ಪ್ರಶ್ನಿಸುವ ಮನಸ್ಥಿತಿಯ ವಿದ್ಯಾರ್ಥಿಗಳು, ಮುಕ್ತವಾಗಿ ಅಧ್ಯಯನ ನಡೆಸುವ ಸಂಶೋಧಕರು ಹಾಗೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ವಿಶ್ವವಿದ್ಯಾಲಯಗಳು ಪ್ರಜಾಪ್ರಭುತ್ವದ ಸದೃಢ ಬುನಾದಿಗಳು. ಆದರೆ, ಪ್ರಸ್ತುತ ಜಗತ್ತಿನಾದ್ಯಂತ ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ರಾಜಕೀಯ ಹಾಗೂ ಆಡಳಿತಾತ್ಮಕ ಒತ್ತಡಗಳು ನಿರಂತರವಾಗಿ ಹೆಚ್ಚುತ್ತಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಶೈಕ್ಷಣಿಕ ವಾತಾವರಣದ ಮೇಲ್ವಿಚಾರಣೆ ನಡೆಸುವ ‘ಸ್ಕಾಲರ್ಸ್ ಅಟ್ ರಿಸ್ಕ್’ (SAR) ಸಂಸ್ಥೆಯು ಬಿಡುಗಡೆ ಮಾಡಿರುವ ‘ಫ್ರೀ ಟು ಥಿಂಕ್ 2026’ ವರದಿಯ ಪ್ರಕಾರ, ಕಳೆದ ಒಂದು ವರ್ಷದಲ್ಲಿ 59 ದೇಶಗಳು ಮತ್ತು ಪ್ರದೇಶಗಳಲ್ಲಿ ಉನ್ನತ ಶಿಕ್ಷಣ ಕ್ಷೇತ್ರದ ಮೇಲೆ ಒಟ್ಟು 382 ಹಿಂಸಾತ್ಮಕ ದಾಳಿಗಳು ನಡೆದಿವೆ.
ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ‘ತೀವ್ರ ನಿರ್ಬಂಧಿತ’ ಹಂತಕ್ಕೆ ತಲುಪಿದೆ ಎಂದು ವರದಿ ಬಹಿರಂಗಪಡಿಸಿದೆ. ವಿಶ್ವವಿದ್ಯಾಲಯಗಳ ಸ್ವಾಯತ್ತತೆಯಲ್ಲಿ ಸರ್ಕಾರದ ಹಸ್ತಕ್ಷೇಪ, ವಿದ್ಯಾರ್ಥಿ ಚಳವಳಿಗಳ ಮೇಲಿನ ದಮನಕಾರಿ ಕ್ರಮಗಳು ಹಾಗೂ ಸಂಶೋಧನಾ ಸ್ವಾತಂತ್ರ್ಯದ ಮೇಲಿನ ಕಡಿವಾಣಗಳು ದೇಶದ ಒಟ್ಟಾರೆ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನೇ ಆತಂಕಕ್ಕೆ ತಳ್ಳಿವೆ.
ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ಗಣನೀಯವಾಗಿ ಕ್ಷೀಣಿಸಿದೆ ಎಂದು ಎಸ್ಎಆರ್ ಅಧ್ಯಯನ ಸ್ಪಷ್ಟಪಡಿಸಿದೆ. 2024ರಲ್ಲಿ 0.16ರಷ್ಟಿದ್ದ ಭಾರತದ ಅಕಾಡೆಮಿಕ್ ಫ್ರೀಡಮ್ ಇಂಡೆಕ್ಸ್ (AFI) ಸ್ಕೋರ್, 2026ರ ವೇಳೆಗೆ 0.14ಕ್ಕೆ ಕುಸಿದಿದೆ. ಈ ಸೂಚ್ಯಂಕವು ಕೇವಲ ಒಂದು ರ್ಯಾಂಕಿಂಗ್ ಮಾತ್ರವಲ್ಲದೆ, ಸಂಶೋಧನಾ ಸ್ವಾತಂತ್ರ್ಯ, ಬೋಧನೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂಸ್ಥೆಗಳ ಸ್ವಾಯತ್ತತೆಯನ್ನು ಒರೆಗೆ ಹಚ್ಚುವ ಮಾನದಂಡವಾಗಿದೆ. ಈ ಅಂಕ ಕುಸಿತವು ದೇಶದಲ್ಲಿ ಮುಕ್ತ ವಿಚಾರಧಾರೆ ಮತ್ತು ಸಂಶೋಧನಾ ವಾತಾವರಣ ಸಂಕಷ್ಟಕ್ಕೆ ಸಿಲುಕಿದೆ ಎಂಬುದನ್ನು ತೋರಿಸುತ್ತದೆ. 2022ರಿಂದ ಬೋಧನೆ ಮತ್ತು ಮುಕ್ತ ಸಂಶೋಧನೆಗಳ ಮೇಲೆ ಹೇರಲಾಗುತ್ತಿರುವ ನಿರಂತರ ನಿರ್ಬಂಧಗಳೇ ಈ ತೀವ್ರ ಕುಸಿತಕ್ಕೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗಿದೆ.
ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯ ಮೇಲೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಅಧಿಕಾರವನ್ನು ವಿಸ್ತರಿಸುತ್ತಿದ್ದು, ವಿಶ್ವವಿದ್ಯಾಲಯಗಳ ಆಡಳಿತ, ಉಪಕುಲಪತಿಗಳ ನೇಮಕಾತಿ ಹಾಗೂ ಶೈಕ್ಷಣಿಕ ಆದ್ಯತೆಗಳನ್ನು ರಾಜಕೀಯವಾಗಿ ನಿರ್ಧರಿಸಲಾಗುತ್ತಿದೆ ಎಂದು ವರದಿ ಆರೋಪಿಸಿದೆ. ಉನ್ನತ ಶಿಕ್ಷಣದ ಮೇಲೆ ಸರ್ಕಾರದ ಕಾರ್ಯಸೂಚಿಯನ್ನು ಹೇರಲು ವಿಶ್ವವಿದ್ಯಾಲಯ ಅನುದಾನ ಆಯೋಗವನ್ನು (ಯುಜಿಸಿ) ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಟೀಕೆಗಳನ್ನೂ ಅದು ಉಲ್ಲೇಖಿಸಿದೆ. ವಿಶ್ವವಿದ್ಯಾಲಯಗಳು ಸರ್ಕಾರದಿಂದ ಆರ್ಥಿಕ ನೆರವು ಪಡೆದರೂ, ಅವುಗಳ ಶೈಕ್ಷಣಿಕ ತೀರ್ಮಾನಗಳು, ಸಂಶೋಧನಾ ವಿಷಯಗಳ ಆಯ್ಕೆ ಮತ್ತು ಬೋಧಕರ ನೇಮಕಾತಿಗಳು ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆ ಸ್ವತಂತ್ರವಾಗಿ ನಡೆಯಬೇಕೆಂಬುದು ಶಿಕ್ಷಣ ತಜ್ಞರ ಬಲವಾದ ವಾದವಾಗಿದೆ.
ಕ್ಯಾಂಪಸ್ಗಳಲ್ಲಿ ಮುಕ್ತ ಮತ್ತು ಪ್ರಜಾಸತ್ತಾತ್ಮಕ ಚರ್ಚೆಗಳನ್ನು ಹತ್ತಿಕ್ಕುವ ಪ್ರವೃತ್ತಿ ಹೆಚ್ಚಾಗಿದೆ ಎಂದು ವರದಿ ಎಚ್ಚರಿಸಿದೆ. ಭಿನ್ನಮತ ವ್ಯಕ್ತಪಡಿಸುವ ಪ್ರಾಧ್ಯಾಪಕರನ್ನು ಸೇವೆಯಿಂದ ವಜಾಗೊಳಿಸುವುದು, ಶೈಕ್ಷಣಿಕ ವಿಚಾರ ಸಂಕಿರಣಗಳು ಹಾಗೂ ಸಮ್ಮೇಳನಗಳನ್ನು ರದ್ದುಗೊಳಿಸುವುದು ಮತ್ತು ವಿದ್ಯಾರ್ಥಿಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವ ಹೊಸ ನೀತಿಗಳನ್ನು ಜಾರಿಗೆ ತರಲಾಗುತ್ತಿದೆ. ಕ್ಯಾಂಪಸ್ ಪ್ರತಿಭಟನೆಗಳು ಮತ್ತು ಸಭೆಗಳಲ್ಲಿ ಪೊಲೀಸರು ಹಿಂಸಾತ್ಮಕ ದೌರ್ಜನ್ಯ ಎಸಗಿದ ನಿದರ್ಶನಗಳನ್ನು ವರದಿಯಲ್ಲಿ ದಾಖಲಿಸಲಾಗಿದೆ.
ದೆಹಲಿ ವಿಶ್ವವಿದ್ಯಾಲಯ, ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಮುಂಬೈ ವಿಶ್ವವಿದ್ಯಾಲಯಗಳಲ್ಲಿ ಕಾರ್ಯಕ್ರಮಗಳ ರದ್ದತಿ, ಹಾಗೆಯೇ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (TISS) ಮತ್ತು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ವಿದ್ಯಾರ್ಥಿ ಹೋರಾಟಗಳ ಮೇಲೆ ಆಡಳಿತ ಮಂಡಳಿಗಳು ಹೇರಿದ ಕಠಿಣ ಒತ್ತಡಗಳನ್ನು ಸಂಸ್ಥೆಯು ಮುನ್ನೆಲೆಗೆ ತಂದಿದೆ.
ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಮೇಲಿನ ಧಕ್ಕೆಯನ್ನು ವಿವರಿಸಲು ವರದಿಯು ಕೆಲವು ಪ್ರಮುಖ ಘಟನೆಗಳನ್ನು ಉಲ್ಲೇಖಿಸಿದೆ. ಎನ್ಸಿಇಆರ್ಟಿ ಪಠ್ಯಪುಸ್ತಕದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಕುರಿತು ಅಧ್ಯಾಯ ಸಿದ್ಧಪಡಿಸಿದ್ದ ಮೂವರು ವಿದ್ವಾಂಸರ ಮೇಲೆ ಸುಪ್ರೀಂ ಕೋರ್ಟ್ ಮಾರ್ಚ್ನಲ್ಲಿ ವಿಧಿಸಿದ್ದ ಜೀವಾವಧಿ ನಿಷೇಧದ ಆದೇಶ ಮತ್ತು ನಂತರ ಅದನ್ನು ಹಿಂಪಡೆದ ಘಟನೆ, ಶೈಕ್ಷಣಿಕ ಸಂಸ್ಥೆಗಳಲ್ಲಿ ಮುಕ್ತ ಚರ್ಚೆಗಳಿಗೆ ಅವಕಾಶ ನಿರಾಕರಣೆ ಹಾಗೂ ವಿದ್ಯಾರ್ಥಿ ಸಮುದಾಯದ ಮೇಲಿನ ನಿರಂತರ ನಿಗಾ ಪ್ರಮುಖ ಉದಾಹರಣೆಗಳಾಗಿವೆ. ಈ ಬೆಳವಣಿಗೆಗಳು ಸಾಂವಿಧಾನಿಕ ಹಕ್ಕುಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ವಿಶ್ವವಿದ್ಯಾಲಯಗಳ ಸಾಂಸ್ಥಿಕ ಸ್ವಾಯತ್ತತೆಗೆ ಮಾರಕವಾಗಿ ಪರಿಣಮಿಸಿವೆ.
ಉನ್ನತ ಶಿಕ್ಷಣ ಸಂಸ್ಥೆಗಳ ಮೇಲಿನ ದಾಳಿಗಳು ಕೇವಲ ಭಾರತಕ್ಕಷ್ಟೇ ಸೀಮಿತವಾಗಿಲ್ಲ; ವಿಶ್ವದ ಅನೇಕ ದೇಶಗಳಲ್ಲಿ ಸರ್ಕಾರದ ನೇರ ದಬ್ಬಾಳಿಕೆ ಮುಂದುವರಿದಿದೆ. 16 ದೇಶಗಳಲ್ಲಿ ಕ್ಯಾಂಪಸ್ಗಳ ಮೇಲೆ ಹಿಂಸಾತ್ಮಕ ದಾಳಿ, ಒಳನುಸುಳುವಿಕೆ ಮತ್ತು ಬೆದರಿಕೆಗಳು ದಾಖಲಾಗಿದ್ದರೆ, ಎಂಟು ದೇಶಗಳಲ್ಲಿ ವಿಶ್ವವಿದ್ಯಾಲಯಗಳ ಸಾಂಸ್ಥಿಕ ಸ್ವಾಯತ್ತತೆ ಸಂಪೂರ್ಣವಾಗಿ ನಾಶವಾಗಿದೆ. ಅಮೆರಿಕದಂತಹ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲೂ ರಾಜಕೀಯ ನಿಲುವುಗಳಿಗೆ ತಕ್ಕಂತೆ ಪಠ್ಯಕ್ರಮಗಳನ್ನು ನಿಯಂತ್ರಿಸುವುದು, ಸಂಶೋಧನಾ ಅನುದಾನ ಕಡಿತಗೊಳಿಸುವುದು ಮತ್ತು ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿಗಳಿಗೆ ರಾಜಕೀಯ ಹಿನ್ನೆಲೆಯುಳ್ಳವರನ್ನು ನೇಮಕ ಮಾಡುವಂತಹ ಅಪಾಯಕಾರಿ ಧೋರಣೆಗಳು ಹೆಚ್ಚುತ್ತಿವೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.
