ನಾಸಿಕ್‌ನ ಟಿಸಿಎಸ್ (TCS) ಘಟಕದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಮತ್ತು ಧಾರ್ಮಿಕ ನಿಂದನೆ ಪ್ರಕರಣದ ಪ್ರಮುಖ ಆರೋಪಿ ದಾನಿಶ್ ಶೇಖ್, ಮಂಗಳವಾರ ಜಾಮೀನು ಕೋರಿ ನಾಸಿಕ್ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ತಾನು ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಿಲ್ಲ ಎಂದು 31 ವರ್ಷದ ಈ ಸಾಫ್ಟ್‌ವೇರ್ ಉದ್ಯೋಗಿ ನ್ಯಾಯಾಲಯದಲ್ಲಿ ಸಮರ್ಥಿಸಿಕೊಂಡಿದ್ದಾನೆ.
ತನ್ನ ವಕೀಲ ಉಮೇಶ್ ವಾಲ್ಜಡೆ ಅವರ ಮೂಲಕ ಸಲ್ಲಿಸಿರುವ ಜಾಮೀನು ಅರ್ಜಿಯಲ್ಲಿ, “ದೂರುದಾರರು ನನ್ನ ಬಗ್ಗೆ ಹೊಂದಿದ್ದ ‘ಏಕಪಕ್ಷೀಯ ಭಾವನೆಗಳಿಂದ’ ಉಂಟಾದ ಹತಾಶೆ ಅಥವಾ ಪೋಷಕರ ಒತ್ತಡದ ಕಾರಣದಿಂದಾಗಿ ಈ ಸುಳ್ಳು ದೂರು ದಾಖಲಿಸಿದ್ದಾರೆ,” ಎಂದು ಆರೋಪಿ ದಾನಿಶ್ ಶೇಖ್ ವಾದಿಸಿದ್ದಾನೆ. ತಾವು ಕಾಲೇಜು ದಿನಗಳಿಂದಲೂ ಸ್ನೇಹಿತರಾಗಿದ್ದೆವು ಮತ್ತು ತಾನು ಈಗಾಗಲೇ ವಿವಾಹಿತನಾಗಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದೇನೆ ಎಂಬ ವಿಷಯ ದೂರುದಾರಳಿಗೆ ಮೊದಲೇ ತಿಳಿದಿತ್ತು ಎಂದು ಅವನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.
ಆರೋಪಗಳ ಪ್ರಕಾರ, ಉದ್ಯೋಗ ಕೊಡಿಸುವುದಾಗಿ ನಂಬಿಸಿ ದೂರುದಾರಳನ್ನು ವಂಚಿಸಿ, ಲೈಂಗಿಕವಾಗಿ ಕಿರುಕುಳ ನೀಡಿ, ಮದುವೆಯಾಗುವ ಸುಳ್ಳು ಭರವಸೆ ನೀಡಿದ್ದಾಗಿ ಸಂತ್ರಸ್ತೆ ಆರೋಪಿಸಿದ್ದಾಳೆ. ಆದರೆ ಈ ಆರೋಪಗಳನ್ನು ಅಲ್ಲಗಳೆದಿರುವ ದಾನಿಶ್ ಶೇಖ್, 2022ರಲ್ಲಿ ನಡೆದಿದೆ ಎನ್ನಲಾದ ಘಟನೆಗೆ 2026ರಲ್ಲಿ ಯಾವುದೇ ಸೂಕ್ತ ಕಾರಣ ನೀಡದೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವಾದಿಸಿದ್ದಾನೆ. ನ್ಯಾಯಾಲಯವು ಈ ಅರ್ಜಿಯ ವಿಚಾರಣೆಯನ್ನು ಮೇ 2ಕ್ಕೆ ನಿಗದಿಪಡಿಸಿದೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 69 (ವಂಚನೆಯಿಂದ ಲೈಂಗಿಕ ಕ್ರಿಯೆ), 75 (ಲೈಂಗಿಕ ಕಿರುಕುಳ) ಮತ್ತು 299 (ಧಾರ್ಮಿಕ ಭಾವನೆಗಳಿಗೆ ಧಕ್ಕೆ) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಈ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಎಂಟು ಮಂದಿಯನ್ನು ಬಂಧಿಸಲಾಗಿದೆ. ನಾಸಿಕ್ ಪೊಲೀಸ್ ವಿಶೇಷ ತನಿಖಾ ತಂಡ (SIT) ಈ ಪ್ರಕರಣದ ಆಳವಾದ ತನಿಖೆಯನ್ನು ನಡೆಸುತ್ತಿದೆ. ಇತ್ತ, ಟಿಸಿಎಸ್ ಸಂಸ್ಥೆಯು ಇಂತಹ ಘಟನೆಗಳ ವಿರುದ್ಧ ‘ಶೂನ್ಯ ಸಹಿಷ್ಣುತೆ’ (Zero-tolerance) ನೀತಿಯನ್ನು ಹೊಂದಿದ್ದು, ಆರೋಪಿ ಉದ್ಯೋಗಿಗಳನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
