ದೆಹಲಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ರಚನೆಯಾಗಿ 15 ದಿನಗಳು ಕಳೆದಿದ್ದರೂ ಬೆಂಗಳೂರು ನಗರಾಭಿವೃದ್ಧಿ ಸಚಿವರ ನೇಮಕಾತಿ ವಿಚಾರದಲ್ಲಿ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅವರು ಅಧಿಕಾರ ಸ್ವೀಕರಿಸದಿರುವ ಕುರಿತು ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ಸಚಿವ ರಾಮಲಿಂಗರೆಡ್ಡಿ ಅವರ ಖಾತೆ ಗೊಂದಲದ ವಿಚಾರದಲ್ಲಿಯೇ ಈಗಾಗಲೇ ಒಂದು ವಾರ ಕಾಲಹರಣವಾಯಿತು. ಇನ್ನು ನಗರಾಭಿವೃದ್ಧಿ ಇಲಾಖೆಯ ವಿಚಾರದಲ್ಲಿ ಇನ್ನೆಷ್ಟು ದಿನಗಳು ಬೇಕಾಗಬಹುದು?” ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ನಗರದಾದ್ಯಂತ ಸಾಲು ಸಾಲು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಆದರೆ, ಸಾರ್ವಜನಿಕರ ಈ ಕಷ್ಟಗಳಿಗೆ ತಕ್ಷಣವೇ ಸ್ಪಂದಿಸಲು ಮತ್ತು ಉಸ್ತುವಾರಿ ವಹಿಸಲು ನಗರಕ್ಕೆ ಸಚಿವರೇ ಇಲ್ಲದಂತಾಗಿದೆ. ಬೆಂಗಳೂರಿನ ರಸ್ತೆ ಗುಂಡಿಗಳ ಪಾಡಂತೂ ನಾಯಿ ಪಾಡಾಗಿದೆ. ಸಾಮಾನ್ಯ ರಸ್ತೆಗಳನ್ನು ಬಿಡಿ, ಸ್ವತಃ ಸರ್ಕಾರದ ಆಡಳಿತ ಕೇಂದ್ರವಾಗಿರುವ ವಿಧಾನಸೌಧದ ಸುತ್ತಮುತ್ತಲಿನ ರಸ್ತೆಗಳೂ ಕೂಡ ಸಂಪೂರ್ಣವಾಗಿ ಗುಂಡಿ ಬಿದ್ದಿವೆ. ಇದರೊಂದಿಗೆ, ಈಗಾಗಲೇ ಆರಂಭವಾಗಬೇಕಾಗಿದ್ದ ನಮ್ಮ ಮೆಟ್ರೋ ಯೋಜನೆಯ ‘ಗುಲಾಬಿ ಮಾರ್ಗ’ದ (Pink Line) ಕಾಮಗಾರಿಗಳು ಯಾವುದೇ ಪ್ರಗತಿಯಿಲ್ಲದೆ ಹಾಗೇ ಉಳಿದುಕೊಂಡಿವೆ. ಇತ್ತ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗದ ಮೆಟ್ರೋ ಕಾಮಗಾರಿಯೂ ಅತ್ಯಂತ ಆಮೆಗತಿಯಲ್ಲಿ ಸಾಗುತ್ತಿದೆ. ಒಟ್ಟಾರೆಯಾಗಿ ರಾಜಧಾನಿ ಬೆಂಗಳೂರನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳನ್ನು ನಡೆಸದೆ ಕೇವಲ ಬಿಬಿಎಂಪಿ (GBMP) ಜವಾಬ್ದಾರಿಯನ್ನು ಮಾತ್ರ ಸಚಿವರಿಗೆ ನೀಡಲಾಗಿದೆ ಎಂದು ದೂರಿದ ತೇಜಸ್ವಿ ಸೂರ್ಯ, “ಇದು ಸಚಿವರಿಗೆ ಕಾರು ಓಡಿಸಲು ಕೊಟ್ಟು, ಅದರ ಇಂಜಿನ್ ಅನ್ನು ಮುಖ್ಯಮಂತ್ರಿಗಳು ತಮ್ಮ ಬಳಿಯೇ ಇಟ್ಟುಕೊಂಡಂತಾಗುತ್ತದೆ. ನಗರದ ಎಲ್ಲಾ ಪ್ರಮುಖ ಸಂಸ್ಥೆಗಳು ಒಟ್ಟಾಗಿ ಸೇರಿದಾಗ ಮಾತ್ರವೇ ಉತ್ತಮ ಆಡಳಿತ ನೀಡಲು ಸಾಧ್ಯ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಮತ್ತು ಬಿಎಂಆರ್‌ಸಿಎಲ್ (BMRCL) ಸಂಸ್ಥೆಗಳ ಅಧಿಕಾರವನ್ನು ಸಚಿವರಿಂದ ಕಿತ್ತುಕೊಂಡರೆ ಅವರು ಕೆಲಸ ಮಾಡುವುದಾದರೂ ಹೇಗೆ? ಈ ಪ್ರಮುಖ ಸಂಸ್ಥೆಗಳು ಸಚಿವರ ನಿಯಂತ್ರಣಕ್ಕೆ ಬರದಿದ್ದರೆ ನಗರದ ಅಭಿವೃದ್ಧಿಯನ್ನು ಕ್ರೋಡೀಕರಿಸುವುದು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.
ಕೇವಲ ಬಿಬಿಎಂಪಿಯನ್ನು ಮಾತ್ರ ಕೈಯಲ್ಲಿಟ್ಟುಕೊಂಡು ಇಡೀ ಬೆಂಗಳೂರನ್ನು ಆಳಲು ಸಾಧ್ಯವಿಲ್ಲ. ಸರ್ಕಾರ ಯಾರನ್ನಾದರೂ ಸಚಿವರನ್ನಾಗಿ ನೇಮಿಸಲಿ, ಆದರೆ ಈ ಬಗ್ಗೆ ಜನರಿಗೆ ಸೂಕ್ತ ಸ್ಪಷ್ಟನೆ ನೀಡಲಿ ಎಂದು ಒತ್ತಾಯಿಸಿದ ಅವರು, ಸಿದ್ದರಾಮಯ್ಯ ಅವರ ಹಿಂದಿನ ಅವಧಿಯಿಂದಲೂ ಬೆಂಗಳೂರನ್ನು ನಿರಂತರವಾಗಿ ನಿರ್ಲಕ್ಷಿಸಿಕೊಂಡೇ ಬರಲಾಗಿದೆ. ಡಿ.ಕೆ. ಶಿವಕುಮಾರ್ ಅವರ ಕಾಲದಲ್ಲಾದರೂ ಪರಿಸ್ಥಿತಿ ಸುಧಾರಿಸಬಹುದು ಎಂದು ನಾವೆಲ್ಲರೂ ಅಂದುಕೊಂಡಿದ್ದೆವು, ಆದರೆ ಆ ನಿರೀಕ್ಷೆಯೂ ಹುಸಿಯಾಗಿದೆ. ಸರ್ಕಾರದ ಈ ಬೇಜವಾಬ್ದಾರಿತನ ಹಾಗೂ ನಗರದ ಜ್ವಲಂತ ಸಮಸ್ಯೆಗಳ ವಿರುದ್ಧ ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ದೊಡ್ಡ ಮಟ್ಟದ ಜನಾಂದೋಲನವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಸದರು ಎಚ್ಚರಿಕೆ ನೀಡಿದ್ದಾರೆ.
