ಪಂಜಾಬ್ ನ್ಯಾಷನಲ್ ಬ್ಯಾಂಕ್ ₹13,000 ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ ಅವರ ಜಾಮೀನು ಅರ್ಜಿಯನ್ನು ಲಂಡನ್‌ನ ಹೈಕೋರ್ಟ್ ತಿರಸ್ಕರಿಸಿದೆ. ಕಳೆದ ಆರು ವರ್ಷಗಳಿಂದ ಬ್ರಿಟನ್‌ನ ಕಾರಾಗೃಹದಲ್ಲಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಬಿಡುಗಡೆಯ ಕನಸು ಮತ್ತೆ ಕಮರಿದೆ.
ಲಂಡನ್ ನಲ್ಲಿ ಕಳೆದ ಆರು ವರ್ಷಗಳಿಂದ ಬಂಧಿತರಾಗಿರುವ 54 ವರ್ಷ ವಯಸ್ಸಿನ ನೀರವ್ ಮೋದಿ ಅವರು ಬಿಡುಗಡೆಗಾಗಿ ಮನವಿ ಮಾಡಿರುವುದಲ್ಲದೇ, ಯಾವುದೇ ಕಾರಣಕ್ಕೂ ಭಾರತಕ್ಕೆ ಗಡೀಪಾರು ಮಾಡದಂತೆ ಹೋರಾಟ ನಡೆಸುತ್ತಿದ್ದಾರೆ.
ಲಂಡನ್ ಬಂದೀಖಾನೆಯಲ್ಲಿರುವ ಅವರ ಆರೋಗ್ಯ ಹದಗೆಡುತ್ತಿದ್ದು, ಜಾಮೀನು ಮಂಜೂರು ಮಾಡಬೇಕು ಎಂದು ಅವರ ಪರ ವಕೀಲರು ವಾದ ಮಂಡಿಸಿದರು. ಆದರೆ, ನ್ಯಾಯಮೂರ್ತಿ ಮೈಖೇಲ್ ಫೋರ್ದಾಮ್ ಅವರು, ‘ಜಾಮೀನು ನೀಡಿದಲ್ಲಿ ಪ್ರಕರಣದ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ’ ಎಂದರು.
“ನೀರವ್ ದೀಪಕ್ ಮೋದಿ ಸಲ್ಲಿಸಿದ್ದ ಹೊಸ ಜಾಮೀನು ಅರ್ಜಿಯನ್ನು ಲಂಡನ್ನ ಕಿಂಗ್ಸ್ ಬೆಂಚ್ ವಿಭಾಗದ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ. ಜಾಮೀನು ವಾದಗಳನ್ನು ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ (ಸಿಪಿಎಸ್) ವಕೀಲರು ಬಲವಾಗಿ ವಿರೋಧಿಸಿದರು, ಈ ಉದ್ದೇಶಕ್ಕಾಗಿ ಲಂಡನ್ಗೆ ಪ್ರಯಾಣಿಸಿದ ತನಿಖಾ ಮತ್ತು ಕಾನೂನು ಅಧಿಕಾರಿಗಳನ್ನು ಒಳಗೊಂಡ ಬಲವಾದ ಸಿಬಿಐ ತಂಡವು ಅವರಿಗೆ ಸಹಾಯ ಮಾಡಿತು” ಎಂದು ಕೇಂದ್ರ ತನಿಖಾ ದಳ (ಸಿಬಿಐ) ನವದೆಹಲಿಯಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.
ಭಾರತದಲ್ಲಿ ನೀರವ್ ವಿರುದ್ಧ ಮೂರು ರೀತಿಯ ಕ್ರಿಮಿನಲ್ ವಿಚಾರಣೆಗಳಿವೆ.