ನವದೆಹಲಿ : ಕಾವೇರಿ ವಿಚಾರದಲ್ಲಿ ನಿರಂತರವಾಗಿ ತಪ್ಪು ಹೆಜ್ಜೆಗಳನ್ನು ಇರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರವು ನಮ್ಮ ಕಾನೂನು ಪಂಡಿತರನ್ನು ಕತ್ತಲೆಯಲ್ಲಿಟ್ಟಿದೆ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
ನವದೆಹಲಿಯಲ್ಲಿ ತುರ್ತು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು; ರಾಜ್ಯದ ಪರವಾಗಿ ಸುಪ್ರೀಂ ಕೋರ್ಟ್ ಮತ್ತು ಪ್ರಾಧಿಕಾರ, ಸಮಿತಿಗಳ ಮುಂದೆ ರಾಜ್ಯದ ಪರವಾಗಿ ವಾದ ಮಾಡುತ್ತಿರುವ ಹಿರಿಯ ವಕೀಲರನ್ನು ಸರಕಾರ ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಅತೀವ ಬೇಸರ ವ್ಯಕ್ತಪಡಿಸಿದರು. ನವದೆಹಲಿಯ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿಗಳು ಕರೆದಿದ್ದ ಸಂಸದರ ಸಭೆಯಲ್ಲಿ ಹಿರಿಯ ವಕೀಲ ಮೋಹನ್ ಕಾತರಕಿ ಅವರಿಗೆ ಕೂರಲು ಕುರ್ಚಿಯನ್ನೇ ನೀಡಲಿಲ್ಲ. ಅವರು ಬೇಸರದಿಂದ ಸಭೆಯಿಂದ ಹೊರಟು ಹೋದ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಅದಾದ ಮೇಲೆ ಬೆಂಗಳೂರಿನ ಕೃಷ್ಣಾ ಕಚೇರಿಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಕೂಡ ಕಾನೂನು ಪಂಡಿತರನ್ನು ನಮ್ಮ ಮುಖ್ಯಮಂತ್ರಿ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಸಭೆಗೆ ಆರಂಭದಲ್ಲಿಯೇ ಅವರ ಅಭಿಪ್ರಾಯವನ್ನು ಪಡೆಯಬೇಕಿತ್ತು. ಮುಂದಾಲೋಚನೆ, ದೂರದೃಷ್ಟಿ ಇಲ್ಲದೆ ನಮ್ಮ ರಾಜ್ಯದ ಸರಕಾರ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಅದು ಸ್ಪಷ್ಟ ನಿದರ್ಶನ. ಇಂಥ ಸಭೆ ಕರೆದಾಗ ಕಾನೂನು ವಿಚಾರ, ತಾಂತ್ರಿಕ ವಿಚಾರಗಳನ್ನು ಸಭೆಯ ಮುಂದೆ ಮಂಡಿಸಬೇಕಿತ್ತು. ಮುಖ್ಯಮಂತ್ರಿಗಳು ಅದನ್ನು ಮಾಡದೇ ತಾವೇ ಸರ್ವವನ್ನೂ ಬಲ್ಲವರಂತೆ ಮಾತನಾಡುತ್ತ ಹೋದರು. ಕಾನೂನು ಪರಿಣಿತರನ್ನು ಹೀಗೆ ನಿರ್ಲಕ್ಷ್ಯ ಮಾಡಿದರೆ ಹೇಗೆ? ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದರು
ಕಾವೇರಿ ನದಿ ನೀರಿನ ಬಿಕ್ಕಟ್ಟು ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ, ಸದಾ ಎಚ್ಚರಿಕೆಯಿಂದ ಇರುವ ತಮಿಳುನಾಡು ಸರಕಾರ, ರಾಜ್ಯ ಸರಕಾರದ ವೈಫಲ್ಯಗಳನ್ನು ತನ್ನ ಅನುಕೂಲಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ. ಈವರೆಗೂ ಆಗಿರುವ ತಪ್ಪುಗಳಿಂದ ರಾಜ್ಯ ಪಾಠ ಕಲಿಯುವ ಲಕ್ಷಣ ಕಾಣುತ್ತಿಲ್ಲ ಎಂದು ಸಚಿವರು ಕಟುವಾಗಿ ಟೀಕಿಸಿದರು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಹಾಗೂ ಕಾವೇರಿ ನೀರು ನಿಯಂತ್ರಣಾ ಸಮಿತಿ (CWRC) ಎರಡೂ ಕಡೆಯಿಂದ 15 ದಿನ ತಮಿಳುನಾಡಿಗೆ ದಿನವೂ ತಲಾ 12,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂಬ ಆದೇಶ ಬಂದಿದೆ. ಕಾವೇರಿ ನೀರು ಬಿಡುವ ವಿಚಾರದಲ್ಲಿ ಕರ್ನಾಟಕದ ಸಿದ್ದತೆಗಳಿಗಿಂತ ತಮಿಳುನಾಡಿನ ಸಿದ್ದತೆಗಳು ಬಿರುಸಾಗಿವೆ. ಕರ್ನಾಟಕವು ಜೂನ್ ತಿಂಗಳಿಂದ ನೀರು ಬಿಡಬೇಕಿತ್ತು. ಆದರೆ ತಮಿಳುನಾಡು ಮೇ ತಿಂಗಳಲ್ಲೇ ಪ್ರಾಧಿಕಾರದ ಮುಂದೆ ಹೋಯಿತು. ಆದರೆ, ಕಾನೂನು ಹೋರಾಟಕ್ಕೆ ನಮ್ಮ ತಂಡಕ್ಕೆ ಶಕ್ತಿ ತುಂಬುವುದು ಬಿಟ್ಟು ನಮ್ಮ ಮುಖ್ಯಮಂತ್ರಿ ಕಾವೇರಿ, ಕೃಷ್ಣಾ ನದಿ ಭಾಗದ ರೈತರು ಬೆಳೆ ಹಾಕಬೇಡಿ ಎಂದು ಉಪದೇಶ ಮಾಡಿದರು. ಅದರಿಂದ ನಷ್ಟ ಆಗಿದ್ದು ನಮ್ಮ ರೈತರಿಗೆ. ಬೆಳೆದಿದ್ದ ಬೆಳೆಯನ್ನು ಕೂಡ ನೀರಿಲ್ಲದೆ ಕಳೆದುಕೊಳ್ಳಬೇಕಾಯಿತು ಎಂದು ಸಚಿವ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.
ಕಾವೇರಿ ವಿಷಯದಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುವ ಬಗ್ಗೆ ತಮಿಳುನಾಡಿಗೂ ಮತ್ತು ನಮಗೂ ಇರುವ ವ್ಯತ್ಯಾಸಗಳ ಬಗ್ಗೆ ಹೇಳುತ್ತಿದ್ದೇನೆ. ಅದನ್ನು ಸರಿಪಡಿಸಿಕೊಂಡರೆ ಉತ್ತಮ. ಸಂಕಷ್ಟ ಸೂತ್ರದ ಬಗ್ಗೆ ಸಂಕಷ್ಟ ಸೂತ್ರದ ಬಗ್ಗೆ ಇದುವರೆಗೂ ಸುಪ್ರೀಂ ಕೋರ್ಟ್ ಯಾವುದೇ ಆದೇಶ ನೀಡಿಲ್ಲ. ಅಲ್ಲದೆ ಕಾವೇರಿ ಸಮಿತಿ ಮತ್ತು ಕಾವೇರಿ ಪ್ರಾಧಿಕಾರ ಇದರ ಬಗ್ಗೆ ಯಾವುದೇ ಕ್ರಮ ವಯಸ್ಸಿಲ್ಲ. ರಾಜ್ಯವು ಸಂಕಷ್ಟ ಸೂತ್ರ ರೂಪಿಸುವ ಬಗ್ಗೆ ಒತ್ತಡ ಹೇರಬೇಕಿತ್ತು. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗೋದಕ್ಕೂ ಮೊದಲು ಮೂರು ವರ್ಷ ಜಲಸಂಪನ್ಮೂಲ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಅವರು ಏನು ಮಾಡುತ್ತಿದ್ದರು ಎಂದು ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
