90% ಮಹಿಳೆಯರು ನಾಯಕರ ಕೊಠಡಿಗೆ ಹೋಗದೆ ರಾಜಕೀಯ ಜೀವನವನ್ನು ಪ್ರಾರಂಭಿಸಲು ಸಾಧ್ಯವಿಲ್ಲ: ವಿವಾದದಲ್ಲಿ ಪಪ್ಪು ಯಾದವ್

ಜನಪ್ರಿಯವಾಗಿ ಪಪ್ಪು ಯಾದವ್ ಎಂದು ಕರೆಯಲ್ಪಡುವ, ಬಿಹಾರದ ಪೂರ್ಣಿಯಾದ ಸ್ವತಂತ್ರ ಸಂಸದ ರಾಜೇಶ್ ರಂಜನ್, ರಾಜಕೀಯದಲ್ಲಿ ಮತ್ತು ಸಾರ್ವಜನಿಕ ಜೀವನದಲ್ಲಿರುವ ಮಹಿಳೆಯರ ಕುರಿತು ನೀಡಿರುವ ಹೇಳಿಕೆ ವೈರಲ್ ಆದ ನಂತರ ವಿವಾದದ ಸುಳಿಗೆ ಸಿಲುಕಿದ್ದಾರೆ.

ರಾಜಕೀಯದಲ್ಲಿ ಮಹಿಳೆಯರ ಶೋಷಣೆಯ ಬಗ್ಗೆ ಮಾತನಾಡುತ್ತಿದ್ದ ಯಾದವ್, ಯಾವುದೇ ರಾಜಕೀಯ ನಾಯಕನ ಕೊಠಡಿಗೆ ಹೋಗದೆ, 90 ಪ್ರತಿಶತದಷ್ಟು ಮಹಿಳೆಯರು ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

“ಯಾರು ಕೌಟುಂಬಿಕ ದೌರ್ಜನ್ಯ ಎಸಗುತ್ತಿದ್ದಾರೆ? ಅಮೆರಿಕದಿಂದ ಭಾರತದವರೆಗೆ ಮಹಿಳೆಯರನ್ನು ಯಾರು ಬೇಟೆಯಾಡುತ್ತಿದ್ದಾರೆ? ಅವರು ರಾಜಕಾರಣಿಗಳು! 90% ಮಹಿಳೆಯರಿಗೆ ಪುರುಷ ನಾಯಕರ ಕೊಠಡಿಗೆ ಹೋಗದೆ ರಾಜಕೀಯದಲ್ಲಿ ಆರಂಭ ಸಿಗುವುದಿಲ್ಲ” ಎಂದು ಯಾದವ್ ಹೇಳಿದ್ದಾರೆ.

“ಮಹಿಳೆಯರು ಪುರುಷರ ಬೆಡ್‌ರೂಮ್‌ಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುತ್ತಾರೆ… 90% ಮಹಿಳಾ ನಾಯಕರು ಈ ರೀತಿಯಾಗಿಯೇ ಪ್ರಾರಂಭಿಸುತ್ತಾರೆ,” ಎಂಬ ಅವರ ಹೇಳಿಕೆಯು ತೀವ್ರ ಟೀಕೆಗೆ ಗುರಿಯಾಗಿದೆ. ತುಹಿನ್ ಎ. ಸಿನ್ಹಾ ಎಂಬುವರು ಈ ಹೇಳಿಕೆಯನ್ನು “ಹೇಯ ಮತ್ತು ಆಕ್ರೋಶಕಾರಿ” ಎಂದು ಕರೆದಿದ್ದಾರೆ ಮತ್ತು ಸ್ವಯಂ ನಿರ್ಮಿತ ಮಹಿಳಾ ರಾಜಕಾರಣಿಗಳನ್ನು ಅವಮಾನಿಸಿದ್ದಕ್ಕಾಗಿ ಅವರನ್ನು ಟೀಕಿಸಿದ್ದಾರೆ.

“ಶಾಲೆಗೆ ಹೋಗಿ, ನಿಮ್ಮ ಮಗಳಿಗೆ ಶೋಷಣೆ ಎದುರಾಗುತ್ತದೆ; ಕಾಲೇಜಿಗೆ ಹೋಗಿ, ರ‍್ಯಾಗಿಂಗ್ ಹೆಸರಿನಲ್ಲಿ ಶೋಷಣೆ; ಕಚೇರಿಗೆ ಹೋಗಿ, ಅಲ್ಲಿಯೂ ಶೋಷಣೆಯಿದೆ…” ಎಂದು ಯಾದವ್ ವಿವರಿಸಿದರು.

“ನಾಯಕರು ಮಹಿಳೆಯರ ವಿಷಯದಲ್ಲಿ ರಣಹದ್ದುಗಳಂತೆ ವರ್ತಿಸುತ್ತಾರೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರನ್ನು ಬೇಟೆಯಾಡುವ ದೃಷ್ಟಿಯಿಂದ ನೋಡಲಾಗುತ್ತದೆ. 70% ನಾಯಕರು ಪೋರ್ನೋಗ್ರಫಿ ನೋಡುತ್ತಾರೆ” ಎಂದು ಯಾದವ್ ಆರೋಪಿಸಿದ್ದಾರೆ.

ಅಲ್ಲದೆ, ತಳಸಮುದಾಯದ ಮಹಿಳೆಯರಿಗೆ ರಾಜಕೀಯದಲ್ಲಿ ಸೂಕ್ತ ಪ್ರಾತಿನಿಧ್ಯವಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಈ ಹೇಳಿಕೆಗಳು “ಮಹಿಳೆಯರ ಘನತೆಯನ್ನು ಉಲ್ಲಂಘಿಸುವಂತಿವೆ” ಎಂದು ಪರಿಗಣಿಸಿರುವ ಬಿಹಾರ ರಾಜ್ಯ ಮಹಿಳಾ ಆಯೋಗವು, ಪಪ್ಪು ಯಾದವ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಅವರ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದೆ ಎಂದು ವರದಿಗಳು ತಿಳಿಸಿವೆ.

Related Articles

ಇತ್ತೀಚಿನ ಸುದ್ದಿಗಳು