ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಸೋಮವಾರ ಚೆನ್ನೈನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರನ್ನು “ಭಯೋತ್ಪಾದಕ” ಎಂದು ಸಂಬೋಧಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿ ಮತ್ತು ಎಐಎಡಿಎಂಕೆ (AIADMK) ಮೈತ್ರಿ ಕುರಿತು ಪ್ರತಿಕ್ರಿಯಿಸುವಾಗ ಖರ್ಗೆ ಈ ವಿವಾದಾತ್ಮಕ ಹೇಳಿಕೆ ನೀಡಿದರು. “ಅವರು ಹೇಗೆ ಮೋದಿ ಜೊತೆ ಕೈಜೋಡಿಸುತ್ತಾರೆ? ಅವರು (ಮೋದಿ) ಒಬ್ಬ ಭಯೋತ್ಪಾದಕ. ಅವರಿಗೆ ಸಮಾನತೆಯ ಮೇಲೆ ನಂಬಿಕೆಯಿಲ್ಲ. ಅವರ ಪಕ್ಷವು ಸಮಾನತೆ ಮತ್ತು ನ್ಯಾಯವನ್ನು ನಂಬುವುದಿಲ್ಲ. ಇವರು ಹೋಗಿ ಅವರ ಜೊತೆ ಸೇರುತ್ತಿದ್ದಾರೆ ಎಂದರೆ, ಇವರು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದರ್ಥ,” ಎಂದು ಖರ್ಗೆ ತೀವ್ರವಾಗಿ ವಾಗ್ದಾಳಿ ನಡೆಸಿದರು.
ತಮ್ಮ ಹೇಳಿಕೆಯು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ ನೀಡಲು ಮುಂದಾದರು. ತಾವು ಪ್ರಧಾನಿಯವರನ್ನು ಆ ಅರ್ಥದಲ್ಲಿ ಬಳಸಿಲ್ಲ ಎಂದ ಅವರು, ಮೋದಿ ಅವರು ತನ್ನ ರಾಜಕೀಯ ಎದುರಾಳಿಗಳನ್ನು ಬೆದರಿಸಿ, ಭಯ ಹುಟ್ಟಿಸುತ್ತಾರೆ ಎಂಬ ಹಿನ್ನೆಲೆಯಲ್ಲಿ ಆ ಪದವನ್ನು ಬಳಸಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಖರ್ಗೆ ಅವರ ಈ ಹೇಳಿಕೆಯು ದೇಶದ ರಾಜಕೀಯದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.
