Home ಬೆಂಗಳೂರು ರಾಜ್ಯದಲ್ಲಿ ‘ಮದ್ಯ ನಿಷೇಧ ಆಂದೋಲನ’ ಹೋರಾಟ ತೀವ್ರ: ‘ಗ್ರಾಮಸಭೆಗಳಿಗೆ ಅಧಿಕಾರ ನೀಡಿ’ ಎಂದು ಸರ್ಕಾರವನ್ನು ಆಗ್ರಹಿಸಿದ...

ರಾಜ್ಯದಲ್ಲಿ ‘ಮದ್ಯ ನಿಷೇಧ ಆಂದೋಲನ’ ಹೋರಾಟ ತೀವ್ರ: ‘ಗ್ರಾಮಸಭೆಗಳಿಗೆ ಅಧಿಕಾರ ನೀಡಿ’ ಎಂದು ಸರ್ಕಾರವನ್ನು ಆಗ್ರಹಿಸಿದ ಸಂಘಟನೆ

0

ಕಳೆದ ಹತ್ತು ವರ್ಷಗಳಿಂದ ಮದ್ಯ ನಿಯಂತ್ರಣಕ್ಕಾಗಿ ಹೋರಾಟ ಮಾಡುತ್ತಿರುವ ‘ಮದ್ಯ ನಿಷೇಧ ಆಂದೋಲನ’ವು, ರಾಜ್ಯದಲ್ಲಿ ಕಾನೂನು ಮತ್ತು ಕಾನೂನುಬಾಹಿರ ಮದ್ಯ ಮಾರಾಟವು ಕಳೆದ 20 ವರ್ಷಗಳಿಂದ ಹೆಚ್ಚುತ್ತಲೇ ಇದೆ ಎಂದು ಆತಂಕ ವ್ಯಕ್ತಪಡಿಸಿದೆ.

ಸರ್ಕಾರವು ಕೇವಲ ಮದ್ಯ ಮಾರಾಟದಿಂದ ಬರುವ ಅಬಕಾರಿ ಆದಾಯದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದೆ. ಆದರೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳೂ ಕುಡಿಯುವ ಚಟಕ್ಕೆ ಬಲಿಯಾಗುತ್ತಿದ್ದಾರೆ.

ಜೊತೆಗೆ ಮಹಿಳೆಯರು ತಮ್ಮ ಕುಟುಂಬಗಳನ್ನು ನಡೆಸುವುದಕ್ಕೆ ಹಲವಾರು ಕಷ್ಟ ಅನುಭವಿಸುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ, ಪಂಜಾಬ್ ರಾಜ್ಯದ ತರಹ ನಮ್ಮ ರಾಜ್ಯವು ಮದ್ಯ ಸೇವನೆಯಿಂದಾಗಿ ಮಾದಕ ವ್ಯಸನದತ್ತ (ಡ್ರಗ್ಸ್) ಯುವಕರನ್ನು ಹೋಗುವಂತೆ ಮಾಡಬಹುದು.

ಈ ಹಿನ್ನೆಲೆಯಲ್ಲಿ, ನಮ್ಮ ಹಿಂದಿನ ಹೋರಾಟಗಳಲ್ಲಿ ಈಗಾಗಲೇ NIMHANS, NCRB, NFHS, ಇತ್ಯಾದಿ ಸರ್ಕಾರಿ ಅಧೀನ ಸಂಸ್ಥೆಗಳ ಹಲವಾರು ವರದಿಗಳನ್ನು ಸರ್ಕಾರಕ್ಕೆ ನೀಡಲಾಗಿದೆ ಎಂದು ಆಂದೋಲನವು ತಿಳಿಸಿದೆ.

ಕಳೆದ 10 ವರ್ಷಗಳಿಂದ ಕರ್ನಾಟಕದ ಹಲವು ಗ್ರಾಮಗಳಿಂದ ಮಹಿಳೆಯರು ಅಕ್ರಮ ಮದ್ಯ ಮಾರಾಟದ ದೂರುಗಳನ್ನು ಅಬಕಾರಿ ಇಲಾಖೆ, ಗ್ರಾಮ ಪಂಚಾಯತಿಗಳು, ಪೊಲೀಸ್ ಠಾಣೆಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಆದರೆ, ಆಂದೋಲನದ ಪ್ರಕಾರ, ಯಾವುದೇ ದೂರುಗಳ ಮೇಲೂ ಇದುವರೆಗೆ ಕ್ರಮ ಜರುಗಿಸಿರುವುದಿಲ್ಲ. ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಮದ್ಯದ ಮಾರಾಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಆಂದೋಲನವು ಸರ್ಕಾರಕ್ಕೆ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿಡುತ್ತಿದೆ.

ಮೊದಲ ಬೇಡಿಕೆಯೆಂದರೆ, ಮದ್ಯ ಮಾರಾಟಕ್ಕೆ ಪರವಾನಿಗೆ (ಲೈಸೆನ್ಸ್) ಹೊಂದಲು ಹರಿಯಾಣ, ಮಹಾರಾಷ್ಟ್ರ, ರಾಜಸ್ಥಾನದಂತಹ ರಾಜ್ಯಗಳಲ್ಲಿ ನೀಡಿದಂತೆ ಗ್ರಾಮಸಭೆಗಳಿಗೆ ಪರಮಾಧಿಕಾರ ನೀಡಬೇಕು. ವಿವಿಧ ರಾಜ್ಯಗಳ ಪಂಚಾಯತ್ ರಾಜ್ ಕಾನೂನಿನಂತೆ, ರಾಜ್ಯ ಸರ್ಕಾರಗಳು ಯಾವುದೇ ಒಂದು ಮದ್ಯದ ಅಂಗಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರವಾನಿಗೆ ನೀಡಲು ಗ್ರಾಮ ಸಭೆಯಲ್ಲಿ ಕನಿಷ್ಠ ಶೇಕಡಾ 20 ರಷ್ಟು ಮಹಿಳೆಯರ ಒಪ್ಪಿಗೆ ಪಡೆಯಬೇಕು. ಅಂದರೆ ಗ್ರಾಮಸಭೆಯ ಈ ನಿರ್ಣಯಕ್ಕೆ ಮಾನ್ಯತೆ ನೀಡಲೇ ಬೇಕು.

ಹಾಗೆಯೇ ನಮ್ಮ ರಾಜ್ಯದ ಪಂಚಾಯತ್ ರಾಜ್ ಕಾನೂನಿನಲ್ಲಿಯೂ ಈ ಅಂಶವನ್ನು ಅಳವಡಿಸಿ ಅನುಷ್ಠಾನಗೊಳಿಸಬೇಕು. ಈ ತರದ ಒಂದು ಅಂಶ 2016ರ ತನಕ ಕರ್ನಾಟಕದ ಪಂಚಾಯತ್ ರಾಜ್ ಕಾನೂನಿನಲ್ಲಿ ಇತ್ತು ಆದರೆ ಆ ಸಮಯದಲ್ಲಿ ಇದ್ದ ಸರ್ಕಾರ ಇದನ್ನು ತೆಗೆದು ಹಾಕಿತು ಎಂದು ಆಂದೋಲನವು ನೆನಪಿಸಿದೆ.

ಎರಡನೆಯ ಬೇಡಿಕೆಯು ಅಕ್ರಮ ಮದ್ಯ ಮಾರಾಟವನ್ನು ತಡೆಯಲು ಸಂಬಂಧಿಸಿದೆ. ಒಂದು ಕಡೆ ಪರವಾನಗಿ ಪಡೆದ ಅಂಗಡಿಗಳ ಸಮಸ್ಯೆಯಾದರೆ, ಅದಕ್ಕಿಂತ ಹೆಚ್ಚು, ಮನೆ ಮನೆಗಳಲ್ಲಿ, ಪಾನಷಾಪ್, ಕಿರಾಣಿ ಅಂಗಡಿ, ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ವಾಗುತ್ತಿದೆ.

ಪ್ರತಿ ಹಳ್ಳಿಯಲ್ಲಿ ಮಹಿಳೆಯರ ಜಾಗೃತ ಸಮಿತಿಗಳನ್ನು ರಚಿಸಿ, ಈ ಸಮಿತಿಗೆ ಅರೆ ನ್ಯಾಯಿಕ ಅಧಿಕಾರ (quasi judiciary power) ನೀಡಬೇಕು ಎಂದು ಬೇಡಿಕೆ ಇಡಲಾಗಿದೆ. ಕರ್ನಾಟಕ ಪಂಚಾಯತ್ ರಾಜ್ ಕಾನೂನಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಈಗಾಗಲೇ ಹೆಚ್ಚುವರಿ ಸಮಿತಿಗಳು ಮಾಡುವ ಅವಕಾಶ ಇದೆ ಎಂದು ಆಂದೋಲನವು ಈ ಬೇಡಿಕೆಯನ್ನು ಸಮರ್ಥಿಸಿಕೊಂಡಿದೆ.

You cannot copy content of this page

Exit mobile version