ಶಿವಮೊಗ್ಗ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ವೈಖರಿಯು ಬ್ರಿಟಿಷರು ಮತ್ತು ಟಿಪ್ಪು ಸುಲ್ತಾನನ ಆಡಳಿತವನ್ನೂ ನಾಚಿಸುವಂತಿದೆ. ಜಾತಿ ಸಮೀಕ್ಷೆಯ ನೆಪವೊಡ್ಡಿ ಅವರು ಸಮಾಜದಲ್ಲಿ ವಿಷ ಬೀಜ ಬಿತ್ತಲು ಹೊರಟಿದ್ದಾರೆ. ಭಗವಂತ ಅವರಿಗೆ ಒಳ್ಳೆಯದು ಮಾಡುವುದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ದೂರಿದರು.
ಭಾನುವಾರ ಸುದ್ದಿಗಾರರ ಮುಂದೆ ಮಾತನಾಡಿದ ಅವರು, “ಮುಖ್ಯಮಂತ್ರಿಯಾಗಿ ಅವರು ಅಭಿವೃದ್ಧಿ ಹಾಗೂ ಮಾನವ ಕಲ್ಯಾಣಕ್ಕೆ ಶ್ರಮಿಸಬೇಕಿತ್ತು. ಆದರೆ, ಧರ್ಮಸ್ಥಳದ ವಿಚಾರದಲ್ಲಿ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಗಣಪತಿ ಹಬ್ಬದ ಸಂದರ್ಭದಲ್ಲಿ ಹೊಸ ಕಾನೂನನ್ನು ಜಾರಿಗೊಳಿಸಿ ಅದ್ದೂರಿ ಮೆರವಣಿಗೆಗಳಿಗೆ ಅಡ್ಡಗಾಲು ಹಾಕಿದ್ದಾರೆ. ಹಿಂದೂ ಕಾರ್ಯಕರ್ತರನ್ನು ಬಂಧಿಸಿ ಸಮಾಜ ಒಡೆಯಲು ಹೊರಟಿದ್ದಾರೆ” ಎಂದು ಕಿಡಿಕಾರಿದರು.
“ರಾಜ್ಯದಲ್ಲಿನ ಬಹುತೇಕ ರಸ್ತೆಗಳು ಗುಂಡಿಮಯವಾಗಿವೆ. ಅವುಗಳ ದುರಸ್ತಿಗೆ ಆಗ್ರಹಿಸಿ ಸೆಪ್ಟೆಂಬರ್ 24ರಂದು ರಾಜ್ಯದಾದ್ಯಂತ ರಸ್ತೆ ತಡೆ ನಡೆಸಿ ಪ್ರತಿಭಟಿಸುತ್ತೇವೆ” ಎಂದು ಅವರು ತಿಳಿಸಿದರು.