Home ದೇಶ ನಮಗೆ ನಾವೇ ಆತ್ಮಸಾಕ್ಷಿಯನ್ನು ಕೇಳಿಕೊಂಡು ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸೋಣ

ನಮಗೆ ನಾವೇ ಆತ್ಮಸಾಕ್ಷಿಯನ್ನು ಕೇಳಿಕೊಂಡು ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸೋಣ

0


ಪ್ರಿಯರೇ..

ಮನೆಗೆ ತರಕಾರಿ ತರುವಾಗ ತರಕಾರಿ ಮಾರುಕಟ್ಟೆಯಲ್ಲಿ ಒಂದೊಂದನ್ನೆ ಕೆಡದಂತಹದ್ದನ್ನು ತಾಜಾ ಅನ್ನಿಸುವಂಥದ್ದನ್ನು ಆಯ್ಕೆ ಮಾಡುತ್ತೇವೆ.. ಎಷ್ಟೊಂದು ಮುತುವರ್ಜಿ ವಹಿಸುತ್ತೇವೆ. ತರಕಾರಿಯವರು ಹೇಳಿದ ಬೆಲೆಗೆ ಕೊಳ್ಳದೆ ಚೌಕಾಸಿ ಮಾಡಿ ಪೈಸೆ ಪೈಸೆ ಉಳಿಸಲು ಪ್ರಯತ್ನಿಸುತ್ತೇವೆ. ಇಷ್ಟೆಲ್ಲಾ ಮಾಡುವಾಗ ಉತ್ತಮ ಆರೋಗ್ಯದ ಕಾಳಜಿ ನಮ್ಮ ತಲೆಯಲ್ಲಿರುತ್ತದೆ.

ಮನೆಗೆ ಬೇಕಾದ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಕೊಳ್ಳುವಾಗ ಇಂಟರ್ ನೆಟ್ ಸರ್ಚ್ ಮಾಡಿ ಆಯಾ ವಸ್ತುಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸುತ್ತೇವೆ. ಬಳಕೆದಾರರ ಅಭಿಪ್ರಾಯಗಳನ್ನು ಗಮನಿಸುತ್ತೇವೆ. ಅದರ ಬಗ್ಗೆ ಯೂಟೂಬ್ ವಿಶ್ಲೇಷಣೆಗಳಿದ್ದರೆ ಕೇಳುತ್ತೇವೆ..
ಇಷ್ಟೆಲ್ಲಾ ಮಾಡುವಾಗ ಕೊಂಡ ಪ್ರತಿ ವಸ್ತುವು ಗರಿಷ್ಟ ಬಳಕೆಗೆ ಬರಬೇಕು. ಕೊಟ್ಟ ಹಣಕ್ಕೆ ಮೋಸ ಆಗಬಾರದು ಎನ್ನುವ ಕಾಳಜಿ ಇರುತ್ತದೆ.

ಸ್ವಂತ ಮನೆ ಕಟ್ಟುವಾಗಲಂತೂ ಒಂದೊಂದು ಇಟ್ಟಿಗೆಯ ಬಗ್ಗೆಯೂ ಹತ್ತಾರು ಜನರನ್ನು ಕೇಳುತ್ತೇವೆ. ಮನೆ ಕಟ್ಟಡಕ್ಕೆ ಬಳಸುವ ಪ್ರತಿಯೊಂದು ವಸ್ತುಗಳ ಬಗ್ಗೆ ಗೂಗಲ್ ಮಾಡಿ ಪ್ರತಿಯೊಂದರ ಗುಣಮಟ್ಟದ ಬಗ್ಗೆ ಪರಿಶೀಲಿಸುತ್ತೇವೆ. ಈಗಾಗಲೆ ಮನೆ ಕಟ್ಟಿದವರ ಅನುಭವಗಳನ್ನು ಕೇಳುತ್ತೇವೆ. ಇಷ್ಟೆಲ್ಲಾ ಮಾಡುವಾಗ ಸರಿಯಾದ ಬೆಲೆಯಲ್ಲಿ ಗರಿಷ್ಟ ಗುಣಮಟ್ಟದ ಬಹಳ ಕಾಲ ಬಾಳಿಕೆ ಬರುವ ಮನೆ ಕಟ್ಟುವ ಕಾಳಜಿ ಇರುತ್ತದೆ.

ಇಂದು ಬಹುತೇಕ Online ಶಾಪಿಂಗ್ ಹೆಚ್ಚಾಗಿದೆ.
ಹೀಗೆ ಒಂದು ವಸ್ತುವನ್ನು Online ನಲ್ಲಿ ಖರೀದಿಸಲು ಹತ್ತಾರು ವೆಬ್ ಸೈಟ್ ಗಳನ್ನು ಪರಿಶೀಲಿಸಿ ಬೆಲೆಯ ವ್ಯತ್ಯಾಸವನ್ನು ತಿಳಿಯುತ್ತೇವೆ. ಬಳಕೆದಾರರ ರಿವಿವ್/ಕಮೆಂಟುಗಳನ್ನು ಓದುತ್ತೇವೆ. ರೇಟಿಂಗ್ ಪರಿಶೀಲಿಸುತ್ತೇವೆ. ಆಯಾ ಪ್ರಡಕ್ಟ್ ಬಗ್ಗೆ ಏನಾದರೂ ನೆಗೆಟಿವ್ ಸುದ್ದಿಗಳಿವೆಯೇ ಎಂದು ಗೂಗಲ್‌ಮಾಡಿ ಪರಿಶೀಲಿಸುತ್ತೇವೆ. ಇಷ್ಟೆಲ್ಲಾ ಮಾಡುವುದರ ಹಿಂದೆ ಕೈಯಿಂದ ಕೊಟ್ಟ ಪೈಸೆ ಪೈಸೆಗೂ ಗುಣಮಟ್ಟದ ವಸ್ತುಗಳು ಬೇಕು ಎನ್ನುವುದು ಮನಸ್ಸಲ್ಲಿರುತ್ತೆ.

ಇನ್ನು ಮಗನನ್ನೊ, ಮಗಳನ್ನೋ ಮದುವೆ ಮಾಡುವ ಸಂದರ್ಭ ಬಂದರಂತೂ ಮೈಯೆಲ್ಲಾ ಕಣ್ಣಾಗಿಸಿಕೊಂಡು ಹುಡುಗನಿಗೆ ಹುಡುಗಿ, ಹುಡುಗಿಗೆ ಹುಡುಗನನ್ನು ಹುಡುಕುತ್ತೇವೆ. ಇರೋ ಬರೋ ಮ್ಯಾಟ್ರಮನಿ ವೆಬ್ ಸೈಟುಗಳನ್ನು ತಡಕಾಡುತ್ತೇವೆ. ಬ್ರೋಕರುಗಳ ಬೆನ್ನು ಬೀಳುತ್ತೇವೆ. ಮ್ಯಾಟ್ರಮೊನಿ ಪ್ರೊಪೈಲುಗಳನ್ನೆಲ್ಲಾ ಜಾಲಾಡುತ್ತೇವೆ. ನೂರಾರು ಜನರಿಗೆ ಫೋನ್ ಮಾಡಿ ವಿಚಾರಿಸುತ್ತೇವೆ.
ಆಯಾ ಹುಡುಗ ಹುಡುಗಿಯರ ಮನೆಯವರ ಬಗ್ಗೆ ಗುಪ್ತವಾಗಿ ಸಂಶೋಧನೆಯನ್ನೆ ಮಾಡುತ್ತೇವೆ. ಇಷ್ಟೆಲ್ಲಾ ಮಾಡುವುದು ಮದುವೆಯಾಗುವ ಹುಡುಗ ಅಥವಾ ಹುಡುಗಿಯರ ಜೀವನ ಸುಖಕರವಾಗಿರಲೆಂಬ ಎಚ್ಚರದಿಂದ.

ಹೀಗೆ ಮಕ್ಕಳನ್ನು ಸ್ಕೂಲಿಗೆ ಸೇರಿಸುವಾಗ, ನೌಕರಿ ಹಿಡಿಯುವಾಗ, ಬಟ್ಟೆ ಕೊಳ್ಳುವಾಗ, ಬೇರೊಬ್ಬರನ್ನು ನಂಬುವಾಗ ಹೀಗೆ ಹತ್ತಾರು ಬಾರಿ ಪರಿಶೀಲಿಸಿ ಹತ್ತಾರು ಜನರನ್ನು ಕೇಳಿ ಒಂದೆಜ್ಜೆ ಮುಂದಿಡುತ್ತೇವೆ..

ಪ್ರಿಯರೇ
ಹೀಗೆ ಬದುಕಿಗೆ ಸಂಬಂಧಿಸಿದ ಪ್ರತಿಯೊಂದರ ಬಗ್ಗೆ ಇಷ್ಟೊಂದು ಖಚಿತ ಅಭಿಪ್ರಾಯ ಹೊಂದಿದ ನಾವುಗಳು. ಪ್ರತಿ ಆಯ್ಕೆಯಲ್ಲಿ ಎಚ್ಚರ ತಪ್ಪದ ನಾವುಗಳು, ಮೇಲೆ ಹೇಳಿದ ಎಲ್ಲಾ ಸಂಗತಿಗಳ ಬಗ್ಗೆ ಪರೋಕ್ಷವಾಗಿ ಪರಿಣಾಮ ಬೀರುವ ನಮ್ಮನ್ನು ಆಳುವ ರಾಜಕಾರಣಿ, ನಮ್ಮನ್ನು ಆಳುವ ಸರಕಾರವನ್ನು ಆಯ್ಕೆ ಮಾಡುವಾಗ ಮಾತ್ರ ಏಕೆ ಎಡವುತ್ತೇವೆ? ಏಕೆ ಕೂಲಂಕುಶವಾಗಿ ಪರಿಶೀಲಿಸುವುದಿಲ್ಲ? ಯಾಕೆ ರಾಜಕೀಯ ಪಕ್ಷದ ಚರಿತ್ರೆಯ ಬಗ್ಗೆ, ನಾವು ಮತ ಚಲಾಯಿಸುವ ಉಮೇದುವಾರರ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸುವುದಿಲ್ಲ?
ನಮ್ಮನ್ನೆಲ್ಲಾ ಪೊರೆಯುವುದು ‘ಸಂವಿಧಾನ’. ಈ ಸಂವಿಧಾನದ ಆಶಯದಂತೆ ಯಾವ ರಾಜಕೀಯ ಪಕ್ಷ ಆಡಳಿತ ನಡೆಸಿದೆ, ಯಾವ ರಾಜಕೀಯ ಪಕ್ಷ ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ನಡೆಯುತ್ತಿದೆ ? ಯಾವ ರಾಜಕೀಯ ಪಕ್ಷ ದುರ್ಬಲರಿಗೆ ನೆರವಾಗಿದೆ? ಎಂದೇಕೆ ನಾವು ಪರಿಶೀಲಿಸುವುದಿಲ್ಲ.
ಸುಳ್ಳುಗಳನ್ನು ಹೇಳುವ, ಸುಳ್ಳು ಭರವಸೆ ಕೊಡುವವರನ್ನು ಏಕೆ ಆಯ್ಕೆ ಮಾಡುತ್ತೇವೆ? ಧರ್ಮ ಧರ್ಮದ ಮಧ್ಯೆ ಜಾತಿ ಜಾತಿಗಳ ಮಧ್ಯೆ ದ್ವೇಶ ಬಿತ್ತುವವರನ್ನೇಕೆ ಆಯ್ಕೆ ಮಾಡುತ್ತೇವೆ?

ಪ್ರಿಯರೇ, ಮತ ಚಲಾವಣೆಗೆ ಹೊರಡುವ ಮುನ್ನ ಒಂದು ನಿಮಿಷವಾದರೂ ಈ ಬಗ್ಗೆ ನಮಗೆ ನಾವೇ ಆತ್ಮಸಾಕ್ಷಿಯನ್ನು ಕೇಳಿಕೊಂಡು ಮತ ಚಲಾಯಿಸೋಣ. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಮೂಲಕ ನೀಡಿದ ಮತದಾನದ ಹಕ್ಕು ನಮ್ಮಗಳ ಜೀವನದ ಮಹತ್ವದ ಅಧಿಕಾರವಾಗಿದೆ. ಇಂತಹ ಮತಾಧಿಕಾರವನ್ನು ಸಂವಿಧಾನ ಬದ್ಧತೆಗೆ ಪೂರಕವಾಗಿ ನಮ್ಮ ಬದ್ಧತೆಯನ್ನು ತೋರೋಣ. ಎಲ್ಲರೂ ಮತ ಚಲಾಯಿಸೋಣ

ಅಜೋ

Exit mobile version