ನವದೆಹಲಿ : ಹಾಸನದಲ್ಲಿರುವ ಪ್ರಸ್ತುತ ESI ಡಿಸ್ಪೆನ್ಸರಿಯನ್ನು ಮೇಲ್ದರ್ಜೆಗೇರಿಸಿ, 200 ಹಾಸಿಗೆಗಳ ಪೂರ್ಣ ಪ್ರಮಾಣದ ಸುಸಜ್ಜಿತ ESI ಆಸ್ಪತ್ರೆಯನ್ನಾಗಿ ಸ್ಥಾಪಿಸುವಂತೆ ಹಾಸನ ಸಂಸದ ಶ್ರೇಯಸ್ ಎಂ. ಪಟೇಲ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ನವದೆಹಲಿಯಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿಯಾದ ಸಂಸದರು, ಆಸ್ಪತ್ರೆ ಸ್ಥಾಪನೆಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿ ಸುದೀರ್ಘ ಚರ್ಚೆ ನಡೆಸಿದರು. ಹಾಸನದಲ್ಲಿ ಪ್ರಸ್ತುತ ಸುಮಾರು 61,337 ESI ವಿಮಾ ಫಲಾನುಭವಿಗಳು ನೋಂದಾಯಿತರಾಗಿದ್ದಾರೆ. ಆದರೆ, ಈ ದೊಡ್ಡ ಸಂಖ್ಯೆಯ ಕಾರ್ಮಿಕರು ಹಾಗೂ ಅವರ ಕುಟುಂಬಗಳ ಆರೋಗ್ಯ ಸೇವೆಯ ಅಗತ್ಯಗಳಿಗೆ ಈಗಿರುವ ವ್ಯವಸ್ಥೆ ಸಮರ್ಪಕವಾಗಿಲ್ಲ. ಗಂಭೀರ ಕಾಯಿಲೆಗಳು, ತುರ್ತು ಚಿಕಿತ್ಸೆ, ಶಸ್ತ್ರಚಿಕಿತ್ಸೆ ಹಾಗೂ ತಜ್ಞ ವೈದ್ಯಕೀಯ ಸೇವೆ ಪಡೆಯಲು ಫಲಾನುಭವಿಗಳು ಇತರೆ ಆಸ್ಪತ್ರೆಗಳಿಗೆ ಅಥವಾ ಹಾಸನದ ಹೊರಗೆ ತೆರಳಬೇಕಾದ ಪರಿಸ್ಥಿತಿ ಇದೆ. ಇದರಿಂದ ಬಡ ಕಾರ್ಮಿಕರು ಮತ್ತು ಅವರ ಕುಟುಂಬಗಳ ಮೇಲೆ ಹೆಚ್ಚುವರಿ ಆರ್ಥಿಕ ಹಾಗೂ ಪ್ರಯಾಣದ ಹೊರೆ ಬೀಳುತ್ತಿದೆ ಎಂದು ಶ್ರೇಯಸ್ ಪಟೇಲ್ ಸಚಿವರ ಗಮನಕ್ಕೆ ತಂದರು.
ಹಾಸನ ಜಿಲ್ಲೆ ಕೈಗಾರಿಕಾ, ವಾಣಿಜ್ಯ ಹಾಗೂ ಸೇವಾ ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಹಿನ್ನೆಲೆಯಲ್ಲಿ, ಕಾರ್ಮಿಕರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಲಿಷ್ಠ ESI ಆರೋಗ್ಯ ಮೂಲಸೌಕರ್ಯ ನಿರ್ಮಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು. ಪ್ರಸ್ತಾವಿತ 200 ಹಾಸಿಗೆಗಳ ESI ಆಸ್ಪತ್ರೆ ಯೋಜನೆಗೆ ಸಂಬಂಧಿಸಿದಂತೆ ತಕ್ಷಣ ಕಾರ್ಯಸಾಧ್ಯತಾ ಅಧ್ಯಯನ ಮತ್ತು ಅಗತ್ಯತೆಗಳ ಮೌಲ್ಯಮಾಪನ ನಡೆಸುವುದು, ಆಡಳಿತಾತ್ಮಕ ಅನುಮೋದನೆ ಹಾಗೂ ವೆಚ್ಚ ಮಂಜೂರಾತಿಯನ್ನು ಶೀಘ್ರ ನೀಡುವುದು, ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ಜಾಗ ಗುರುತಿಸುವುದು ಮತ್ತು ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಸಂಸದರು ಮನವಿ ಮಾಡಿದರು.
ಹೊಸ ಆಸ್ಪತ್ರೆಯಲ್ಲಿ ತಜ್ಞ ವೈದ್ಯಕೀಯ ವಿಭಾಗಗಳು, ತುರ್ತು ಚಿಕಿತ್ಸಾ ಘಟಕ, ICU, ಶಸ್ತ್ರಚಿಕಿತ್ಸಾ ಕೊಠಡಿಗಳು, ರೋಗನಿರ್ಣಯ ಸೌಲಭ್ಯಗಳು ಹಾಗೂ ಔಷಧಾಲಯ ಸೇರಿದಂತೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವಂತೆ ಅವರು ಒತ್ತಾಯಿಸಿದರು. 61,337 ESI ಫಲಾನುಭವಿಗಳ ಹಿತದೃಷ್ಟಿಯಿಂದ ಯೋಜನೆಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಂಡು, ನಿರ್ದಿಷ್ಟ ಕಾಲಮಿತಿಯೊಳಗೆ ಜಾರಿಗೊಳಿಸಬೇಕು. 200 ಹಾಸಿಗೆಗಳ ESI ಆಸ್ಪತ್ರೆ ನಿರ್ಮಾಣವಾದರೆ ಸಾವಿರಾರು ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಹಾಸನದಲ್ಲಿಯೇ ಗುಣಮಟ್ಟದ ಆರೋಗ್ಯ ಸೇವೆ ದೊರೆಯಲಿದೆ. ಇದು ಜಿಲ್ಲೆಯ ಕಾರ್ಮಿಕರ ಆರೋಗ್ಯ ಮತ್ತು ಸಾಮಾಜಿಕ ಭದ್ರತೆಯನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಲಿದೆ ಎಂದು ಶ್ರೇಯಸ್ ಎಂ. ಪಟೇಲ್ ವಿಶ್ವಾಸ ವ್ಯಕ್ತಪಡಿಸಿದರು.
