ಅಂಬೇಡ್ಕರ್ ರಥ
( ರತ್ತೂ ಕಂಡಂತೆ ಅಂಬೇಡ್ಕರರ ಕೊನೆಯ ದಿನಗಳು ಪುಸ್ತಕದಿಂದ, ರಚನೆ : ಕೋಟಿಗಾನಹಳ್ಳಿ ರಾಮಯ್ಯ )
ಕೆಲವರು ಹೇಳುತ್ತಾರೆ
ಅಂಬೇಡ್ಕರ್ ರಥವನ್ನು ಇದ್ದಲ್ಲಿಯಾದರೂ
ಬಿಟ್ಟಿದ್ದರೆ ಚೆನ್ನಿತ್ತೆಂದು
ಅಂಬೇಡ್ಕರ್ ಹೇಳಿದ್ದಾರೆ
“ನನ್ನ ರಥವನ್ಮು ಮುಂದಕ್ಕೊಯ್ಯಲಾಗದಿದ್ದಲ್ಲಿ
ಅಲ್ಲೇ ಬಿಡಿ…ಇದ್ದಲ್ಲೇ…
ಹಿಂದಕ್ಕಂತೂ ಒಯ್ಯಬೇಡಿ” ಎಂದು
ಇನ್ನೂ ಕೆಲವರು “ಹಿಂದಕ್ಕೊಯ್ಯುತ್ತಿದ್ದಾರೆ
ಅವರ ಹಿಂಬಾಲಕರು” ಎನ್ನುತ್ತಾರೆ
ದೇವನೂರ ಮಹಾದೇವರಯ
“ಎಲ್ಲ ಕಡೆ ಎಲ್ಲರೂ ತಮ್ಮ ತಮ್ಮ ಕಡೆ
ಎಳೆಯುತ್ತಿದ್ದಾರೆ ” ಎನ್ನುತ್ತಾರೆ
ಮಸಲ ಆ ರಥ ನಿಜಕ್ಕೂ ಇದೆಯೇ ?
ಅಥವ…,
ತುಕ್ಕು ಹಿಡಿದು, ಕಿಲುಬುಗಟ್ಟಿ
ಸವೆದ ಶಕುನಿ ಸಹೋದರರ ಎಲುಬಿನ
ಹಂದರ ಮಾತ್ರವೇ ?
ಆ ರಥಕ್ಕೆ ಹೂಡಲಾದ ಆನೆ
ಮಾಯಾವತಿ ಗರ್ಭಸ್ಥ
ಬುದ್ಧ ಶಿಶು ಜನನಕೆ
ಶಿಲಾ ಶಿಲ್ಪೋಧ್ಯಾನಗಳಲಿ.
ಏನು ಮಾಡುವುದು ಈಗ ?
ಎಳೆಯಲೊಂದು ಕುದುರೆಯಾದರೂ ಬೇಕಲ್ಲ.
ಸೂರ್ಯನ ಏಳೂ ಕುದುರೆಗಳ
ಲೇಸರ್ ಕಿರಣ ರಥದ ಎದುರು…?
ರಥಯಾತ್ರೆ, ರಥಸ್ಪರ್ಧೆಯ ಸೆಣಸಿಗೆ
ಕುರುಕ್ಷೇತ್ರದ ಮಸಣ ಯಾತ್ರೆಯ ಫಸಲಿಗೆ…,
ಕಾಲ ಬರುತ್ತದೆ….
ಹೂಡಲೇ ಬೇಕಾಗುತ್ತದೆ ಏನನ್ನಾದರೂ
ಅಪ್ಪ, ಅವ್ವ, ಅಣ್ಣ, ತಂಗಿ
ಅರ್ಧಾಂಗಿ !
ಯಾರನ್ನಾದರೂ ಸರಿ,
ನೊಗ ಎಳೆಯುವುದಕ್ಕೆ, ಯುಗ ಸವೆಸುವುದಕ್ಕೆ…
ಆದ್ದರಿಂದ, ಈಗಲೇ ಯಾಕೆ
ಸಿದ್ಧ ಪಡಿಸಬಾರದು ರಥವನ್ನು
ಮುರಿದು ವ್ರತವನ್ನು…?
ಯುದ್ಧ ಮುಂದೆ ಇದ್ದೇ ಇದೆ
ಕುರುಕ್ಷೇತ್ರ !
ಎಷ್ಟೊಂದೋ
ಅಕ್ಷೋಹಿಣಿ ಹತ್ಯೆಗೆ ಸಜ್ಜಾಗಿ
ಪಾಂಚಜನ್ಯವೂ ಮೊಳಗಿದೆ
ದಯಮಾಡಿ
ಗೆಳೆಯರೇ, ಸಹೋದರರೇ, ಒಡನಾಡಿಗಳೇ
ನೀವು ಕಿತ್ತೊಯ್ದು ಗುಜರಿಗೆ ಹಾಕಿರುವ
ರಥದ ಎಲ್ಲಾ ಅವಯವಗಳನ್ನ ಮರು ತನ್ನಿ
ರಥವನ್ನು ರಥದಂತಾದರೂ ಜೋಡಿಸಿ ಇಡೋಣ…
ಹಿಂದೋ ಮುಂದೋ – ಅಕ್ಕ ಪಕ್ಕವೋ
ಎತ್ತಲಾದರೂ ಎಳೆದು ಎಕ್ಕುಟ್ಟೋಗಲಿ
ಎಳೆಯುವವರು
ಎಳೆಯುವುದನ್ನು
ಆಟವೆಂದಷ್ಟೇ ಬಗೆದಿರುವವರು
- ಕೋಟಗಾನಹಳ್ಳಿ ರಾಮಯ್ಯ