ಬೆಂಗಳೂರಿನ ಕೋರಮಂಗಲದಲ್ಲಿರುವ ಕೇಂದ್ರೀಯ ಸದನದ ಕೇಂದ್ರ ಸರ್ಕಾರಿ ಕಚೇರಿಗಳ ಸಂಕೀರ್ಣದಲ್ಲಿ ₹8 ಲಕ್ಷ ಲಂಚದ ಹಣವನ್ನು ಪಡೆಯುತ್ತಿದ್ದ ಕೇಂದ್ರ ಜಿಎಸ್‌ಟಿ (Central GST) ಹಿರಿಯ ಅಧಿಕಾರಿಯೊಬ್ಬರು ಹಾಗೂ ಅವರ ಖಾಸಗಿ ಮಧ್ಯವರ್ತಿಯನ್ನು ಕರ್ನಾಟಕ ಲೋಕಾಯುಕ್ತ ಪೊಲೀಸರು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಬಂಧಿತ ಸಾರ್ವಜನಿಕ ಅಧಿಕಾರಿಯನ್ನು ದಕ್ಷಿಣ ಕಮಿಷನರೇಟ್‌ನ ದಕ್ಷಿಣ ವಿಭಾಗ-4, ಎ-ರೇಂಜ್‌ನ ಸೆಂಟ್ರಲ್ ಜಿಎಸ್‌ಟಿ ಸೂಪರಿಂಟೆಂಡೆಂಟ್ ಮೋಹಿತ್ ಎಂದು ಗುರುತಿಸಲಾಗಿದೆ. ಅಧಿಕಾರಿಯ ಪರವಾಗಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಸಲ್ಮಾನ್ ಎಂಬ ಖಾಸಗಿ ವ್ಯಕ್ತಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಾಕಿ ಇರುವ ಸೆಂಟ್ರಲ್ ಜಿಎಸ್‌ಟಿ ಮೊತ್ತಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಸುಳ್ಳು ದೂರು ಸೃಷ್ಟಿಸಲಾಗಿದ್ದು, ಈ ವಿಚಾರವಾಗಿ ಕಾನೂನು ಕ್ರಮ ಕೈಗೊಳ್ಳದೆ ಕಡತವನ್ನು ಮುಕ್ತಾಯಗೊಳಿಸಲು ಸೂಪರಿಂಟೆಂಡೆಂಟ್ ಮೋಹಿತ್ ಮಧ್ಯವರ್ತಿ ಸಲ್ಮಾನ್ ಮೂಲಕ ₹8 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಜಮೀರ್ ಎಂಬುವವರು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಪ್ರಾಥಮಿಕ ಪರಿಶೀಲನೆಯ ನಂತರ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದರು. ಕೇಂದ್ರೀಯ ಸದನದಲ್ಲಿರುವ ಸೂಪರಿಂಟೆಂಡೆಂಟ್ ಕಚೇರಿಯಲ್ಲೇ ಬಲೆ ಬೀಸಿದ ಲೋಕಾಯುಕ್ತ ತಂಡ, ಆರೋಪಿಗಳು ಲಂಚದ ಹಣ ಪಡೆಯುತ್ತಿದ್ದಾಗ ದಾಳಿ ನಡೆಸಿ ₹8 ಲಕ್ಷ ನಗದನ್ನು ಸ್ಥಳದಲ್ಲೇ ವಶಪಡಿಸಿಕೊಂಡಿದೆ.
ತನಿಖಾಧಿಕಾರಿ ಪೊಲೀಸ್ ಇನ್‌ಸ್ಪೆಕ್ಟರ್ ವಿಜಯ ಕೃಷ್ಣ ನೇತೃತ್ವದಲ್ಲಿ, ಡಿವೈಎಸ್‌ಪಿಗಳಾದ ಭರತ್ ರೆಡ್ಡಿ, ತಿಪ್ಪೇಸ್ವಾಮಿ, ಅನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಶಂಕರಪ್ಪ, ಚಿದಾನಂದ ಮೂರ್ತಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು. ಪ್ರಕರಣದ ಕುರಿತು ಮುಂದಿನ ತನಿಖೆ ಪ್ರಗತಿಯಲ್ಲಿದೆ.
