ನವದೆಹಲಿ : ಕೇಂದ್ರದಲ್ಲಿರುವ ಎನ್ಡಿಎ ಸರ್ಕಾರ (NDA) ಜಿಎಸ್‌ಟಿ (GST 2.0) ದರ ಕಡಿತ ಮಾಡಿದೆ. ಆದ್ದರಿಂದ ಮಧ್ಯಮ ಹಾಗೂ ಬಡತನ ರೇಖೆಗಿಂತ ಮೇಲಿರುವ ಜನರಿಗೆ ತುಂಬಾ ಅನುಕೂಲಕರವಾಗಿದೆ. ಅದರಲ್ಲೂ ಸ್ವಂತ ಕಾರು ಖರೀದಿಸಲು ಕನಸು ಕಾಣುತ್ತಿದ್ದವರಿಗೆ ನನಸು ಮಾಡಿಕೊಳ್ಳುವ ಸುಸಂದರ್ಭ ಒದಗಿದೆ.
ವಾಹನಗಳ ಮೇಲಿನ ಜಿಎಸ್‌ಟಿ ದರ ಇಳಿಕೆಯ ಪರಿಣಾಮವಾಗಿ ತನ್ನ ಜನಪ್ರಿಯ ಮ್ಯಾಗ್ನೈಟ್ ಎಸ್‌ಯವಿ ಮಾದರಿಯ ಬೆಲೆಯಲ್ಲಿ ₹1 ಲಕ್ಷದವರೆಗೆ ಇಳಿಕೆ ಆಗಲಿದೆ ಎಂದು ನಿಸಾನ್ ಮೋಟರ್ ಇಂಡಿಯಾ ಕಂಪನಿಯು ಸೋಮವಾರ ತಿಳಿಸಿದೆ.ಹೊಸ ದರವು ಜಿಎಸ್‌ಟಿ ಪರಿಷ್ಕೃತ ದರ ಜಾರಿಗೆ ಬರಲಿರುವ ಸೆಪ್ಟೆಂಬರ್ 22ರಿಂದ ಅನ್ವಯವಾಗಲಿದೆ. ಆದರೆ, ಹೊಸ ದರಕ್ಕೆ ಕಾರು ಬುಕ್ ಮಾಡಲು ಈಗಿನಿಂದಲೇ ಅವಕಾಶ ಇದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ಜಿಎಸ್‌ಟಿ ಕಡಿತದ ಸಂಪೂರ್ಣ ಪ್ರಯೋಜನಗಳನ್ನು ಖರೀದಿದಾರರಿಗೆ ವರ್ಗಾಯಿಸುವುದಾಗಿ ಮಾರುತಿ ಸುಜುಕಿ ಇಂಡಿಯಾ ಮತ್ತು ಮಹೀಂದ್ರಾ & ಮಹೀಂದ್ರಾ ಶುಕ್ರವಾರ ಘೋಷಿಸಿದ ನಂತರ, ಹ್ಯುಂಡೈ ಮೋಟಾರ್ ಇಂಡಿಯಾ ಕೂಡ ಇದೇ ರೀತಿಯ ಘೋಷಣೆ ಮಾಡಿದೆ. ತನ್ನ ಗ್ರಾಹಕರಿಗೆ ಜಿಎಸ್‌ಟಿ ಕಡಿತದ ಸಂಪೂರ್ಣ ಪ್ರಯೋಜನವನ್ನು ವರ್ಗಾಯಿಸುವುದಾಗಿ ಹ್ಯುಂಡೈ ಮೋಟಾರ್ ಇಂಡಿಯಾ ಭಾನುವಾರ ಘೋಷಿಸಿದೆ.
ಹೊಸ ದರ ಸೆಪ್ಟೆಂಬರ್ 22 ರಿಂದ ಜಾರಿಗೆ
ಪ್ರಯಾಣಿಕ ಕಾರುಗಳ ಬೆಲೆಯನ್ನು ಗಮನಾರ್ಹವಾಗಿ ಕಡಿತ ಮಾಡಿದೆ. ಹೊಸ ಬೆಲೆಗಳು ಹಬ್ಬದ ಸೀಸನ್‌ಗೆ ಮುಂಚಿತವಾಗಿ ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿವೆ. ಪರಿಷ್ಕೃತ ಬೆಲೆಯೊಂದಿಗೆ, ಹ್ಯುಂಡೈ ಕಾರುಗಳು ಮತ್ತು SUV ಗಳು ರೂ 2.4 ಲಕ್ಷದವರೆಗೆ ಅಗ್ಗವಾಗುತ್ತವೆ.
ಹ್ಯುಂಡೈ ಟಕ್ಸನ್‌ನಲ್ಲಿ ಬೆಲೆಯಲ್ಲಿ ಅತ್ಯಂತ ಹೆಚ್ಚು ರೂ. 2,40,303 ಕಡಿತವಾಗಲಿದೆ. ಇತರ ಜನಪ್ರಿಯ ಮಾದರಿಗಳಾದ Grand i10 Nios, Aura, Exter, i20, ವೆನ್ಯೂ, ವೆರ್ನಾ, ಕ್ರೆಟಾ ಮತ್ತು ಅಲ್ಕಾಜರ್‌ಗಳು ಸಹ ಸುಮಾರು ರೂ. 60,000 ರೂ.ಗಳಿಂದ 1.2 ಲಕ್ಷದವರೆಗೆ ಗಣನೀಯ ಪ್ರಮಾಣದ ಕಡಿತವಾಗಲಿದೆ.