“..ಸೌಜನ್ಯ ಕೊಲೆ ಆರೋಪಿ ಸಂತೋಷ್ ರಾವ್ ಜೊತೆ ನಾನು ನಾಲ್ಕುವರೆ ತಿಂಗಳು ಬದುಕಿದ್ದೆ. 2012 ಅಕ್ಟೋಬರ್ 09 ರಂದು ಸೌಜನ್ಯ ಅತ್ಯಾಚಾರ-ಕೊಲೆ ನಡೆಯಿತು. 2012 ಅಕ್ಟೋಬರ್ 11 ರಂದು ಸಂತೋಷ್ ರಾವ್ ಆರೋಪಿ ಎಂದು ಎಫ್ಐಆರ್ ದಾಖಲಿಸಲಾಯಿತು..” ಪತ್ರಕರ್ತ ನವೀನ್ ಸೂರಿಂಜೆ ಬರಹದಲ್ಲಿ
ಸೌಜನ್ಯ ಕೊಲೆ ಆರೋಪಿ ಸಂತೋಷ್ ರಾವ್ ಜೊತೆ ನಾನು ನಾಲ್ಕುವರೆ ತಿಂಗಳು ಬದುಕಿದ್ದೆ. 2012 ಅಕ್ಟೋಬರ್ 09 ರಂದು ಸೌಜನ್ಯ ಅತ್ಯಾಚಾರ-ಕೊಲೆ ನಡೆಯಿತು. 2012 ಅಕ್ಟೋಬರ್ 11 ರಂದು ಸಂತೋಷ್ ರಾವ್ ಆರೋಪಿ ಎಂದು ಎಫ್ಐಆರ್ ದಾಖಲಿಸಲಾಯಿತು. ಇದಾಗಿ ಒಂದು ತಿಂಗಳು ಧರ್ಮಸ್ಥಳದಲ್ಲಿ ‘ಮುಂಡಾಸುಧಾರಿ ಕುಟುಂಬದವರ ಪಾತ್ರವಿದೆಯಂತೆ’ ಎಂಬ ಗುಸುಗುಸುಗಳ ಚರ್ಚೆ ಇತ್ತು. ಹೋರಾಟ, ಆಗ್ರಹಗಳು ಇನ್ನೂ ಶುರುವಾಗಿರಲಿಲ್ಲ.
ನಾನು, ಮುನೀರ್ ಕಾಟಿಪಳ್ಳ, ಗೆಳೆಯ ರಾಜೇಶ್ ರಾವ್ ಮತ್ತು ಹಲವು ಗೆಳೆಯರು ಈ ಬಗ್ಗೆ ಚರ್ಚೆ ನಡೆಸಿದೆವು. ಎಡಪಂಥೀಯರ ಬದಲಿಗೆ ಪ್ರಾಮಾಣಿಕ ಖಾವಿಧಾರಿ ನೇತೃತ್ವದಲ್ಲಿ ಹೋರಾಟ ಆರಂಭವಾದರೆ ಒಳ್ಳೆಯದು ಎಂಬ ನಿರ್ಧಾರಕ್ಕೆ ಬಂದೆವು.
ತಕ್ಷಣ ನಮಗೆ ನೆನಪಾಗಿದ್ದು ಹೋರಾಟಗಾರ ಕಮ್ ಸ್ವಾಮೀಜಿಯಾಗಿರುವ ಕೇಮಾರು ಈಶ ವಿಠಲದಾಸ ಸ್ವಾಮೀಜಿಗಳು. ಎಸ್ ಇಝಡ್ ರೈತ ಹೋರಾಟದಲ್ಲಿ ಆತ್ಮೀಯರಾಗಿದ್ದ ಕೇಮಾರು ಸ್ವಾಮೀಜಿ ಹಮ್ಮುಬಿಮ್ಮಿಲ್ಲದೆ ಗೆಳೆತನ ಮಾಡುವ ಸ್ವಭಾವದವರು. ಯಾವುದೇ ಹೋರಾಟದಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ತೋರಿಸಿದವರು.
04 ನವೆಂಬರ್ 2012 ರಂದು ನಾವು ಕೇಮಾರು ಈಶ ವಿಠಲ ದಾಸ ಸ್ವಾಮೀಜಿಗಳಿಗೆ ಕರೆ ಮಾಡಿದಾಗ ‘ಬೆಳ್ತಂಗಡಿಯ ಸೌಜನ್ಯ ಕೊಲೆಯ ಹಿಂದಿನ ಕೈವಾಡಗಳ ಗುಸುಗುಸು ಅವರ ಮಠಕ್ಕೂ ತಲುಪಿತ್ತು ಎಂದು ತಿಳಿಯಿತು. ನೀವೆಲ್ಲಾ ಜೊತೆಗಿದ್ದೀರಿ ಎಂದರೆ ನಾನು ಹೋರಾಟಕ್ಕೆ ಸಿದ್ದ’ ಎಂದರು. ಇವತ್ತೇ ಬೆಳ್ತಂಗಡಿ ಹೊರಡೋಣಾ ಅಂದವರು ‘ನಿಲ್ಲಿ, ಅಲ್ಲಿ ಸ್ಥಳೀಯರ ಜೊತೆ ಮಾತಾಡೋಣಾ. ಆಗ ನಮ್ಮ ಹೋರಾಟ ಇನ್ನಷ್ಟೂ ಗಟ್ಟಿಯಾಗುತ್ತದೆ’ ಎಂದರು. ಹಾಗಾಗಿ ಮರುದಿನ ಸೌಜನ್ಯ ಮನೆಗೆ ಹೋಗುವುದೆಂದು ನಿರ್ಧರಿಸಿದೆವು.
05 ನವೆಂಬರ್ 2012, ನಾವು ಕೇಮಾರು ಈಶ ವಿಠಲದಾಸ ಸ್ವಾಮೀಜಿ ನೇತೃತ್ವದಲ್ಲಿ ಸೌಜನ್ಯ ಮನೆಗೆ ಹೊರಟೆವು. ಸ್ವಾಮೀಜಿ ಜೊತೆಗಿನ ಕೋಆರ್ಡಿನೇಶನ್ ನನ್ನ ಜವಾಬ್ದಾರಿಯಾಗಿತ್ತು. ಕೇಮಾರು ಈಶ ವಿಠಲದಾಸ ಸ್ವಾಮೀಜಿಯವರು ಎರಡು ವಾಹನದಲ್ಲಿ ತನ್ನ ಶಿಷ್ಯರೊಂದಿಗೆ ಬಂದರು. ನಾವು ಸೌಜನ್ಯ ಮನೆಗೆ ಮದ್ಯಾಹ್ನ 2 ಗಂಟೆಗೆ ತಲುಪಿದ ಬಳಿಕ ಸ್ವಾಮೀಜಿಗಳನ್ನು ಭೇಟಿ ಮಾಡಲು ಮಹೇಶ್ ಶೆಟ್ಟಿ ತಿಮರೋಡಿ ಬಂದರು. ಅಂದು ತಿಮರೋಡಿ ಹೋರಾಟದ ಕಣದಲ್ಲಿ ಇರಲಿಲ್ಲ.
ಸೌಜನ್ಯ ಕುಟುಂಬಕ್ಕೆ ಸಾಂತ್ವಾನ ಹೇಳಿದ ಬಳಿಕ ಕೇಮಾರು ಸ್ವಾಮೀಜಿ ಸೌಜನ್ಯ ಮನೆಯಲ್ಲೇ ಮೊದಲ ಪತ್ರಿಕಾಗೋಷ್ಟೀ ನಡೆಸಿದರು. ಇದು ಸೌಜನ್ಯ ಪ್ರಕರಣದ ಮೊದಲ ಸುದ್ದಿಗೋಷ್ಟೀ ಮತ್ತು ಮೊದಲ ಬಾರಿಗೆ ಮುಂಡಾಸುಧಾರಿಯ ಕುಟುಂಬದವರ ಮೇಲೆ ಬಹಿರಂಗ ಅನುಮಾನ ವ್ಯಕ್ತಪಡಿಸಿದ ಸುದ್ದಿಗೋಷ್ಟಿ ! ನಾವು ಮೊದಲೇ ಮಾತಾಡಿಕೊಂಡಂತೆ ಕೇಮಾರು ಸ್ವಾಮೀಜಿಗಳು ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಯಾಕೆಂದರೆ ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವೂ, ಕೇಂದ್ರದಲ್ಲಿ ಯುಪಿಎ ಸರ್ಕಾರವೂ ಇತ್ತು. ಏನಿಲ್ಲವೆಂದರೂ ರಾಜ್ಯ ಪೊಲೀಸರು ಮತ್ತು ಸಿಬಿಐ ಶಾಮೀಲಾಗಿ ಕೆಲಸ ಮಾಡಲ್ಲ ಎಂಬ ಭ್ರಮೆಯಲ್ಲಿ ನಾವಿದ್ದೆವು.
06 ನವೆಂಬರ್ 2012, ಅಂದರೆ ಮರುದಿನ ಹಲವು ಪ್ರಮುಖ ದಿನಪತ್ರಿಕೆಗಳು ಕೆಲ ಪತ್ರಿಕೆಗಳಲ್ಲಿ “ಧರ್ಮಸ್ಥಳದಲ್ಲಿ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣ. ಸಿಬಿಐ ತನಿಖೆಗೆ ಆಗ್ರಹ, ಸೌಜನ್ಯ ಹತ್ಯೆಯಲ್ಲಿ ಪ್ರಭಾವಿಗಳು” ಎಂಬ ತಲೆಬರಹದ ಸುದ್ದಿಗಳು ಪ್ರಸಾರವಾದವು.
07 ನವೆಂಬರ್ 2012, ಅಂದರೆ ಕೇವಲ ಒಂದು ದಿನದ ಬಳಿಕ ನನ್ನನ್ನು 2012 ಜುಲೈ 28 ರಂದು ಹಿಂದುತ್ವವಾದಿಗಳು ನಡೆಸಿದ್ದ ಹೋಂ ಸ್ಟೇ ಮೇಲಿನ ದಾಳಿಯ ಸುದ್ದಿ ಸಂಬಂಧ ಬಂಧಿಸುತ್ತಾರೆ. ಬಿಜೆಪಿ ಸರ್ಕಾರ, ನನ್ನಿಂದಾಗಿ ಜೈಲಿನಲ್ಲಿರುವ 42 ಹಿಂದುತ್ವ ಕಾರ್ಯಕರ್ತರು, 2012 ನವೆಂಬರ್ 05 ರಂದು ಕೇಮಾರು ಶ್ರೀಗಳ ಭೇಟಿ, ಸುದ್ದಿಗೋಷ್ಠಿ, ನವೆಂಬರ್ 06 ರಂದು ‘ಸಿಬಿಐಗೆ ವಹಿಸಿ’ ಎಂದು ಮೊದಲ ಸುದ್ದಿ ಪ್ರಕಟ. ಇದಾದ ಬಳಿಕ ನವೆಂಬರ್ 07 ರಂದು ನನ್ನ ಬಂಧನ. ಈ ಕ್ರೊನಾಲಜಿಯನ್ನು ಗಮನಿಸಬೇಕು.
ಮಂಗಳೂರು ಜೈಲಿನಲ್ಲಿ ಹಿಂದೂ- ಮುಸ್ಲಿಂ ಎಂಬ ಎರಡು ವಿಭಾಗಗಳಿವೆ. ನನ್ನಿಂದಾಗಿ ಅರೆಸ್ಟ್ ಆಗಿರುವ 43 ಹಿಂದುತ್ವ ಕಾರ್ಯಕರ್ತರು ಹಿಂದೂ ಬ್ಯಾರಕ್ ನಲ್ಲಿ ಇದ್ದಿದ್ದರಿಂದ ನನ್ನನ್ನು ಮುಸ್ಲೀಮರಿದ್ದ ಬ್ಯಾರಕ್ ಗೆ ಹಾಕಿದ್ದರು. ಅಲ್ಲಿ ನೋಡಿದ್ರೆ ನನ್ನಂತೆಯೇ ಹಿಂದುತ್ವ ವಿರೋಧಿ ನಕ್ಸಲ್ ಮುಖಂಡರು, ಹಿಂದುತ್ವವಾದಿ ರೌಡಿಶೀಟರ್ಗಳ ವಿರೋಧಿ ಪಾಳಯದ ಹಿಂದೂ ಗೂಂಡಾಗಳೂ ಇದ್ದರು. ಆಶ್ಚರ್ಯವೆಂದರೆ ನನ್ನದೇ ಬ್ಯಾರಕ್ ನಲ್ಲಿ ಸೌಜನ್ಯ ಕೊಲೆ ಆರೋಪಿ ಸಂತೋಷ್ ರಾವ್ ಇದ್ದರು. ಸಂತೋಷ್ ರಾವ್ ಬ್ರಾಹ್ಮಣರಾಗಿದ್ದುಕೊಂಡು ಹಿಂದೂ ಬ್ಯಾರಕ್ ಗೆ ಹೋಗಬೇಕಿತ್ತಲ್ವಾ ? ಎಂಬ ನನ್ನ ಪ್ರಶ್ನೆಗೆ ಶೀಘ್ರ ಉತ್ತರ ಸಿಕ್ಕಿತ್ತು. ಸಂತೋಷ್ ರಾವ್ ಬಂಧನವಾದಾಗ ಹಿಂದೂ ಬ್ಯಾರಕ್ ಗೇ ಹಾಕಲಾಗಿತ್ತು. ಆದರೆ ಅಲ್ಲಿ ಸಂತೋಷ್ ರಾವ್ ಕೊಲೆ ಯತ್ನ ನಡೆದಿತ್ತು. ಸಂತೋಷ್ ರಾವ್ ಜೈಲಿನಲ್ಲಿ ಕೊಲೆಯಾದರೆ ಸೌಜನ್ಯ ವಿವಾದವೇ ಇರುತ್ತಿರಲಿಲ್ಲ. ಹಾಗಾಗಿ ಹಲವು ರೌಡಿಗಳು ಸೇರಿಕೊಂಡು ಸಂತೋಷ್ ರಾವ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಆದರೆ ಅದೃಷ್ಟಾವಶಾತ್ ಜೈಲು ಸಿಬ್ಬಂದಿಗಳ ಮಧ್ಯಪ್ರವೇಶದಿಂದಾಗಿ ಬದುಕುಳಿದ ಸಂತೋಷ್ ರಾವ್, ಮುಸ್ಲೀಮರ ಬ್ಯಾರಕ್ ಸೇರಿದ್ದರು. ನಾನು ಮತ್ತು ಸಂತೋಷ್ ರಾವ್ ನಾಲ್ಕು ತಿಂಗಳು ಒಂದೇ ಕೋಣೆಯಲ್ಲಿ ಒಟ್ಟಿಗೇ ಬದುಕಿದ್ದೆವು. ಕಾನೂನು, ವೈದ್ಯಕೀಯ ದಾಖಲೆ, ಕೋರ್ಟ್ ದಾಖಲೆಗಳ ಪ್ರಕಾರ ಮಾತ್ರ ಸಂತೋಷ್ ರಾವ್ ನಿರಪರಾಧಿಯಲ್ಲ. ನಾನು ವೈಯಕ್ತಿಕವಾಗಿ ನಾಲ್ಕು ತಿಂಗಳು ಒಟ್ಟಿಗೆ ಒಂದೇ ಕೋಣೆಯಲ್ಲಿ ಬದುಕಿದ್ದ ಅನುಭವದಂತೆಯೂ ಸಂತೋಷ್ ರಾವ್ ಒರ್ವ ಅಮಾಯಕ, ಪ್ರಾಮಾಣಿಕ, ನಿರುಪದ್ರವಿ ಮಾನಸಿಕ ಅಸ್ವಸ್ಥ.
ನಾನು ಜೈಲಿನಲ್ಲಿ ಇರುವಷ್ಟು ಕಾಲ ನನ್ನ ಬಿಡುಗಡೆಗಾಗಿ ಮುನೀರ್ ಕಾಟಿಪಳ್ಳ ಮತ್ತು ಎಡಪಂಥೀಯರು ಮಗ್ನರಾಗಿದ್ದರು. 24 ಮಾರ್ಚ್ 2013 ರಂದು ನಾನು ಹೈಕೋರ್ಟ್ ಆದೇಶದಂತೆ ಬಿಡುಗಡೆಗೊಂಡೆನು. 2012 ನವೆಂಬರ್ 05 ರಂದು ಎಡಪಂಥೀಯರ ಯೋಜನೆಯಂತೆ ನಡೆದ ಕೇಮಾರು ಶ್ರೀಗಳ ಪತ್ರಿಕಾಗೋಷ್ಠಿ ಬಳಿಕ 2013 ಮಾರ್ಚ್ ಅಂತ್ಯದ ವೇಳೆ ಸೌಜನ್ಯ ಹೋರಾಟವನ್ನು ಮುನೀರ್ ಕಾಟಿಪಳ್ಳ ನೇತೃತ್ವದ ಡಿವೈಎಫ್ಐ, ಎಸ್ಎಫ್ಐ, ಜನವಾದಿ ಮಹಿಳಾ ಸಂಘಟನೆಗಳು ಹೋರಾಟ ಕೈಗೆತ್ತಿಕೊಂಡವು. ಮೀನಾಕ್ಷಿ ಬಾಳಿ, ಕೆ ನೀಲಾ ಅವರನ್ನು ಬೆಳ್ತಂಗಡಿಯ ಊರೂರು ಸುತ್ತಿ ಭಾಷಣ ಮಾಡಿದರು. ಅವಿಭಜಿತ ಕರಾವಳಿಯ ಜನ ಜಾಗೃತಿ ಸಫಲವಾಗಿತ್ತು. 2012 ರಲ್ಲಿ ಇದ್ದ ಬಿಜೆಪಿ ಸರ್ಕಾರ, ಗೃಹ ಸಚಿವ ಆರ್ ಅಶೋಕ್ ರ ಪೊಲೀಸರು ಪ್ರಭಾವಿಗಳನ್ನು ರಕ್ಷಿಸುತ್ತಿದೆ ಎಂಬುದನ್ನು ಕರಾವಳಿಯ ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಎಡಪಂಥೀಯರು ಸಫಲರಾಗಿದ್ದರು. ಇಡೀ ಜಿಲ್ಲೆಯ ಜನ ಸೌಜನ್ಯ ಹಂತಕರನ್ನು ರಕ್ಷಿಸಿದ ಬಿಜೆಪಿ ವಿರುದ್ದ ಸಿಡಿದೆದ್ದಿದ್ದರು. ಇದರ ಪರಿಣಾಮ ಎಂಬಂತೆ 05 ಮೇ 2013 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೋಮುವಾದದ ಪ್ರಯೋಗಶಾಲೆ ಎಂದು ಅನ್ನಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯವಾಗಿ ಸೋಲನ್ನಪ್ಪಿತ್ತು. 2013 ಎನ್ನುವುದು ಮೋದಿ ಹವಾ ತಾರಕಕ್ಕೇರಿದ್ದ ಸಂದರ್ಭ. ಅಂತಹ ಪರಿಸ್ಥಿತಿಯಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕರಾವಳಿಯಲ್ಲಿ ಒಂದಕ್ಕಿಂತ ಹೆಚ್ಚು ಸೀಟು ಪಡೆಯಲಾಗಲಿಲ್ಲ.
2013 ಮೇ ಯಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರವೂ ಹೋರಾಟ ನಿಲ್ಲಲಿಲ್ಲ. ಮೇ ತಿಂಗಳಲ್ಲೂ ಹೋರಾಟ ತೀವ್ರಗೊಳಿಸಲಾಯಿತು. ಹೋರಾಟದ ಪರಿಣಾಮವಾಗಿ 06 ಜೂನ್ 2013 ರಲ್ಲಿ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಬಿಐಗೆ ವಹಿಸಲು ಸಿದ್ದ ಎಂದು ಘೋಷಿಸಿದರು (ಆದರೆ ಸಿಬಿಐ ಅಧಿಕೃತವಾಗಿ ತನಿಖೆ ಪ್ರಾರಂಭಿಸಲಿಲ್ಲ)
2013 ರ ಅಕ್ಟೋಬರ್ 09 ರಂದು ಮೊದಲ ಬಾರಿ ಬೆಳ್ತಂಗಡಿಯಲ್ಲಿ ಮುನೀರ್ ಕಾಟಿಪಳ್ಳ ಬಿ ಎಂ ಭಟ್ ಬೃಹತ್ ಸಮಾವೇಶ ಸಂಘಟಿಸಿದರು. ಶ್ರೀರಾಮ ರೆಡ್ಡಿ, ಡಾ ಹರಳೆ ಮತ್ತು ಸಾಹಿತಿ ಅತ್ರಾಡಿ ಅಮೃತ ಶೆಟ್ಟಿಯವರು, ಕೆ ನೀಲಾ, ಮೀನಾಕ್ಷಿ ಬಾಳಿಯವರು ಭಾಷಣ ಮಾಡಿ ಜನರನ್ನು ಬಡಿದೆಬ್ಬಿಸಿದರು. ಈ ಸಭೆಯೇ ಇಡೀ ಸೌಜನ್ಯ ಚಳವಳಿಗೆ ದಿಕ್ಸೂಚಿಯಾಗಿ ರಾಜ್ಯಮಟ್ಟದಲ್ಲಿ ಗಮನ ಸೆಳೆಯಿತು.
ಜನವಾದಿ ಮಹಿಳಾ ಸಂಘಟನೆಯು ಬೆಳ್ತಂಗಡಿಯಲ್ಲಿ ಬೀಡು ಬಿಟ್ಟು ಜನರನ್ನು ಸಂಘಟಿಸುವ ಕೆಲಸ ಮಾಡಿತ್ತು. ಇದರ ಭಾಗವಾಗಿ ಅಶೋಕನಗರ, ಮುಂಡ್ರುಪಾಡಿ ಗ್ರಾಮಗಳಲ್ಲಿ ಓಡಾಡಿದ್ದ ಕೆ ನೀಲಾ, ಮೀನಾಕ್ಷಿ ಬಾಳಿ, ಕೆ ಎಸ್ ವಿಮಲಾ ವಿರುದ್ಧ ಠಾಣೆಯಲ್ಲಿ ದೂರು ದಾಖಲಾಗಿತ್ತು. ಠಾಣೆಗೆ ಹೋಗುವಾಗ ಕೆ ನೀಲಾ, ಮೀನಾಕ್ಷಿ ಬಾಳಿ, ವಿಮಲಾರವರ ವಾಹನವನ್ನು ಅಪಘಾತಕ್ಕೊಳಪಡಿಸುವ ಪ್ರಯತ್ನ ನಡೆದಿತ್ತು.
ಆ ಬಳಿಕ ಬೆಳ್ತಂಗಡಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಬೆಳ್ತಂಗಡಿ ಸೀಮಿತವಾಗಿ ಹೋರಾಟಗಳು ನಡೆಯಲಾರಂಭಿಸಿದವು.
12 ಅಕ್ಟೋಬರ್ 2013 ರಂದು ಟಿವಿ 9 ಟಿವಿ ವಾಹಿನಿಯು ಸೌಜನ್ಯ ಕೊಲೆ ಅತ್ಯಾಚಾರ ಪ್ರಕರಣವನ್ನು ಚರ್ಚೆಗೆ ಕೈಗೆತ್ತಿಕೊಂಡಿತ್ತು. ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ತಾಯಿ ಕುಸುಮಾವತಿ, ಸೌಜನ್ಯ ತಂದೆ, ಸೌಜನ್ಯ ಮಾವನವರು ಟಿವಿ 9 ಚರ್ಚೆಯಲ್ಲಿ ಭಾಗವಹಿಸಿ ನೇರವಾಗಿ ಮುಂಡಾಸುಧಾರಿಯ ವಿರುದ್ದ ಆರೋಪಿಸಿದರು. ಯಾವುದೇ ಜಾಹೀರಾತುಗಳಿಲ್ಲದೇ ಗಂಟೆಗಟ್ಟಲೆ ಸೌಜನ್ಯ ಚರ್ಚೆ ನಡೆದು ರಾಜ್ಯಾದ್ಯಂತ ಜನಜಾಗೃತಿ ನಡೆಯಿತು. ಟಿವಿ 9 ಚರ್ಚೆ ಮುಗಿದಾಗ ಮಹೇಶ್ ಶೆಟ್ಟಿ ತಿಮರೋಡಿಯವರು ‘ಹೀರೋ’ ಆಗಿದ್ದರು. ಬೆಂಗಳೂರಿನಿಂದ ಬೆಳ್ತಂಗಡಿ ವಾಪಸ್ ಆಗುವಾಗ ಸಾವಿರಾರು ಸಂಖ್ಯೆಯಲ್ಲಿ ತಿಮರೋಡಿ ಸ್ವಾಗತಕ್ಕೆ ಜನ ಸೇರಿದರು. ನಂತರ ನಡೆದಿದ್ದು ತುಳುನಾಡಿನ ಇತಿಹಾಸದಲ್ಲಿ ಬರೆದಿಡಬೇಕಾದ ಇತಿಹಾಸ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಗ್ರಾಮಗಳಲ್ಲಿ ಸೌಜನ್ಯ ಪರ ಹೋರಾಟ ನಡೆಯಿತು. ತಿಮರೋಡಿಯವರು ಬರುತ್ತಾರೆ ಎಂದರೆ ಒಂದೊಂದು ಗ್ರಾಮದಲ್ಲಿ ಸಾವಿರಾರು ಜನ ಸೇರುತ್ತಿದ್ದರು.
2013 ಅಕ್ಟೋಬರ್ 17 ರಂದು ಉಪವಾಸ ಸತ್ಯಾಗ್ರಹ ಮತ್ತು ಬೃಹತ್ ಸಮಾವೇಶವನ್ನು ಬೆಳ್ತಂಗಡಿಯಲ್ಲಿ ಮುನೀರ್ ಕಾಟಿಪಳ್ಳ, ಬಿ ಎಂ ಭಟ್, ಶಿವಕುಮಾರ್ ನೇತೃತ್ವದಲ್ಲಿ ಸಿಪಿಐಎಂ ಆಯೋಜಿಸಿತ್ತು. ಈ ಸಮಾವೇಶದಲ್ಲಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಜಿ ವಿ ಶ್ರೀರಾಮರೆಡ್ಡಿ ಅಧ್ಯಕ್ಷತೆ ವಹಿಸಿದ್ದರೆ, ಕೇಮಾರು ಈಶ ವಿಠಲದಾಸ ಸ್ವಾಮೀಜಿ ಮುಖ್ಯ ಭಾಷಣಕಾರರಾಗಿದ್ದರು. ಉಪವಾಸ ಸತ್ಯಾಗ್ರಹ ಬೆಳಗ್ಗೆ 11ರಿಂದ 4.30ರವರೆಗೆ ಐದೂವರೆ ಗಂಟೆ ನಡೆಯಿತು. ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ ಸಾವಿರಾರು ಪ್ರತಿಭಟನಾಕಾರರು ಧರಣಿಯಲ್ಲಿ ಭಾಗವಹಿಸಿದ್ದರು. ಬಂದವರಲ್ಲಿ ಮಹಿಳೆಯರೇ ಹೆಚ್ಚಾಗಿದ್ದರು. ಬೆಳ್ತಂಗಡಿ ಡಿವೈಎಫ್‌ಐ ಕಚೇರಿಯಿಂದ ತಾಲೂಕು ಕಚೇರಿ ಮೈದಾನದವರೆಗೆ ಪ್ರತಿಭಟನಾಕಾರರು ಮೆರವಣಿಗೆ ಮೂಲಕ ಆಗಮಿಸಿದರು. ಸೌಜನ್ಯಾಳ ಹೆತ್ತವರು ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿದರೆ, ಜಿ.ವಿ. ಶ್ರೀ ರಾಮ ರೆಡ್ಡಿ ಸೌಜನ್ಯಾಳ ಭಾವಚಿತ್ರಕ್ಕೆ ಪುಷ್ಟಾರ್ಚನೆ ಮಾಡಿದರು. ಸಂಜೆ ಸೌಜನ್ಯಾಳ ಹೆತ್ತವರು ಪಾನೀಯ ಸೇವಿಸುವುದರೊಂದಿಗೆ ಉಪವಾಸ ಸತ್ಯಾಗ್ರಹ ಮುಕ್ತಾಯವಾಯಿತು.
2013 ಅಕ್ಟೋಬರ್ 31 ರಂದು ಸಿಐಡಿ ತನ್ನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿತು. ಸಿಐಡಿ ವರದಿಯಲ್ಲಿ ಪ್ರಭಾವಿ ಮುಂಡಾಸುಧಾರಿ ಕುಟುಂಬದ ಹೆಸರನ್ನು ಕೈಬಿಡಲಾಗಿತ್ತು.
2013 ನವೆಂಬರ್ 01 ರಂದು ಎಡಸಂಘಟನೆಗಳ ಯುವಕರು, ವಿದ್ಯಾರ್ಥಿ ಸಮುದಾಯ ಬೀದಿಗಿಳಿಯಿತು. ಬೆಳ್ತಂಗಡಿಯಲ್ಲಿ ವಿದ್ಯಾರ್ಥಿಗಳು, ಎಡಪಂಥೀಯ ಪಕ್ಷಗಳು ಮತ್ತು ಜಿಲ್ಲೆಯ ಇತರ ಸಂಘಟನೆಗಳು ಬೀದಿಗಿಳಿದು ಕೇಂದ್ರ ತನಿಖಾ ದಳದಿಂದ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಪೊಲೀಸರು ಲಾಠಿ ಪ್ರಹಾರ ನಡೆಸಿ ಕನಿಷ್ಠ 22 ಪ್ರತಿಭಟನಾಕಾರರನ್ನು ಬಂಧಿಸಿದರು. ಅದೇ ದಿನ ಅಂದರೆ ನವೆಂಬರ್ 01 ರಂದು ಎಡಪಂಥೀಯ ಯುವ ಸಂಘಟನೆಯಾದ ಡಿವೈಎಫ್ಐ, ಎಸ್ಎಫ್ಐ ಮುಖಂಡರುಗಳು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆ ಪ್ರದರ್ಶನ ಮಾಡಿ ಬಂಧನಕ್ಕೊಳಗಾದರು.
2013 ನವೆಂಬರ್ 04 ರಂದು ಮೊದಲ ಬಾರಿ ಮುಂಡಾಸುಧಾರಿಗಳು ವಿವಾದದ ಬಗ್ಗೆ ಸುಧ್ದಿಗೋಷ್ಠಿ ನಡೆಸಿ ತಮ್ಮನ್ನು ತಾವು ಸಮರ್ಥಿಸಿಕೊಂಡರು. ಅಂದಿನ ಸುದ್ದಿಗೋಷ್ಠಿಗೆ ನಾನು ಹೋಗಿದ್ದೆ. “ನಿಮ್ಮ ವಠಾರದಲ್ಲಿ 452 ಕ್ಕೂ ಹೆಚ್ಚು ಅಸಹಜ ಸಾವುಗಳಾಗಿವೆ. ಅದರ ಬಗ್ಗೆ ಏನಂತೀರಿ” ಎಂದು ಪ್ರಶ್ನಿಸಿದೆ. “ನಮಗೂ ಅದಕ್ಕೂ ಸಂಬಂಧ ಇಲ್ಲ. ಕೆಲವರು ಪುಣ್ಯ ಕ್ಷೇತ್ರದಲ್ಲಿ ಸತ್ತರೆ ಒಳ್ಳೆಯದೆಂದು ಬಂದು ಸಾಯುತ್ತಾರೆ” ಎಂದು ಯಾವ ಪಶ್ಚಾತಾಪ, ಬೇಸರ, ಕರುಣೆಯೂ ಇಲ್ಲದೆ ಉತ್ತರಿಸಿದರು. “452 ಸಾವುಗಳಲ್ಲಿ ಮಹಿಳೆಯರ ಸಾವುಗಳೇ ಅತೀ ಹೆಚ್ಚು. ಆ ಎಲ್ಲಾ ಸಾವುಗಳು ಆಗಿರುವುದು ತಮಗೆ ಸೇರಿದ ಲಾಡ್ಜ್ ಗಳಲ್ಲಿ ! ಸಾಮಾನ್ಯವಾಗಿ ಲಾಡ್ಜ್ ಗಳಲ್ಲಿ ಸಾವಾದರೆ ಮ್ಯಾನೇಜರ್ ಅನ್ನೋ ಮಾಲೀಕರನ್ನೋ ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಾರೆ. ತಮ್ಮನ್ನು ಎಷ್ಟು ಭಾರಿ ಪೊಲೀಸರು ಠಾಣೆಗೆ ಕರೆದಿದ್ದರು ? ತಾವು ವಿಚಾರಣೆಗೆ ಹಾಜರಾಗಿದ್ದೀರಿ ?” ಎಂದು ಪ್ರಶ್ನಿಸಿದೆ. “ಇಲ್ಲ, ನನ್ನನ್ನು ಪೊಲೀಸರು ವಿಚಾರಿಸಿಲ್ಲ” ಎಂದರು. ಈಗ ಮುಂಡಾಸುಧಾರಿಗಳ ಕೈ ಅಕ್ಷರಶಃ ನಡುಗುತ್ತಿತ್ತು. “ನೋಡಿ, ಈ ಕಾರಣಕ್ಕಾಗಿಯೇ ಜನರು ಸಿಬಿಐ ತನಿಖೆಗೆ ಒತ್ತಾಯಿಸಿರೋದು. ನಿಮ್ಮ ವಠಾರದಲ್ಲಿ, ನಿಮ್ಮದೇ ಮಾಲೀಕತ್ವದ ಲಾಡ್ಜ್ ಗಳಲ್ಲಿ ನೂರಾರು ಮಹಿಳೆಯರು ಅಸಹಜವಾಗಿ ಸಾವನ್ನಪ್ಪಿದ್ದರೂ ಒಂದೇ ಒಂದು ಬಾರಿ ಪೊಲೀಸರು ತಮ್ಮನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿಲ್ಲ ಎಂದರೆ ತಾವೆಷ್ಟು ಪ್ರಭಾವಶಾಲಿಗಳಲ್ಲವೇ ?” ಎಂಬ ಪ್ರಶ್ನೆಗೆ ಉತ್ತರ ನೀಡದೇ ಸುದ್ಧಿಗೋಷ್ಠಿಯಿಂದ ಎದ್ದು ಹೊರಟಿದ್ದರು.
ಒಂದೆಡೆ ತಿಮರೋಡಿಯವರು 2013 ನವೆಂಬರ್, ಡಿಸೆಂಬರ್ ಪೂರ್ತಿ ಕರಾವಳಿಯ ಗ್ರಾಮ ಗ್ರಾಮಗಳಲ್ಲಿ ಹೋರಾಟಗಳು ಆಯೋಜನೆ ಮಾಡಿದರು. ಎಡಪಂಥೀಯರು ಕೂಡಾ ಪ್ರತ್ಯೇಕವಾಗಿ ಸಮಾವೇಶಗಳನ್ನು ಆಯೋಜಿಸಿದರು
ಎಡ-ಬಲಗಳ ಪ್ರತೀ ಪ್ರತ್ಯೇಕ ಸಮಾವೇಶದಲ್ಲೂ ಸಾವಿರಕ್ಕಿಂತ ಕಡಿಮೆ ಜನ ಸೇರಲೇ ಇಲ್ಲ. ಇದು ಸೌಜನ್ಯ ಅತ್ಯಾಚಾರ-ಕೊಲೆಯಾದ ಬಳಿಕದ ಮೊದಲ ವರ್ಷದಲ್ಲಿ ನಡೆದ ಹೋರಾಟದ ಇತಿಹಾಸ. 2025 ಅಕ್ಟೋಬರ್ 09 ಕ್ಕೆ ಸೌಜನ್ಯ ಅತ್ಯಾಚಾರ ಕೊಲೆಯಾಗಿ 13 ವರ್ಷಗಳಾಗುತ್ತಿದ್ದು ಇನ್ನೂ ನೈಜ ಆರೋಪಿಗಳ ಬಂಧನವಾಗಿಲ್ಲ. ಹಾಗಾಗಿ ಹೋರಾಟದ ಪ್ರಾರಂಭದ ದಿನಗಳನ್ನು ಮೆಲುಕು ಹಾಕಲಾಗಿದೆ.