ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷರ ಚುನಾವಣಾ ರೇಸ್ ನ ಕೊನೆಯ ಹಂತದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ನಡುವಿನ ಸ್ಪರ್ಧೆಯಲ್ಲಿ ಕನ್ನಡಿಗ, ನೆಹರೂ ಕುಟುಂಬದ ಅತ್ಯಾಪ್ತ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.
ಇಂದು ನಾಮಪತ್ರ ಸಲ್ಲಿಸಿರುವ ಮಲ್ಲಿಕಾರ್ಜುನ ಖರ್ಗೆಯವರು ಅಧ್ಯಕ್ಷರಾದರೆ ಕಾಂಗ್ರೆಸ್ ಪಕ್ಷದ “ಒಬ್ಬ ವ್ಯಕ್ತಿ, ಒಂದು ಹುದ್ದೆ” ನಿಯಮದಂತೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಮಲ್ಲಿಕಾರ್ಜುನ ಖರ್ಗೆಯವರ ಆಯ್ಕೆಗೆ ಕಾಂಗ್ರೆಸ್ ಹಿರಿಯ ಘಟಾನುಘಟಿ ನಾಯಕರ ಬೆಂಬಲವಿದೆ. ಜೊತೆಗೆ ಗಾಂಧಿ ಕುಟುಂಬದ ಅತ್ಯಂತ ನಿಷ್ಠಾವಂತ ಮತ್ತು ಮುತ್ಸದ್ದಿ ರಾಜಕಾರಣಿ ಎಂಬ ಹೆಸರಿದೆ. ನಿನ್ನೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ನ ಇನ್ನೊಬ್ಬ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಖರ್ಗೆ ನಾಮಪತ್ರ ಸಲ್ಲಿಕೆಯ ನಂತರ ತಾವು ಚುನಾವಣಾ ಕಣದಿಂದ ಹೊರಗುಳಿದು, ಖರ್ಗೆಯವರಿಗೇ ಬೆಂಬಲ ಸೂಚಿಸಿದ್ದಾರೆ.
ನಿನ್ನೆ ತಡರಾತ್ರಿಯ ವರೆಗೂ ನಡೆದ ಸಭೆಯ ನಂತರ, ಕಾಂಗ್ರೆಸ್ ಹಿರಿಯ ನಾಯಕ ಕೆಸಿ ವೇಣುಗೋಪಾಲ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಬಹುತೇಕರು ಬಯಸಿದ್ದಾರೆ. ಹಾಗಾಗಿ ಅಂತಿಮ ಹಂತದಲ್ಲಿ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
20 ವರ್ಷಗಳ ನಂತರ ಗಾಂಧಿ ಕುಟುಂಬದ ಸದಸ್ಯರ ಹೊರತಾಗಿ ಬೇರೆಯವರು ಸ್ಪರ್ಧಿಸುತ್ತಿರುವ ಮೊದಲ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಇದಾಗಿದೆ. ಪಕ್ಷದ ಮುಖ್ಯಸ್ಥರಾಗಲು ಇತರ ಹಿರಿಯ ನಾಯಕರಿಗೆ ದಾರಿ ಮಾಡಿಕೊಡಲು ಗಾಂಧಿ ಕುಟುಂಬ ಚುನಾವಣಾ ಕಣದಿಂದ ದೂರ ಉಳಿಯಲು ನಿರ್ಧರಿಸಿದೆ. ಕರ್ನಾಟಕದ ಮಟ್ಟಿಗೆ ವಿಶೇಷ ಎಂದರೆ ಎಸ್.ನಿಜಲಿಂಗಪ್ಪನವರ ನಂತರ ಕಾಂಗ್ರೆಸ್ ಪಕ್ಷದಲ್ಲಿ ಕನ್ನಡಿಗರಿಗೆ ಸಿಗುತ್ತಿರುವ ದೊಡ್ಡ ಸ್ಥಾನ ಇದಾಗಿದ್ದು ಖರ್ಗೆ ಆಯ್ಕೆ ಬಹುತೇಕ ಖಚಿತ ಮತ್ತು ಸೂಕ್ತ ವ್ಯಕ್ತಿ ಎಂದೇ ಕಾಂಗ್ರೆಸ್ ಪಾಳಯದ ಅಭಿಪ್ರಾಯವಾಗಿದೆ.