Home ರಾಜ್ಯ ಗ್ರಾಮೀಣ ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ದಿಗೆ ಸಹಕಾರ ಇರಲಿ: ಎಸ್.ಮಧು ಬಂಗಾರಪ್ಪ

ಗ್ರಾಮೀಣ ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ದಿಗೆ ಸಹಕಾರ ಇರಲಿ: ಎಸ್.ಮಧು ಬಂಗಾರಪ್ಪ

0

ಶಿವಮೊಗ್ಗ ಫೆ.24: ಗ್ರಾಮೀಣ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳು ಸೇರಿದಂತೆ ಸರ್ವಾಂಗೀಣ ಅಭಿವೃದ್ದಿಗೆ ಹಳೇ ವಿದ್ಯಾರ್ಥಿಗಳು, ಸಿಎಸ್‌ಆರ್ ಮತ್ತು ದಾನಿಗಳ ಸಹಕಾರ ಸದಾ ಇರಲಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಮನವಿ ಮಾಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಿವಮೊಗ್ಗ ಹಾಗೂ ಸಹಕಾರಿ ಸಂಸ್ಥೆಗಳು, ಕೈಗಾರಿಕಾ ಉದ್ಯಮಗಳು, ವ್ಯಾಪಾರ , ವಾಣಿಜ್ಯೋದ್ಯಮಿಗಳು, ರೌಂಡ್ ಟೇಬಲ್, ವಿವಿಧ ಸಂಸ್ಥೆಗಳು, ಹಳೇ ವಿದ್ಯಾರ್ಥಿಗಳ ಸಂಘಗಳ ಸಹಯೋಗದೊಂದಿಗೆ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ‘ ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಹಾಗೂ ಸಿಎಸ್‌ಆರ್ ಯೋಜನೆಗಳ ಅನುಷ್ಟಾನ ಕುರಿತಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ದಿಗೆ 3 ವಿಭಾಗಗಳಿವೆ. ಒಂದು ಸಿಎಸ್‌ಆರ್ ನಿಧಿ, ದಾನಿಗಳು ಮತ್ತು ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮದ ದಾನಿಗಳಾಗಿದ್ದು, ರಾಜ್ಯದಲ್ಲಿ ಅನೇಕ ಶಾಲೆಗಳು ಅಭಿವೃದ್ದಿ ಕಾಣುತ್ತಿವೆ.

ಶಿಕ್ಷಣ ಇಲಾಖೆಯಲ್ಲಿ 46 ಸಾವಿರ ಸರ್ಕಾರಿ ಶಾಲೆಗಳು ಸೇರಿದಂತೆ 76 ಸಾವಿರ ಸರ್ಕಾರಿ ಅನುಸರ್ಕಾರಿ-ಅನುದಾನಿತ ಖಾಸಗಿ ಶಾಲೆ ಕಾಲೇಜು ಇವೆ. 1.8 ಕೋಟಿ ವಿದ್ಯಾರ್ಥಿಗಳು ಇದ್ದಾರೆ. 1.8 ತಿಂಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಹಳೇ ವಿದ್ಯಾರ್ಥಿಗಳ 36 ಸಾವಿರ ವಾಟ್ಸಾಪ್ ಗುಂಪುಗಳನ್ನು ರಚಿಸಲಾಗಿದೆ.

ಮಾನ್ಯ ಮುಖ್ಯಮಂತ್ರಿಗಳು ತಮ್ಮ ಸಂಬಳದಲ್ಲಿ ರೂ. 10 ಲಕ್ಷವನ್ನು ಅವರು ಓದಿದ ಶಾಲೆಗೆ ನೀಡಿದ್ದಾರೆ. ನನ್ ಸಂಬಳದಲ್ಲಿ ರೂ. 10 ಲಕ್ಷವನ್ನ ನನ್ನ ಊರಿನ ಶಾಲೆಯ ಪೀಠೋಪಕರಣಕ್ಕೆ ನೀಡಿದ್ದೇನೆ. ಸಿಎಸ್‌ಆರ್ ಅಡಿಯಲ್ಲಿ ಸಾಕಷ್ಟು ಶಾಲೆಗಳ ಅಭಿವೃದ್ದಿ ಆಗುತ್ತಿದ್ದು ಅದರಲ್ಲಿ ಗರಿಷ್ಟ ಹಣ ರೂ. 1591 ಕೋಟಿ ಅಜೀಂ ಪ್ರೇಂಜೀ ಫೌಂಡೇಶನ್‌ನಿಂದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಮೊಟ್ಟೆಗಾಗಿ ನೀಡಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಸರ್ಕಾರದಿಂದ ಉಚಿತವಾಗಿ 57 ಲಕ್ಷ ಮಕ್ಕಳಿಗೆ ಹಾಲು, ರಾಗಿ ಮಾಲ್ಟ್, 2 ಜೊತೆ ಸಮವಸ್ತ್ರ, ಶೂ ಸಾಕ್ಸ್ ಉಚಿತ ಊಟ, ಮೊಟ್ಟೆ ಹಾಗೂ ಕಲಿಕೆಯಲ್ಲಿ ಮುಂದೆ ಬರಲು ಶಾಲೆಗಳಿಗೆ ಉಚಿತ ವಿದ್ಯುತ್, ನೀರು, ಗ್ರಂಥಾಲಯಕ್ಕೆ ಉಚಿತ ವಿದ್ಯುತ್ , ಸಂಜೆ ವಿಶೇಷ ಕ್ಲಾಸು, ಪರೀಕ್ಷಾ ಪಾವಿತ್ರ‍್ಯತೆ ಕಾಪಾಡಲು ಪರೀಕ್ಷೆಯಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. 42 ಸಾವಿರ ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ. ಮಕ್ಕಳ ಓದಿಗೆ ಶಿಕ್ಷಕರು, ಅಧಿಕಾರಿಗಳಿಂದ ಉತ್ತಮ ಸಹಕಾರ ಸಿಗ್ತಿದೆ. ಇದೀಗ ಶಾಲೆಯಲ್ಲಿ ಕೌಶಲ್ಯ ಕಲಿಸಲಾಗುತ್ತಿದೆ. ಅದೇ ರೀತಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೂ ಸಹಕಾರ ಲಭಿಸುತ್ತಿದೆ.

ಸಂಘ ಸಂಸ್ಥೆಗಳ ಸಹಕಾರ ಮುಂದೆಯೂ ಇನ್ನೂ ಹೆಚ್ಚಾಗಿ ಸಿಗಲಿ ಎಂದ ಅವರು ಮುಖ್ಯ ಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಸಿಎಸ್‌ಆರ್ ನಿಧಿಯನ್ನು ವಿದ್ಯಾಭ್ಯಾಸ ಕ್ಕೆ ನೀಡಲು ಕೋರಿದ್ದಾರೆ. ಗ್ರಾಮೀಣ ಭಾಗದ ಶಾಲೆಗಳ ಅಭಿವೃದ್ಧಿಗೆ ಸಿಎಸ್‌ಆರ್ ಹಾಗೂ ಹಳೇ ವಿದ್ಯಾರ್ಥಿಗಳು, ದಾನಿಗಳು ಅನುಕೂಲ ಮಾಡಿಕೊಡುತ್ತಾರೆಂಬ ವಿಶ್ವಾಸ ಇದೆ.

ಎಡಿಬಿ ಬ್ಯಾಂಕ್ ಕೆಪಿಎಸ್ ಶಾಲೆ ಮಾಡಲು ರೂ. 2 ಸಾವಿರ ಕೋಟಿ ನೀಡಿದೆ. ಗ್ರಾಮೀಣ ಭಾಗದ ಎಷ್ಟೋ ಜನರು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ತರಕಾರಿ ಮಾರುವ ಸಂಜೀವ್ ಎಂಬುವವರು ಸಹ ತಾವು ಓದಿದ ಶಾಲೆಗೆ ರೂ. 2 ಲಕ್ಷ ವೆಚ್ಚದಲ್ಲಿ ಹೊಸ ಧ್ವಜ ನಿರ್ಮಿಸಿದ್ದಾರೆ. ಇದೊಂದು ಉದಾಹರಣೆ ಅಷ್ಟೇ. ಇದೇ ರೀತಿ ಅನೇಕರು ಸಹಾಯ ಮಾಡಿದ್ದಾರೆ. ಹಳೇ ವಿದ್ಯಾರ್ಥಿಗಳು, ರೌಂಡ್ ಟೇಬಲ್‌ನಂತಹ ಸಂಸ್ಥೆಗಳು, ಇತರೆ ಉದ್ಯಮಗಳು ಸಹರಿಸುತ್ತಿವೆ. ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲಾಗುತ್ತಿದ್ದು, ಇದೇ ರೀತಿಯಲ್ಲಿ ನಿಮ್ಮ ಸಹಕಾರ ಇರಲಿ ಎಂದರು.

ಮುಂದಿನ ದಿನಗಳಲ್ಲಿ ಪ್ರತಿ ಗ್ರಾ.ಪಂ ಗೆ ಎರಡರಂತೆ 2000 ಕೆಪಿಎಸ್ ಶಾಲೆಗಳನ್ನು ಮಾಡುವ ಗುರಿ ಹೊಂದಲಾಗಿದೆ ಎಂದ ಅವರು ಮೊಟ್ಟ ಮೊದಲ ಬಾರಿಗೆ 25 ಸಾವಿರ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಟ್, ಜೆಇಇ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಕೋಚಿಂಗ್ ನೀಡಲಾಗಿವುದು ಎಂದರು.

ದಾನಿಗಳ ಆರ್ಥಿಕ ನೆರವಿನಿಂದ ಶಾಲೆಯ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳು ಸಹಕರಿಸಿದ ವ್ಯಕ್ತಿಗಳು, ಸಂಘಟನೆಗಳ ಹೆಸರನ್ನು ಶಾಲೆಗೆ ನಾಮಕರಣ ಮಾಡಲು ಶೀಘ್ರದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು. ಈ ಸಂದರ್ಭದಲ್ಲ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯ ಅಭಿಪ್ರಾಯ ಪಡೆದುಕೊಳ್ಳಲಾಗುವುದು ಎಂದರು.

You cannot copy content of this page

Exit mobile version