Home ಬೆಂಗಳೂರು ಬಿಡದಿ ಪಾದಯಾತ್ರೆ ಏನಾಗುತ್ತೆ ನೋಡಿ, ನಾನು ಯಾರಿಗೂ ಹೆದರಲ್ಲ – ಹೆಚ್‌ ಡಿ ಡಿ

ಬಿಡದಿ ಪಾದಯಾತ್ರೆ ಏನಾಗುತ್ತೆ ನೋಡಿ, ನಾನು ಯಾರಿಗೂ ಹೆದರಲ್ಲ – ಹೆಚ್‌ ಡಿ ಡಿ

ಬೆಂಗಳೂರು : ಕರ್ನಾಟಕ ಸರ್ಕಾರದ ಬಿಡದಿ ಟೌನ್‌ಶಿಪ್ (Bidadi Township) ಯೋಜನೆಯನ್ನು ವಿರೋಧಿಸಿ ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು (HD Deve Gowda)  ನೇರವಾಗಿ ಅಖಾಡಕ್ಕಿಳಿದು ಕಾಂಗ್ರೆಸ್ (Congress) ಸರ್ಕಾರಕ್ಕೆ ಪ್ರಬಲವಾಗಿ ಟಾಂಗ್ ನೀಡಿದ್ದಾರೆ. ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಅವರು, ರಾಜ್ಯ ಸರ್ಕಾರದ ನಡೆ ಹಾಗೂ ಆಡಳಿತ ಪಕ್ಷದ ನಾಯಕರ ಹೇಳಿಕೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕಾಲವೇ ಸೂಕ್ತ ಉತ್ತರ ನೀಡಲಿದೆ

 ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ದೇವೇಗೌಡರು, ಜೆಡಿಎಸ್‌ನ ಈ ಪಾದಯಾತ್ರೆಯನ್ನು ‘ಪ್ರಾಯಶ್ಚಿತ್ತ ಯಾತ್ರೆ’ ಎಂದು ವ್ಯಂಗ್ಯವಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ನೇರವಾಗಿಯೇ ತಿರುಗೇಟು ನೀಡಿದರು. ಮುಂಬರುವ ದಿನಗಳಲ್ಲಿ ನಿಜವಾಗಿ ಯಾರಿಗೆ ಪ್ರಾಯಶ್ಚಿತ್ತ ಆಗಲಿದೆ ಎಂಬುದನ್ನು ರಾಜ್ಯದ ಜನರೇ ಕಾದು ನೋಡಲಿದ್ದಾರೆ ಎಂದ ಅವರು, ಕಾಂಗ್ರೆಸ್ ಸರ್ಕಾರದ ಈ ರೈತವಿರೋಧಿ ಧೋರಣೆಯಿಂದ ಯಾರಿಗೆ ರಾಜಕೀಯವಾಗಿ ಹಾಗೂ ಆಡಳಿತಾತ್ಮಕವಾಗಿ ಹಾನಿಯಾಗಲಿದೆ ಎಂಬುದಕ್ಕೆ ಕಾಲವೇ ಸೂಕ್ತ ಉತ್ತರ ನೀಡಲಿದೆ ಎಂದು ಎಚ್ಚರಿಕೆ ನೀಡಿದರು.

ತಮ್ಮ ರಾಜಕೀಯ ಜೀವನದ ಪಯಣವನ್ನು ಸ್ಮರಿಸಿದ ಮಾಜಿ ಪ್ರಧಾನಿಗಳು, ತಾವು ಹುಟ್ಟಿನಿಂದಲೇ ರೈತನ ಮಗನಾಗಿದ್ದು, ಜೀವನ ಪೂರ್ತಿ ರೈತರ ಹಿತರಕ್ಷಣೆ ಮತ್ತು ಅವರ ನ್ಯಾಯಯುತ ಹಕ್ಕುಗಳಿಗಾಗಿಯೇ ಹೋರಾಟ ನಡೆಸಿಕೊಂಡು ಬಂದಿರುವುದಾಗಿ ಹೇಳಿದರು. ವಯೋಸಹಜ ಆರೋಗ್ಯ ಸಮಸ್ಯೆಗಳ ಕುರಿತು ಮಾತನಾಡುತ್ತಾ, ತಮ್ಮ ದೇಹಕ್ಕೆ ವಯಸ್ಸಾಗಿದೆಯೇ ಹೊರತು ಬುದ್ಧಿಗಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಅಗತ್ಯ ಬಿದ್ದರೆ ವ್ಹೀಲ್ ಚೇರ್‌ನಲ್ಲಿ ಕುಳಿತಾದರೂ ಸರಿ, ರೈತರ ಭೂಮಿ ಮತ್ತು ನ್ಯಾಯಕ್ಕಾಗಿ ಆರಂಭಿಸಿರುವ ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಾಗಿ ದೃಢವಾಗಿ ಸಾರಿದರು.

You cannot copy content of this page

Exit mobile version