ಬೆಂಗಳೂರು: ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನ ತತ್ತರಿಸಿದ್ದು, ಪ್ರವಾಹದಿಂದ ಹಾನಿಗೀಡಾಗಿದ್ದ ಪ್ರದೇಶಗಳ ಅಧ್ಯಯನಕ್ಕೆ ಬಂದಿದ್ದ ಕೇಂದ್ರ ಸಮೀಕ್ಷಾ ತಂಡವು ಬೇಕೋ-ಬೇಡವೋ ಎಂಬಂತೆ ಕೆಲವು ಗ್ರಾಮಗಳಿಗೆ ಭೇಟಿ ಕೊಟ್ಟಿದ್ದು, ತಂಡವು ಸಮರ್ಪಕ ಮಾಹಿತಿ ಸಂಗ್ರಹಿಸದೇ ವಾಪಸ್ ತರಳಿದೆ ಎಂದು ಹಾನಿಪೀಡಿತ ಪ್ರದೇಶಗಳ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿರುವ ರಾಜ್ಯ ಕಾಂಗ್ರೆಸ್, ಅತಿವೃಷ್ಟಿ ಹಾನಿಯಿಂದ ಇಡೀ ರಾಜ್ಯ ನಲುಗಿದೆ, ಆದರೆ ಕೇಂದ್ರ ಅಧ್ಯಯನ ತಂಡದಿಂದ ಫೋಟೋಶೂಟ್‌ಗಾಗಿ ಕೇವಲ 5 ನಿಮಿಷದಲ್ಲಿ ಕಾಟಾಚಾರದ ಸಮೀಕ್ಷೆ ನಡೆಸಲಾಗಿದೆ, ಇನ್ನು ಪರಿಹಾರ ಎಷ್ಟರ ಮಟ್ಟಿಗೆ ಬರಲಿದೆ? ಎಂದು ಕಿಡಿಕಾರಿದೆ.
ಸಚಿವರಿಗೆ ಬಿಜೆಪಿಭ್ರಷ್ಟೋತ್ಸವದಲ್ಲಿ ಇರುವ ಆಸಕ್ತಿ ಜನರ ಕಷ್ಟ ಕೇಳುವುದರಲ್ಲಿ ಏಕಿಲ್ಲ ಬೊಮ್ಮಾಯಿ ಅವರೇ? ಇದೇನಾ ನಿಮ್ಮ ಜನಸ್ಪಂದನೆ? ಎಂದು ಕಾಂಗ್ರೆಸ್ ಟೀಕಿಸಿದೆ.