ಮಲೆನಾಡಿಗರು ತಮ್ಮ ಹಿಂದಿನ ಬದುಕಿಗೆ ಹೊರಳಲಾಗದೆ, ಇಂದಿನ ಬದುಕಿಗೆ ಹೊಂದಿಕೊಳ್ಳಲಾಗದ ತೊಳಲಾಟದಿಂದ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಂಥದ್ದೇನಾಗಿದೆ? ಹವ್ಯಾಸಿ ಬರಹಗಾರ ದಿಗಂತ್ ಬಿಂಬೈಲ್ ಅವರ ಅಂಕಣ ಓದಿ.
ಮಲೆನಾಡಿಗರ ಅರ್ಥಿಕ ಬಲವಾಗಿದ್ದ ಅಡಿಕೆಗೆ ದಾಳಿ ಇಟ್ಟಿರುವ ಎಲೆಚುಕ್ಕಿ ರೋಗ ಅಡಿಕೆ ತೋಟವನ್ನು ಸಂಪೂರ್ಣ ನಿರ್ನಾಮ ಮಾಡಿಬಿಡುವುದೆ? ಎನ್ನುವ ಅನುಮಾನ ಈಗ ದಟ್ಟವಾಗುತ್ತಿದೆ. ಅಡಿಕೆ ನಂಬಿದವರು ಮುಂದೆ ಬದುಕು ಹೇಗೆ ಎಂಬ ಯೋಚನೆಗಳಲ್ಲಿ ಮಂಡೆ ಕೆರೆದು ಕೊಳ್ಳುತ್ತಿರುವಾಗ, ಗದ್ದೆ ಗುಡ್ಡಗಳನ್ನೆಲ್ಲ ಅಡಿಕೆಯ ತೋಟಗಳನ್ನಾಗಿ ಮಾರ್ಪಡಿಸಿಕೊಂಡು ಆಡಂಬರದ ಬದುಕಿಗೆ ಓಡುವ ದುರಾಸೆ ಅತಿಯಾಗಿತ್ತು ಎನ್ನುವ ವಾದ ಕೇಳಿ ಬರುತ್ತಿದೆ.
ಸೂಕ್ಷ್ಮವಾಗಿ ಗಮನಿಸಿದಾಗ ಆಸೆ ಅತಿಯಾಗಿರುವುದು ಪ್ರತ್ಯಕ್ಷವಾಗಿ ಎದುರಿಗಿದ್ದರೂ ಸಹ ಅದೇನು ಕೇವಲ ಮಲೆನಾಡಿಗರ ಗುಣವಲ್ಲ. ಮಲೆನಾಡಿನ ಹೊರತಾಗಿ ಉಳಿದೆಲ್ಲ ಪ್ರದೇಶಗಳ ಜನಸಮೂಹ ಸರ್ವಸಂಗ ಪರಿತ್ಯಾಗಿಗಳಾಗಿ ಕುಳಿತಿಲ್ಲ. ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಇಡೀ ಜಗತ್ತು ಅಭಿವೃದ್ಧಿ ಎಂಬ ಹಣೆಪಟ್ಟಿ ಹೊತ್ತು ಓಡುತ್ತಿರುವಾಗ ಅದೇ ಹಾದಿಗೆ ಮಲೆನಾಡು ಕಾಲಿಟ್ಟಿದೆ. ಈಗೀಗ ಹೆಜ್ಜೆ ತಪ್ಪಿದಂತೆನಿಸಿದರೂ ಮಲೆನಾಡಿಗರನ್ನ ಆಧುನಿಕ ಬದುಕಿಗೆ ಎಳೆದಿದ್ದೇ ಈ ವ್ಯವಸ್ಥೆ.
ಮನೆ ಪಕ್ಕದ ಕಾಡುಗಳಲ್ಲಿ ಆಹಾರ, ಮನೋರಂಜನೆ, ಔಷಧಿ ಎಂಬಿತರ ಬದುಕಿನ ಅಗತ್ಯಗಳನ್ನ ಹುಡುಕಿಕೊಂಡಿದ್ದ, ಹಾಗೆಯೇ ಪರಿಸರದೊಂದಿಗೆ ಹೊಂದಾಣಿಕೆಯಲ್ಲಿ ಬದುಕುತ್ತಿದ್ದವರ ಪರಿಸರ ಪ್ರೀತಿಯ ಕೊಂಡಿಯನ್ನ ವ್ಯವಸ್ಥಿತವಾಗಿ ಕತ್ತರಿಸಲಾಯಿತು.
ಈ ವ್ಯವಸ್ಥೆ ಹಸಿರು ಕ್ರಾಂತಿಯ ಹೆಸರಿನಲ್ಲಿ ಹಳ್ಳಿಹಳ್ಳಿಗೆ ರಾಸಾಯನಿಕಗಳ ತುರುಕಿತು. ಹೆಂಡ ಕಳ್ಳು ಬ್ಯಾನ್ ಮಾಡಿ ಒತ್ತಾಯ ಪೂರ್ವಕವಾಗಿ ಸಾರಾಯಿ ಬ್ರಾಂಡಿಗಳ ಪರಿಚಯಿಸಿತು. ಉದ್ಯಮಿಗಳ ಬಂಡವಾಳ ಹಿಂಪಡೆಯಲು ಪ್ರಕೃತಿಯೊಂದಿಗಿನ ಬಂಧದವರನ್ನೆಲ್ಲ ತನ್ನೆಡೆಗೆ ಸೆಳೆದುಕೊಂಡಿತು. ನಡುವೆ ಸಾವಿರಾರು ಎಕರೆ ಮಲೆಕಾಡನ್ನ ಅಣೆಕಟ್ಟುಗಳ ಹೆಸರಲ್ಲಿ ಮುಳುಗಿಸಿತು. ಆ ಮುಖೇನ ಅಭಿವೃದ್ಧಿ ಎನ್ನುವುದನ್ನ ಹೇರಿಕೆ ಮಾಡಿ ಉದ್ಯೋಗದ ಆಸೆ ತೋರಿಸಿ, ಕಾಡುಗಳ ನಡುವೆ ಪಟ್ಟಣಗಳನ್ನ ಕಟ್ಟಿತು. ಅಷ್ಟಕ್ಕೂ ಬಿಡದೆ ಮತ್ತೆ ಸಾವಿರಾರು ಎಕರೆ ಮಲೆಗುಡ್ಡಗಳಿಗೆ ಅಕೇಶಿಯ, ನೀಲಗಿರಿ ಇಟ್ಟು ಗುಡ್ಡಗಳನ್ನೆಲ್ಲ ತನ್ನ ಬಂಡವಾಳದ ಭಾಗವಾಗಿ ಮಾಡಿಕೊಂಡ ಸರ್ಕಾರ, ಅದಾಗಲೇ ಪರಿಸರ ಕೊಂಡಿ ಕಳಚಿದ ಜನರಿಗೆ ನಾವೂ ಹೀಗೆ ಮನೆ ಪಕ್ಕದ ಕಾಡು ಗುಡ್ಡಗಳನ್ನ ಕೃಷಿ ನೆಲವನ್ನಾಗಿ ಮಾರ್ಪಡಿಸಿಕೊಂಡರೆ ವಾಣಿಜ್ಯವಾಗಿ ಅಭಿವೃದ್ಧಿ ಹೊಂದಬಹುದೆಂದು ಪರೋಕ್ಷವಾಗಿ ಹೇಳಿದಂತಿತ್ತು.
ಮನೆಪಕ್ಕದ ಕಾಡಿನಲ್ಲಿಯೇ ದೊರೆಯುತ್ತಿದ್ದ ಆಹಾರ, ಔಷಧಿ, ಮನೋರಂಜನೆ ಇವೆಲ್ಲಕ್ಕೂ ಉದ್ಯಮಿಗಳನ್ನ ಅವಲಂಬಿಸಿದ್ದರಿಂದ ಅವುಗಳನ್ನೆಲ್ಲ ಪಡೆಯಬೇಕಾದರೆ ದುಡ್ಡೇ ಮುಖ್ಯವಾಗಿ ನಿಲ್ಲುವ ದಿನಗಳಿಗೆ ಕಾಲಿಟ್ಟಾಯ್ತು. ಹೀಗೆ, ಈ ವ್ಯವಸ್ಥೆ ಮಲೆಜನರ ಬದುಕಿನ ಗಡಿಯೊಳಗೆ ಬಂದು ಪ್ರಹಾರ ನಡೆಸಿ ಅವರ ಸಂಸ್ಕೃತಿಯೇ ಅಲ್ಲದ, ಅಲ್ಲಿಗೆ ಅಗತ್ಯವೇ ಇಲ್ಲದ, ಮಲೆನಾಡ ಭೌಗೋಳಿಕ ವಿನ್ಯಾಸಕ್ಕೆ, ಹವಾಗುಣಕ್ಕೆ ಸಂಪೂರ್ಣ ವಿರುದ್ಧದ ಬದುಕಿಗೆ ಮಲೆಜನರನ್ನ ಎಳೆದು, ಪೇಟೆಯ ಧಾವಂತದ ಲೆಕ್ಕಾಚಾರದ ಬದುಕನ್ನ ಪರಿಚಯಿಸಿ ರುಚಿತೋರಿಸಿ ಸಂಪೂರ್ಣ ಮಲೆನಾಡ ವ್ಯವಸ್ಥೆಯನ್ನೇ ಹದಗೆಡಿಸಿ ಬಿಟ್ಟಿತು.
ಆಹಾರದ ಬೆಳೆಯ ಗದ್ದೆಗಳನ್ನು ವಾಣಿಜ್ಯವಾಗಿ ಪರಿವರ್ತಿಸಿಕೊಂಡು ಅಡಿಕೆ ಬೆಳೆದು ಇಲ್ಲಿಯ ಪರಿಸರಕ್ಕೆ ಹೊಂದಿಕೆಯಾಗದ ಸ್ಲ್ಯಾಬ್ ಮನೆ ಕಟ್ಟಡ, ಅಗಲವಾದ ರಸ್ತೆ, ಅದ್ದೂರಿ ಆಡಂಬರದ ಜೀವನ ಶೈಲಿಗಳಿಗೆ ಮಾರುಹೋಗಿ ಅವುಗಳನ್ನೇ ನೆಚ್ಚಿ ಹಾಗೆ ಬದುಕಲು ಬೇಕಾದ ಹಣಕ್ಕಾಗಿ ಮತ್ತೆ ಮತ್ತೆ ಅಡಿಕೆ ತೋಟಗಳ ವಿಸ್ತೀರ್ಣವನ್ನ ಹೆಚ್ಚಿಸಿಕೊಳ್ಳುತ್ತ ಅವುಗಳ ಮೇಲೆಯೇ ಅವಲಂಬಿತರಾದ ಮಲೆನಾಡ ಜನರ ಬದುಕು ಈಗ ಅಡಕತ್ತರಿಯಲ್ಲಿ ನಿಂತಿದೆ. ಮತ್ತೆ ತಮ್ಮ ಹಿಂದಿನ ಬದುಕಿಗೆ ಹೊರಳಲಾಗದೆ, ಇಂದಿನ ಬದುಕಿಗೆ ಹೊಂದಿಕೊಳ್ಳಲಾಗದ ತೊಳಲಾಟದಿಂದ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಅಭಿವೃದ್ಧಿ ಎಂಬ ರಾಕ್ಷಸನ ಬೆನ್ನತ್ತಿ ಓಡುತ್ತಿರುವ ಆಳುವ ವರ್ಗಕ್ಕೆ ನಮ್ಮ ನೋವಿನ ಕೂಗು ಕೇಳುವುದೇ ಇಲ್ಲ. ದುರಾಸೆಯ ಬದುಕಿಗೆ ಎಳೆತಂದು ನಿಲ್ಲಿಸಿ ಈಗ ಬೆತ್ತಲಾಗುತ್ತಿರುವ ಮಲೆಜನರನ್ನ ನೋಡಿ ತನ್ನ ತಪ್ಪೇ ಇಲ್ಲದಂತೆ ನಿಂತಿರುವ ಸರ್ಕಾರ ವ್ಯಂಗ್ಯ ಮಾಡುವಂತಿದೆ. ದೇಶ ರಾಜ್ಯ ಜಿಲ್ಲೆಗಳೆಂದು ವಿಭಜಿಸಿಕೊಂಡಿರುವ ನಾವು ಅಲ್ಲಿಯ ಪ್ರಾದೇಶಿಕತೆಯನ್ನ ಕೆಡಿಸಿ ಪರಿಸರ ವ್ಯವಸ್ಥೆಯಲ್ಲಿ ಹೊಂದಿಕೊಂಡಿರುವವರ ಗಡಿಯೊಳಗೆ ನುಸುಳುವುದು, ಮತ್ತವರನ್ನ ಗಡಿಯಾಚೆ ಎಳೆತರುವುದು ಯಾವ ಮಟ್ಟದ ಸಾಂಸ್ಕೃತಿಕ ಸ್ಫೋಟಕ್ಕೆ ಕಾರಣವಾಗುತ್ತದೆ ಎನ್ನುವುದಕ್ಕೆ ಇಂದಿನ ಅರೆಬೆಂದ ಮಲೆನಾಡೇ ಸಾಕ್ಷಿ.
ದಿಗಂತ್ ಬಿಂಬೈಲ್
ಹವ್ಯಾಸಿ ಬರಹಗಾರರು