ವಿಶ್ವ ಅನುವಾದ ದಿನದ ವಿಶೇಷವಾಗಿ ಮನೋಜ್ ಕರ್ನೂರು ಅವರ ಮಲಯಾಳಂ ಪದ್ಯ, ಕನ್ನಡಕ್ಕೆ ಅನುವಾದ ವಿ.ಆರ್.ಕಾರ್ಪೆಂಟರ್
ಹೀಗೆ, ಈ ಕತೆಯನ್ನು
ಏಳನೆಯ ಪೆಗ್‌ನ ನಡುವಿನ
ಒಂದು ಆಯಾಮಕ್ಕೆ ಬಿಗಿಯಲಾಗಿದೆ
ಆ ಏಳರಲ್ಲಿ ನಾನೊಬ್ಬ ಲೇಖಕ
ಅದಕ್ಕೆ ಸಾಕ್ಷಿಯಾಗಿ
ಹಸಿರು ಹೊದ್ದ ದಿಣ್ಣೆಯ ಮೇಲೆ
ಕೆಂಪುಧ್ವಜವೊಂದು ಹರಡಿಕೊಂಡಿರುವ
ದೃಶ್ಯವನ್ನು ಕಾಣಬಹುದಾಗಿದೆ
ಬೆವರ ಮಳೆಯಿಂದ ತೋಯ್ದು ಹೋಗುತ್ತಿರುವ
ನಿರ್ದೇಶಕ ಜಾನಿ
ಪಕ್ಕದ ಕೋಣೆಯಿಂದ ಹೊರಬಂದ
ಹಾಗೆಯೇ, ನಿರ್ಮಾಪಕ ಶಾಜಿ
ಸಹಜವಾಗಿ ತನ್ನ ದೇಹವ ಆ ಕೋಣೆಯಲ್ಲೇ
ಚೆಲ್ಲಿಕೊಂಡಿದ್ದ
ಎಲ್ಲಿಗೋ ಹೊರಡವ ಧಾವಂತದಲ್ಲಿದ್ದ
ಕಲಾವಿದ ವರ್ಮಾನ ಕೈಯಲ್ಲಿ
ಕುಡುಗೋಲು ಎತ್ತಿ ಹಿಡಿದ,
ಭತ್ತದ ತೆನೆಗಳ ಬಗುಲಲ್ಲಿ ಇರುಕಿಕೊಂಡ,
ಮಣ್ಣು ಮೆತ್ತಿಕೊಂಡ ಹಸಿರುಗೆಂಪು ಬಣ್ಣದ ರವಿಕೆಯ ರೈತಮಹಿಳೆಯ
ಒಂದು ಕ್ಲೋಸ್ ಅಪ್ ವರ್ಣಚಿತ್ರ
ಲೊಕೇಶನ್ ಹುಡುಕಲು ಹೊರಟ
ಅನಿಲ್ ಮತ್ತು ಸುನಿಲ್
ತಮ್ಮ ಮುಖಗಳನ್ನು ಕೈಗಳಿಂದ ಒರೆಸಿಕೊಳ್ಳುತ್ತಿದ್ದರೂ
ತುಟಿಗಳ ಮೇಲೆ ಮಾತ್ರ
ಅಸಂಗತ ನಗು
ಎಲ್ಲರ ನಂತರ, ಕಡೆಗೆಂಬಂತೆ ನಾನು
ಆ ಕೋಣೆಯ ಹೊಕ್ಕವನು
ಥಟ್ಟನೆ ಹೊರಬಂದೆ
ಚಪಾತಿ ಮತ್ತು ಕೋಳಿ ಮಾಂಸದ
ತುಂಡುಗಳನ್ನು ಹಂಚಿ ಉಣ್ಣುವ
ಸದ್ದಿನ ಹಿನ್ನೆಲೆಯಿಂದ
ಅವಳು ನಡೆದು ಬಂದಳು:
‘ಇಬ್ಬರೇ ಅಂತ ಹೇಳಿ
ಬೆಳಗ್ಗೆಯಿಂದ ನೀರೂ ಕೊಡದೆ…..
ನೀವು ಹುಳಾಬಿದ್ದು ಸಾಯ್ತೀರ’
ಹೊಸ್ತಿಲು ದಾಟಿ ಹೋಗುವ ಮುನ್ನ
ಅವಳೆಸೆದು ಹೋದ ನೋಟುಗಳನ್ನು
ಪ್ರೊಡಕ್ಷನ್ಸ್ ಎಕ್ಸಿಕ್ಯುಟಿವ್
ಆಯ್ದು ಎತ್ತಿಟ್ಟುಕೊಂಡ
ನಾನು ಹಾಗೆಯೇ ಮುಂದಿನ
ಕೋಣೆಗೆ ನಡೆದೆ
ಹಾಸಿಗೆಯ ಮೇಲೆ ಹಸಿರುಗೆಂಪಿನ ಹೊದಿಕೆ
ಅದರ ಮೇಲೆ ಆಳುದ್ದದ ತೇವ
ಬಹುಶಃ ಈ ಲೊಕೇಶನ್
ಆಗಬಹುದು ಎಂದು ತಮಾಷೆ ಮಾಡಿದೆ
ಕಬೋರ್ಡ್ ಒಳಗಿನ ಶೆಲ್ಫಿನ ಮೇಲೆ
ಅಡಗಿಸಲಾಗಿದ್ದ ಕ್ಯಾಮೆರಾ ನೋಡಿ
ನಿರ್ದೇಶಕ ನಕ್ಕ
‘ಕಟ್’