ಸಾಂಸ್ಕೃತಿಕ ಸಂಸ್ಥೆಗಳಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಬೇಕಿದೆಶಶಿಕಾಂತ ಯಡಹಳ್ಳಿ, ಪತ್ರಕರ್ತರು

ಸದ್ಯ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಸಾಧಕರ ಆಯ್ಕೆ ಅಂತಿಮಗೊಂಡಿದೆ. ಘೋಷಣೆ ಮಾಡುವುದು ಬಾಕಿ ಇದೆ. ಅತೀ ಶೀಘ್ರದಲ್ಲಿ ನಿಗಮ ಮಂಡಳಿಗಳಿಗೂ ನೇಮಕಾತಿ ಮಾಡುವುದಾಗಿ ಸರಕಾರ ಹೇಳುತ್ತಿದೆಯಾದರೂ ಎಲ್ಲಿ ಶಾಸಕರಲ್ಲಿ ಅಸಮಾಧಾನ ಭುಗಿಲೇಳುವುದೋ ಎಂಬ ಆತಂಕದಿಂದ ಸರಕಾರ ನಿಗಮ ಮಂಡಳಿಗಳ ಜೇನುಗೂಡಿಗೆ ಕೈಹಾಕಿ ಕಚ್ಚಿಸಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದೆ.

ಆದರೆ ಅಷ್ಟೇನೂ ಅಪಾಯಕಾರಿಯಲ್ಲದ ಅಕಾಡೆಮಿ ಪ್ರಾಧಿಕಾರ ರಂಗಾಯಣಗಳಿಗೆ ಯಾಕೆ ಇನ್ನೂ ಅಧ್ಯಕ್ಷರು ನಿರ್ದೇಶಕರನ್ನು ಆಯ್ಕೆ ಮಾಡುತ್ತಿಲ್ಲ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಹಿಂದಿನ ಸರಕಾರದ ಅವಧಿಯಲ್ಲೇ ಈ ಎಲ್ಲಾ ಸಂಸ್ಥೆಗಳ ಪದಾಧಿಕಾರಿಗಳ ಅವಧಿ ಮುಗಿದಿತ್ತು.‌ಇನ್ನಾರು ತಿಂಗಳಲ್ಲಿ ವಿಧಾನಸಭಾ ಚುನಾವಣೆ ಇದ್ದಿದ್ದರಿಂದ ಕೇಶವಕೃಪಾದಲ್ಲಿ ಸಿದ್ದಗೊಂಡ ಪಟ್ಟಿಯನ್ನು ತಡೆಹಿಡಿದಿದ್ದು ಒಳಿತೇ ಆಯ್ತು. ಆತುರಕ್ಕೆ ಬಿದ್ದು ನೇಮಕ ಮಾಡಿದ್ದಲ್ಲಿ ಕಾಂಗ್ರೆಸ್ ಸರಕಾರ ಬಂದು ಬಿಜೆಪಿಯ ನೇಮಕಾತಿಯನ್ನು ರದ್ದು ಮಾಡುವುದು ಖಾತ್ರಿಯಾಗಿತ್ತು. ಈ ಹಿಂದಿನ ಸರಕಾರಗಳು ಇದನ್ನೇ ಮಾಡುತ್ತಾ ಬಂದಿದ್ದವು. ಆದರೆ ಚುನಾವಣೆಯೂ ಮುಗಿದು ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದು ಐದು ತಿಂಗಳು ಕಳೆದರೂ ಸಂಸ್ಕೃತಿ ಸಚಿವಾಲಯ ದಿವ್ಯಮೌನಕ್ಕೆ ಶರಣಾಗಿದೆ, ಅನೇಕಾನೇಕ ಆಕಾಂಕ್ಷಿಗಳಿಗೂ ನಿರಾಸೆಯಾಗಿದೆ. “ಯಾರನ್ನಾದರೂ ಆಯ್ಕೆ ಮಾಡಿ ಆದರೆ ಬೇಗನೇ ಮಾಡಿ” ಎಂದು ಸರಕಾರವನ್ನು ಒತ್ತಾಯಿಸುವ ಸ್ಥಿತಿ ಸಾಂಸ್ಕೃತಿಕ ಲೋಕದವರದ್ದಾಗಿದೆ.

ಹಾಗಂತ ಗ್ಯಾರಂಟಿಗಳ ಗುಂಗಿನಿಂದ ಹೊರಬಂದಿರುವ ಸರಕಾರವೇನೂ ಸುಮ್ಮನೇ ಕುಳಿತಿಲ್ಲ. ಅಕಾಡೆಮಿ ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಕಾತಿ ಮಾಡಲೆಂದೇ ಸಲಹಾ ಸಮಿತಿಯೊಂದನ್ನು ಗೌಪ್ಯವಾಗಿ ರಚನೆ ಮಾಡಿದೆ. ಆ ಆಯ್ಕೆ ಮಂಡಳಿಯಲ್ಲಿ ಮಾನ್ಯ ಕಾ.ತ.ಚಿಕ್ಕಣ್ಣ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ಮರುಳಸಿದ್ದಪ್ಪ, ಪ್ರೊ. ಅರವಿಂದ ಮಾಲಗತ್ತಿ, ಎಚ್‌ ಎಲ್‌ ಪುಷ್ಪಾ ಮುಂತಾದವರು ಇದ್ದಾರೆಂದು ಸುದ್ದಿಯಾಗಿದೆ. ಈಗಾಗಲೇ ಎರಡ್ಮೂರು ಸಭೆಗಳೂ ಆಗಿದ್ದು ಸಂಭಾವ್ಯರ ಪಟ್ಟಿಯೂ 1:2 ಅನುಪಾತದಲ್ಲಿ ಸಿದ್ದವಾಗಿದೆಯಂತೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುಪರ್ದಿಯಲ್ಲಿರುವ ಒಟ್ಟು 14 ಅಕಾಡೆಮಿಗಳು, 4 ಪ್ರಾಧಿಕಾರಗಳು, 24 ಪ್ರತಿಷ್ಠಾನಗಳು, ಹಾಗೂ 6 ರಂಗಾಯಣಗಳಿಗೆ ಅಧ್ಯಕ್ಷರುಗಳು, ನಿರ್ದೇಶಕರುಗಳು ಹಾಗೂ ಸದಸ್ಯರುಗಳನ್ನು ಆಯ್ಕೆ ಮಾಡಬೇಕಿದೆ. ಆಕಾಂಕ್ಷಿಗಳೂ ಬೇಕಾದಷ್ಟಿದ್ದಾರೆ. ಲಾಬಿ, ಶಿಪಾರಸ್ಸುಗಳ ಭರಾಟೆಯೂ ಜೋರಾಗಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಹೆಸರನ್ನೇ ಪರಿಗಣಿಸಬೇಕೆಂಬ ಒತ್ತಾಯವೂ ಪಕ್ಷದೊಳಗೆ ಸದ್ದು ಮಾಡಿದೆ.

ಈ ಹಿಂದೆ ಬಿಜೆಪಿ ಸಹ ಬಹುತೇಕ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ಹಾರ್ಡ್ ಕೋರ್ ಸಂಘ ಪರಿವಾರದ ಕಾರ್ಯಕರ್ತರನ್ನೇ ಆಯ್ಕೆ ಮಾಡಿ ಸಾಂಸ್ಕೃತಿಕ ಲೋಕವನ್ನು ಕೋಮುವಾದೀಕರಣ ಮಾಡಿತ್ತು. ಅದೇ ರೀತಿ ಕಾಂಗ್ರೆಸ್ ಪಕ್ಷದ ಪರವಾಗಿರುವವರನ್ನೇ ಪದಾಧಿಕಾರಿಯಾಗಿ ಪರಿಗಣಿಸಬೇಕು ಎನ್ನುವ ರಾಜಕೀಯ ಒತ್ತಡವೂ ಇದೆ. ಕಾಂಗ್ರೆಸ್ ಕಾರ್ಯಕರ್ತರನ್ನೇ ಆಯ್ಕೆ ಮಾಡುವುದಾಗಿ ಡಿಸಿಎಂ ಡಿಕೆಶಿ ಯವರು ಹೇಳಿದ್ದಾರೆ. ಪ್ರತಿಭೆ ಅರ್ಹತೆ ಸಾಧನೆಯನ್ನು ಬಿಟ್ಟು ಈ ಮಾನದಂಡದಲ್ಲಿ ನೇಮಕಾತಿಗಳು ಆಗಿದ್ದೆ ಆದಲ್ಲಿ ಅದಕ್ಕಿಂತ ದುರಂತ ಬೇರೆ ಏನಿಲ್ಲ. ಯಾಕೆಂದರೆ ಅಕಾಡೆಮಿ ಪ್ರಾಧಿಕಾರಗಳು ರಾಜಕೀಯ ಕಾರ್ಯಕರ್ತರ ಗಂಜೀ ಕೇಂದ್ರಗಳೂ ಅಲ್ಲಾ, ಆಶ್ರಯ ತಾಣಗಳಂತೂ ಮೊದಲೇ ಅಲ್ಲ. ಆಡಳಿತ ಪಕ್ಷದ ಮರ್ಜಿಯಂತೆಯೇ ಆಯ್ಕೆ ಪ್ರಕ್ರಿಯೆ ನಡೆಯುವ ಕ್ರಮಕ್ಕೆ ಬುದ್ದಿಜೀವಿಗಳ ಸಲಹಾ ಸಮಿತಿ ಬ್ರೇಕ್ ಹಾಕಬಹುದು ಎನ್ನುವ ಆಶಾಭಾವವೂ ಇದೆ. ಆಯ್ಕೆ ಪಟ್ಟಿ ಬಿಡುಗಡೆಯಾದ ಮೇಲೆ ಎಲ್ಲವೂ ಬಯಲಾಗುತ್ತದೆ.

ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಮುಖ್ಯಸ್ಥರ ನೇಮಕಾತಿಯನ್ನು ಸಲಹಾ ಸಮಿತಿಯ ಶಿಪಾರಸ್ಸನ್ನು ಆಧರಿಸಿ ಸರಕಾರ ಮಾಡಬಹುದಾಗಿದೆ. ಆದರೆ ರಂಗಾಯಣಕ್ಕೆ ಹಾಗೆ ನೇರವಾಗಿ ಆಯ್ಕೆ ಮಾಡುವಂತಿಲ್ಲ. ಮೊದಲು ರಂಗಸಮಾಜಕ್ಕೆ ಸದಸ್ಯರನ್ನು ಆಯ್ಕೆ ಮಾಡಬೇಕು. ಆ ಸದಸ್ಯರುಗಳು ಸಂಸ್ಕೃತಿ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಪ್ರತಿ ರಂಗಾಯಣಕ್ಕೂ 1:3 ಅನುಪಾತದಲ್ಲಿ ನಿರ್ದೇಶಕರಾಗುವವರ ಹೆಸರನ್ನು ಸಾಧನೆಯ ವಿವರಗಳೊಂದಿಗೆ ಸೂಚಿಸಬೇಕು. ಆ ಪಟ್ಟಿಯನ್ನು ಮುಖ್ಯಮಂತ್ರಿಗಳು ಪರಿಶೀಲಿಸಿ ಅಂತಿಮ ಆಯ್ಕೆ ಮಾಡಬೇಕು. ಬಿಜೆಪಿ ಸರಕಾರದಲ್ಲೂ ರಂಗ ಸಮಾಜಕ್ಕೆ ಸದಸ್ಯರುಗಳನ್ನು ನಾಮಕಾವಸ್ತೆ ನೇಮಕ ಮಾಡಲಾಗಿತ್ತು. ಆದರೆ ಆ ಸಮಾಜದ ಸದಸ್ಯರ ಅಭಿಪ್ರಾಯ ಅನಿಸಿಕೆಗಳನ್ನು ಪರಿಗಣಿಸದೇ, ರಂಗ ಸಮಾಜದ ಅಸ್ತಿತ್ವವನ್ನೇ ಕಡೆಗಣಿಸಿ ಎಲ್ಲಾ ರಂಗಾಯಣಗಳಿಗೂ ಸಂಘಿ ಕಾರ್ಯಕರ್ತರನ್ನು ಹಾಗೂ ಸಮರ್ಥಕರನ್ನು ಕೇಶವಕೃಪಾದ ಕೃಪೆಗೆ ತಕ್ಕಂತೆ ನಿರ್ದೇಶಕರನ್ನಾಗಿ ಸರಕಾರವೇ ನೇರವಾಗಿ ಆಯ್ಕೆ ಮಾಡಿತ್ತು. ಇದರಿಂದಾಗಿ ಅಡ್ಡಂಡ ಕಾರ್ಯಪ್ಪನಂತಹ ಹಾರ್ಡ್ ಕೋರ್ ಮತಾಂಧ ಮೈಸೂರು ರಂಗಾಯಣವನ್ನು ಕೋಮು‌ ಕೇಂದ್ರವಾಗಿಸಲು ಸಾಧ್ಯವಾಯಿತು. ಉರಿಗೌಡ ನಂಜೇಗೌಡರಂತಹ ಕಾಲ್ಪನಿಕ ವ್ಯಕ್ತಿಗಳು ಐತಿಹಾಸಿಕ ರೂಪ ತಾಳಿ ತಲ್ಲಣ ಸೃಷ್ಟಿಯಾಯ್ತು. ಪೊಲೀಸ್ ಸರ್ಪಗಾವಲಿನಲ್ಲಿ ರಂಗಾಯಣದ ನಾಟಕ ಪ್ರದರ್ಶಿಸುವ ದುರಂತಕ್ಕೆ ಈ ನಾಡು ಸಾಕ್ಷಿಯಾಯಿತು.

ಬಿಜೆಪಿ ಸರಕಾರದ ಇಂತಹ ಕೆಟ್ಟ ಮಾದರಿಯನ್ನು ಕಾಂಗ್ರೆಸ್ ಸರಕಾರ ಅನುಕರಿಸದೇ ಮೊದಲು ಅರ್ಹತೆ ಇರುವವರನ್ನು, ವೈಚಾರಿಕ ಪ್ರಜ್ಞೆ ಇರುವಂತವರನ್ನು, ರಂಗಭೂಮಿಯ ಹೊಳಹೊರಗು ಗೊತ್ತಿರುವಂತವರನ್ನು ರಂಗಸಮಾಜಕ್ಕೆ ಸದಸ್ಯರನ್ನಾಗಿ ಆಯ್ಕೆ ಮಾಡಬೇಕಿದೆ. ಈ ರಂಗಸಮಾಜದ ಸದಸ್ಯರುಗಳು ಎಡಬಲ ಸಿದ್ದಾಂತಗಳ ಧಾವಂತ ಮೀರಿ ರಂಗಸಿದ್ದಾಂತವನ್ನು ಸಮರ್ಥವಾಗಿ ಮುನ್ನಡೆಸುವ ರಂಗಕರ್ಮಿಗಳನ್ನು ರಂಗಾಯಣಗಳಿಗೆ ನಿರ್ದೇಶಕರನ್ನಾಗಿ ಆಯ್ಕೆ ಮಾಡಬೇಕಿದೆ. ಆಗ ಮಾತ್ರ ರಂಗಾಯಣಗಳು ಬಿ.ವಿ.ಕಾರಂತರ ಆಶಯದಂತೆ ಜನಪರವಾಗಿ, ಕಲಾತ್ಮಕವಾಗಿ, ಕ್ರಿಯಾಶೀಲವಾಗಿ ಕೆಲಸ ಮಾಡಬಹುದಾಗಿದೆ.

ಅದೇ ರೀತಿ ಕಳೆದ ಐದು ವರ್ಷಗಳಿಂದ ಅಕಾಡೆಮಿ ಹಾಗೂ ಪ್ರಾಧಿಕಾರಗಳು ಸಂಘ ಪರಿವಾರದ ಸಿದ್ದಾಂತಕ್ಕೆ ಪೂರಕವಾಗಿ ಕೆಲಸ ಮಾಡಿ ಸಾಂಸ್ಕೃತಿಕ ಸಂಸ್ಥೆಗಳನ್ನು ಕೋಮುವಾದೀಕರಣ ಮಾಡಿವೆ. ಈಗ ಆ ಕಳಂಕವನ್ನು ತೊಳೆಯಬೇಕಿದೆ. ಅದಕ್ಕಾಗಿ ಅರ್ಹತೆ ಇರುವ ಅನುಭವಿ ಸಾಧಕರನ್ನು ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನಾಗಿ ಸರಕಾರ ನೇಮಿಸಬೇಕಿದೆ. ಹಾಗೂ ಕನ್ನಡ ಕಲೆ ಭಾಷೆ ಸಂಸ್ಕೃತಿ ಕುರಿತು ಅರಿವು ಮತ್ತು ಕಳಕಳಿ ಇರುವ ಕ್ರಿಯಾಶೀಲ ಸಾಧಕರನ್ನು ಈ ಎಲ್ಲಾ ಸಾಂಸ್ಕೃತಿಕ ಸಂಸ್ಥೆಗಳಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಬೇಕಿದೆ. ಜನರ ತೆರಿಗೆ ಹಣದಿಂದ ನಡೆಯುತ್ತಿರುವ ಈ ಎಲ್ಲಾ ಸಂಸ್ಥೆಗಳು ನಾಡು ನುಡಿ ಭಾಷೆ ಕಲೆಗಳ ಉಳಿವು ಹಾಗೂ ಬೆಳವಣಿಗೆಗಾಗಿ ಶ್ರಮಿಸಬೇಕಿದೆ. ಹಾಗಾದಾಗ ಮಾತ್ರ ಆಳುವ ಸರಕಾರಕ್ಕೂ, ಸಂಸ್ಕೃತಿ ಇಲಾಖೆಗೂ ಉತ್ತಮ ಹೆಸರು ಬರಲು ಸಾಧ್ಯ. ಹಾಗಾಗಬೇಕೆಂದರೆ ಆಯ್ಕೆಯ ಸಮಯದಲ್ಲೇ ಸಲಹಾ ಸಮಿತಿ ಹಾಗೂ ಸರಕಾರವು ಮುತುವರ್ಜಿ ವಹಿಸಬೇಕಿದೆ. ಲಾಬಿಕೋರರು, ಶಿಪಾರಸ್ಸುದಾರರು ಹಾಗೂ ಪಕ್ಷದ ಹಿಂಬಾಲಕರನ್ನು ಆಯ್ಕೆ ಮಾಡದೇ ಕ್ರಿಯಾಶೀಲ ವ್ಯಕ್ತಿಗಳನ್ನು ನೇಮಕಾತಿ ಮಾಡುವುದು ಸೂಕ್ತವಾಗಿದೆ.

ಈಗಾಗಲೇ ಆಯ್ಕೆ ಪ್ರಕ್ರಿಯೆ ವಿಳಂಬವಾಗಿದೆ. ಒಂದು ವರ್ಷದಿಂದ ಅಕಾಡೆಮಿ ,ಪ್ರಾಧಿಕಾರಗಳಲ್ಲಿ ಪದಾಧಿಕಾರಿಗಳೇ ಇಲ್ಲದೇ ಸಂಸ್ಕೃತಿ ಕಟ್ಟುವ ಕೆಲಸ ನಿಷ್ಕ್ರಿಯಗೊಂಡಿದೆ. ಕಚೇರಿಯ ನಿರ್ವಹಣೆ ಹಾಗೂ ಸಿಬ್ಬಂದಿಯ ಸಂಬಳವನ್ನು ಸರಕಾರ ಪಾವತಿಸಲೇಬೇಕಿದೆ. ವಿಳಂಬ ಮಾಡಿದಷ್ಟೂ ಆಗುವ ಖರ್ಚು ಆಗುತ್ತಲೇ ಇರುತ್ತದೆಯಾದರೂ ಕೆಲಸ ಶೂನ್ಯವಾಗಿದೆ. ಯೋಗ್ಯತೆ ಇರುವ ಯಾರನ್ನಾದರೂ ಸರಕಾರ ಈ ಎಲ್ಲಾ ಸಾಂಸ್ಕೃತಿಕ ಸಂಸ್ಥೆಗಳಿಗೆ ಆಯ್ಕೆ ಮಾಡಲಿ, ಅದನ್ನು ಆದಷ್ಟು ಬೇಗ ಮಾಡಲಿ. ಸಾಂಸ್ಕೃತಿಕ ಸಂಸ್ಥೆಗಳು ನಿಷ್ಕ್ರಿಯವಾದಷ್ಟೂ ಸಮಾಜದಲ್ಲಿ ಕ್ರಿಯಾಶೀಲ ಕೆಲಸಗಳಿಗೆ ಹಿನ್ನಡೆಯಾಗುತ್ತದೆ. ಕಲೆ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಸರಕಾರಗಳ ಆದ್ಯ ಕರ್ತವ್ಯವಾಗಿದೆ.

ಶಶಿಕಾಂತ ಯಡಹಳ್ಳಿ

ಪತ್ರಕರ್ತರು ಸಾಂಸ್ಕೃತಿಕ ನೀತಿಯ ನಿರ್ಲಕ್ಷ್ಯ ಏಕೆ ?

Related Articles

ಇತ್ತೀಚಿನ ಸುದ್ದಿಗಳು