ಬೆಂಗಳೂರು: ಲೋಕಸಭಾ ಚುನಾವಣೆಗೆ ಇಂದು ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಜನರು ಬೆಳಗ್ಗೆಯಿಂದಲೇ ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಹಿರಿಯ ಉದ್ಯಮಿಗಳು, ನಟರು ಹಾಗೂ ಇನ್ನಿತರ ಸೆಲೆಬ್ರಿಟಿಗಳು ವೋಟ್ ಮಾಡಿ ತಮ್ಮ ಮಸಿ ಹಚ್ಚಿದ ಕೈಬೆರಳಿನ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಈ ಬಾರಿ ಬೆಂಗಳೂರಿನ ಕೆಲವು ಹೋಟೆಲ್ಲುಗಳು ವೋಟ್ ಹಾಕಿ ಬಂದು ತಮ್ಮ ಬೆರಳಿನ ಮಸಿ ತೋರಿಸುವ ಮತದಾರರಿಗೆ ಉಚಿತ ದೋಸೆ ನೀಡುವುದಾಗಿ ಘೋಷಿಸಿದ್ದವು. ಈ ನಿಟ್ಟಿನಲ್ಲಿ ಮತದಾರರೂ ಈ ಆಫರ್‌ಗೆ ಅತ್ಯುತ್ಸಾಹ ತೋರಿದ್ದು, ಮತ ಹಾಕಿ ಬಂದು ಹೋಟೆಲುಗಳ ಮುಂದೆ ದೋಸೆ ಸವಿಯಲು ಸಾಲುಗಟ್ಟುತ್ತಿದ್ದಾರೆ.
ಇಂದು ಮತದಾರರನ್ನು ಜಾಗೃತಿಗೊಳಿಸುವ ಸಲುವಾಗಿ ಉಚಿತ ಊಟೋಪಹಾರದ ಕೊಡುಗೆ ಘೋಷಿಸಿದ್ದ ಬೆಂಗಳೂರಿನ ನಿಸರ್ಗ ಗ್ರ್ಯಾಂಡ್ ಹೋಟೆಲ್ ಎದುರು ಸಹ ಬೃಹತ್ ಸರದಿ ಸಾಲು ಕಂಡು ಬಂದಿದೆ.
ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೋಟೆಲ್‌ನಲ್ಲಿ ಏಪ್ರಿಲ್ 26 ರಂದು ಮತದಾನದ ಪುರಾವೆಯಾಗಿ ತಮ್ಮ ಶಾಯಿಯ ಬೆರಳನ್ನು ಪ್ರದರ್ಶಿಸುವ ಮತದಾರರಿಗೆ ಉಚಿತ ಬೆಣ್ಣೆ ಖಾಲಿ ದೋಸೆ, ತುಪ್ಪದ ಲಡ್ಡು ಮತ್ತು ಜ್ಯೂಸ್ ನೀಡುವುದಾಗಿ ಘೋಷಿಸಲಾಗಿತ್ತು. ಪ್ರತಿ ಚುನಾವಣೆಗೂ ಈ ಹೋಟೆಲ್ ಮತದಾರರಿಗೆ ಇಂತಹ ಆಫರ್ ನೀಡುತ್ತದೆ
ಈ ಸಲದ ಚುನಾವಣೆಗೆ ಹೋಟೆಲ್ ಮತದಾರರಿಗೆ ಬೆಣ್ಣೆ ಖಾಲಿ ದೋಸೆ, ತುಪ್ಪದ ಲಾಡು ಮತ್ತು ಹಣ್ಣಿನ ರಸವನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡಿತ್ತು. ಹೀಗಾಗಿ ಹೋಟೆಲ್ಲಿನ ಮುಂದೆ ಜನ ಜಂಗುಳಿಯೇ ನೆರೆದಿದೆ.