ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಮತ್ತೆ ಗಡಿಪಾರು ನೋಟಿಸ್ ಜಾರಿ ಮಾಡಲಾಗಿದೆ. ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗೆ ತಿಮರೋಡಿಗೆ ಗಡಿಪಾರು ನೋಟಿಸ್ ನೀಡಿದ್ದ ಸ್ಟೆಲ್ಲಾ ವರ್ಗೀಸ್ ಅವರು, ಡಿಸೆಂಬರ್ 17ರಂದು ಮತ್ತೊಮ್ಮೆ ಈ ಆದೇಶವನ್ನು ಜಾರಿ ಮಾಡಿದ್ದಾರೆ. ಈ ಹಿಂದೆ ನೀಡಿದ್ದ ಗಡಿಪಾರು ಆದೇಶವನ್ನು ಮರುಪರಿಶೀಲಿಸುವಂತೆ ಹೈಕೋರ್ಟ್ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ, ಹೈಕೋರ್ಟ್ ಆದೇಶದಂತೆ ಪ್ರಕರಣವನ್ನು ಮರುಪರಿಶೀಲಿಸಿ ಇದೀಗ ಹೊಸ ಆದೇಶ ಹೊರಡಿಸಲಾಗಿದೆ.
ಮರುಪರಿಶೀಲನೆಯ ಬಳಿಕ, ಮಹೇಶ್ ಶೆಟ್ಟಿ ತಿಮರೋಡಿಯನ್ನು ಒಂದು ವರ್ಷದ ಅವಧಿಗೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡುವಂತೆ ಪುತ್ತೂರು ಸಹಾಯಕ ಆಯುಕ್ತರು ಆದೇಶಿಸಿದ್ದಾರೆ.
ಈ ಗಡಿಪಾರು ಆದೇಶದ ಪ್ರತಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಡಿಸೆಂಬರ್ 18ರಂದು ತಲುಪಿದ ಹಿನ್ನೆಲೆಯಲ್ಲಿ, ಉಜಿರೆಯಲ್ಲಿರುವ ತಿಮರೋಡಿಯವರ ನಿವಾಸಕ್ಕೆ ಬೆಳ್ತಂಗಡಿ ಪೊಲೀಸರು ತೆರಳಿ ನೋಟಿಸ್ ಜಾರಿ ಮಾಡಲು ಪ್ರಯತ್ನಿಸಿದ್ದಾರೆ. ಆದರೆ, ಈ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.
