ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷಾ ನಿಯಂತ್ರಕ ಹಾಗೂ ಜಂಟಿ ಪರೀಕ್ಷಾ ನಿಯಂತ್ರಕರ ಹುದ್ದೆಗೆ ರಾಜ್ಯ ಸರ್ಕಾರ ಇಬ್ಬರು ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಪ್ರಸನ್ನ ಎಚ್., ಐಎಎಸ್ (2017 ಬ್ಯಾಚ್) ಅವರನ್ನು ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರ ಹುದ್ದೆಗೆ ಹೆಚ್ಚುವರಿ ಹೊಣೆಗಾರಿಕೆಯಲ್ಲಿ ನೇಮಕ ಮಾಡಲಾಗಿದೆ. ಈ ನೇಮಕಾತಿ ತಕ್ಷಣದಿಂದ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಅವರು ಈ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಈ ಹಿಂದೆ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿದ್ದ ದಿಗ್ವಿಜಯ್ ಬೋಡ್ಕೆ, ಐಎಎಸ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಇದೇ ವೇಳೆ ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಲವಿಷ್ ಒರ್ಡಿಯಾ, ಐಎಎಸ್ (2020 ಬ್ಯಾಚ್) ಅವರನ್ನು ಕೆಪಿಎಸ್‌ಸಿಯ ಜಂಟಿ ಪರೀಕ್ಷಾ ನಿಯಂತ್ರಕರಾಗಿ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ನೇಮಕ ಮಾಡಲಾಗಿದೆ. ಈ ಹುದ್ದೆ ಈವರೆಗೆ ಖಾಲಿ ಇತ್ತು. ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕ ಹಾಗೂ ಜಂಟಿ ಪರೀಕ್ಷಾ ನಿಯಂತ್ರಕರ ಹುದ್ದೆಗಳನ್ನು ಐಎಎಸ್ ವೇತನ ನಿಯಮಗಳು, 2016ರ ನಿಯಮ 12ರ ಅನ್ವಯ ಹಿರಿಯ ಶ್ರೇಣಿಯ ಐಎಎಸ್‌ನ ನಿರ್ದೇಶಕ, ಪೌರಾಡಳಿತ ಹುದ್ದೆಗೆ ಸಮಾನ ಸ್ಥಾನಮಾನ ಮತ್ತು ಜವಾಬ್ದಾರಿಯ ಹುದ್ದೆಗಳು ಎಂದು ಸರ್ಕಾರ ಘೋಷಿಸಿದೆ.
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಸೇವೆಗಳು-11) ಅಧೀನ ಕಾರ್ಯದರ್ಶಿ ಟಿ. ಮಹಾಂತೇಶ್ ಅವರು ರಾಜ್ಯಪಾಲರ ಹೆಸರಿನಲ್ಲಿ ಅಧಿಸೂಚನೆ ಹೊರಡಿಸಿದ್ದಾರೆ.
