ದೆಹಲಿ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರಕ್ಕೆ ದೇಶ-ವಿದೇಶಗಳ ಭಕ್ತರು ನೀಡುತ್ತಿರುವ ದೇಣಿಗೆ ಮತ್ತು ಕಾಣಿಕೆಗಳ ನಿರ್ವಹಣೆಯಲ್ಲಿ ಭಾರಿ ಅಕ್ರಮ, ಹಣ ದುರುಪಯೋಗ ಹಾಗೂ ಕಾಣಿಕೆ ನಾಪತ್ತೆಯಾಗಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ಗೆ ತುರ್ತು ಸಾರ್ವಜನಿಕ ಪತ್ರ ಅರ್ಜಿಯೊಂದನ್ನು (Letter Petition) ಸಲ್ಲಿಸಲಾಗಿದೆ.
ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅನೂಪ್ ಪ್ರಕಾಶ್ ಅವಸ್ತಿ ಅವರು ಸಲ್ಲಿಸಿರುವ ಈ ಪತ್ರ ಅರ್ಜಿಯಲ್ಲಿ, ಮಂದಿರದ ದೇಣಿಗೆ ದುರುಪಯೋಗದ ಕುರಿತು ತಕ್ಷಣವೇ ಎಫ್‌ಐಆರ್ (FIR) ದಾಖಲಿಸಲು ನಿರ್ದೇಶನ ನೀಡಬೇಕು ಮತ್ತು ಕಾಣಿಕೆ ಹಣ ನಾಪತ್ತೆಯಾಗಿರುವ ಗಂಭೀರ ಆರೋಪದ ತನಿಖೆಯನ್ನು ಸಿಬಿಐ (CBI) ನಂತಹ ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಿ, ಸುಪ್ರೀಂ ಕೋರ್ಟ್‌ನ ಉಸ್ತುವಾರಿಯಲ್ಲೇ ತನಿಖೆ ನಡೆಸುವಂತೆ ಆದೇಶಿಸಬೇಕು ಎಂದು ಅತ್ಯುನ್ನತ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಕೋಟಿಗಟ್ಟಲೆ ಭಕ್ತರ ಆಳವಾದ ಧಾರ್ಮಿಕ ಭಾವನೆಗಳು ಈ ಮಂದಿರದೊಂದಿಗೆ ಬೆಸೆದುಕೊಂಡಿರುವುದರಿಂದ, ಭಕ್ತರು ನೀಡುವ ಪ್ರತಿಯೊಂದು ಕಾಣಿಕೆಯ ಸುರಕ್ಷತೆಯನ್ನು ಖಾತ್ರಿಪಡಿಸುವುದು ಅಗತ್ಯವಾಗಿದೆ. ಭವಿಷ್ಯದಲ್ಲಿ ಮಂದಿರದ ನಿಧಿಯ ಸಂಗ್ರಹಣೆ, ಲೆಕ್ಕಪತ್ರ ನಿರ್ವಹಣೆ, ಹಣದ ಸುರಕ್ಷಿತ ಕಸ್ಟಡಿ ಮತ್ತು ವಿತರಣಾ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಹಾಗೂ ಭಕ್ತರ ಕೊಡುಗೆಗಳನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ನಿರಂತರ ನ್ಯಾಯಾಂಗ ಉಸ್ತುವಾರಿ ವ್ಯವಸ್ಥೆಯೊಂದನ್ನು (Judicial Oversight Mechanism) ರೂಪಿಸಬೇಕು ಎಂದು ಅರ್ಜಿದಾರರು ಪತ್ರದಲ್ಲಿ ಬಲವಾಗಿ ಒತ್ತಾಯಿಸಿದ್ದಾರೆ.
