ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಹಂಚಿಕೆ ಆರೋಪ: ಶಿಕ್ಷಣ ತಜ್ಞೆ ಮಧು ಕಿಶ್ವರ್ ವಿರುದ್ಧ ಎಫ್‌ಐಆರ್ ದಾಖಲು

ಸಾಮಾಜಿಕ ಜಾಲತಾಣದಲ್ಲಿ ನಕಲಿ ಹಾಗೂ ದಾರಿತಪ್ಪಿಸುವ ವಿಷಯವನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಪ್ರಖ್ಯಾತ ಶಿಕ್ಷಣ ತಜ್ಞೆ ಮಧು ಕಿಶ್ವರ್ ವಿರುದ್ಧ ಚಂಡೀಗಢ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಚಂಡೀಗಢದ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸೆಕ್ಟರ್-26 ಪೊಲೀಸ್ ಠಾಣೆಯಲ್ಲಿ ಈ ಎಫ್‌ಐಆರ್ (FIR) ದಾಖಲಾಗಿದೆ.

ದೂರುದಾರರ ಪ್ರಕಾರ, ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪಠ್ಯ ಮತ್ತು ವಿಷಯಗಳಿರುವ ನಕಲಿ ವಿಡಿಯೋ ತುಣುಕುಗಳನ್ನು ಮಧು ಕಿಶ್ವರ್ ಸೇರಿದಂತೆ ಕೆಲವರು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿರುವ ವ್ಯಕ್ತಿಯನ್ನು ತಪ್ಪಾಗಿ ಗುರುತಿಸಿ, ಅವರ ಘನತೆಗೆ ಧಕ್ಕೆ ತರುವ ಮತ್ತು ಸಾರ್ವಜನಿಕ ಶಾಂತಿಯನ್ನು ಕದಡುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಓರ್ವ ಟ್ರಾವೆಲ್ ವ್ಲಾಗರ್ (Travel Vlogger) ಆಗಿದ್ದು, ಅವರ ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಮೂಲ ವಿಡಿಯೋವನ್ನು ಇವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ವಿಡಿಯೋದಲ್ಲಿರುವ ವ್ಯಕ್ತಿ ಮತ್ತು ಅವರ ಪತ್ನಿಯ ಹೇಳಿಕೆಗಳನ್ನು ಪೊಲೀಸರು ಈಗಾಗಲೇ ದಾಖಲಿಸಿಕೊಂಡಿದ್ದಾರೆ.

ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 196 (ಧರ್ಮ, ಜನಾಂಗ ಅಥವಾ ಭಾಷೆಯ ಆಧಾರದ ಮೇಲೆ ದ್ವೇಷ ಪ್ರಚೋದನೆ), 336 (1) (ನಕಲಿ ದಾಖಲೆ ಸೃಷ್ಟಿ), 356 (ಅಪರಾಧ ಮಾನನಷ್ಟ) ಮತ್ತು ಐಟಿ ಕಾಯ್ದೆಯ ಅಡಿಯಲ್ಲಿ ಕಿಶ್ವರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಮಧು ಕಿಶ್ವರ್, ಸೋಮವಾರ ತಡರಾತ್ರಿ ಚಂಡೀಗಢ ಪೊಲೀಸ್ ತಂಡವು ನೋಟಿಸ್ ನೀಡಲು ತಮ್ಮ ಮನೆಗೆ ಭೇಟಿ ನೀಡಿತ್ತು ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ. ಸೂರ್ಯಾಸ್ತದ ನಂತರ ಮತ್ತು ಸೂರ್ಯೋದಯಕ್ಕೂ ಮುನ್ನ ಮಹಿಳೆಯರನ್ನು ಬಂಧಿಸಲು ಅಥವಾ ವಿಚಾರಣೆಗೆ ಒಳಪಡಿಸಲು ಕಾನೂನಿನಲ್ಲಿ ಅವಕಾಶವಿಲ್ಲದ ಕಾರಣ, ತಾವು ಬೆಳಿಗ್ಗೆ ಬರುವಂತೆ ಪೊಲೀಸ್ ತಂಡಕ್ಕೆ ಸೂಚಿಸಿದ್ದಾಗಿ ಅವರು ಹೇಳಿದ್ದಾರೆ. ಸದ್ಯ ಈ ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

Related Articles

ಇತ್ತೀಚಿನ ಸುದ್ದಿಗಳು