ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ನೋಟಿಸ್ ನೀಡಿದ್ದಾರೆ.
ಈ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುವ ಸಂಬಂಧ, ಒಂದು ವಾರದೊಳಗೆ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ಸೂಚಿಸಿದ್ದಾರೆ. ಹಾಗಾಗಿ, ಸಚಿವ ಜಮೀರ್ ಅಹ್ಮದ್ ಅವರು ಸೋಮವಾರ (ಸೆಪ್ಟೆಂಬರ್ 22, 2025) ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಪ್ರಕರಣದ ಹಿನ್ನೆಲೆ
2019 ರಲ್ಲಿ ನಡೆದ ಐ ಮಾನಿಟರಿ ಅಡ್ವೈಸರಿ (IMA) ಕಂಪನಿಯ ಬಹುಕೋಟಿ ರೂ. ವಂಚನೆ ಹಗರಣದಲ್ಲಿ ಜಮೀರ್ ಅಹ್ಮದ್ ಅವರು ನಂಟು ಹೊಂದಿದ್ದರು ಎಂಬ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ED) ಅವರ ಮನೆಗಳ ಮೇಲೆ ದಾಳಿ ನಡೆಸಿತ್ತು.
ಇ.ಡಿ. ನೀಡಿದ ವರದಿಯನ್ನು ಆಧರಿಸಿ, ಅಂದಿನ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಜಮೀರ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಆಗ ಜಾರಿಯಲ್ಲಿದ್ದ ಭ್ರಷ್ಟಾಚಾರ ನಿಗ್ರಹ ದಳ (ACB) ಪ್ರಕರಣ ದಾಖಲಿಸಿತ್ತು.
ಎಸಿಬಿ ರದ್ದಾದ ನಂತರ ಈ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸರಿಗೆ ವರ್ಗಾಯಿಸಲಾಗಿದೆ. ಪ್ರಸ್ತುತ ಲೋಕಾಯುಕ್ತ ಪೊಲೀಸರು ಸಚಿವರ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.