ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಭಾರಿ ಹಿನ್ನಡೆ ಅನುಭವಿಸಿದ್ದು, ಕೇವಲ 81 ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿ 206 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಅಧಿಕಾರಕ್ಕೇರಿದೆ. ಆದರೆ ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ 15,105 ಮತಗಳ ಅಂತರದಿಂದ ಅನಿರೀಕ್ಷಿತ ಸೋಲನ್ನು ಅನುಭವಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರು ಜನಾದೇಶವನ್ನು ಕಳ್ಳತನ ಮಾಡಲಾಗಿದೆ ಮತ್ತು ಅನೈತಿಕ ಹಾದಿಯಲ್ಲಿ ನನ್ನನ್ನು ಸೋಲಿಸಲಾಗಿದೆ ಎಂದು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಮತ ಎಣಿಕೆ ಕೇಂದ್ರದಲ್ಲಿ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದು, ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರೊಂದಿಗೆ ನಡೆಸಿದ ಫೋನ್ ಕರೆಯ ಆಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮತ ಎಣಿಕೆಯ ಅಂತಿಮ ಸುತ್ತಿನ ಸಮಯದಲ್ಲಿ ಕೆಲವು ಗುಂಡಾಗಳು ಎಣಿಕೆ ಕೇಂದ್ರಕ್ಕೆ ನುಗ್ಗಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಸಿಆರ್‌ಪಿಎಫ್ (CRPF) ಸಹಾಯದಿಂದ ಟಿಎಂಸಿ ಏಜೆಂಟ್‌ಗಳನ್ನು ಹೊರಹಾಕಿದ್ದಾರೆ ಎಂದು ಅವರು ಫೋನ್ ಕರೆಯಲ್ಲಿ ದೂರಿದ್ದಾರೆ. ಅಲ್ಲದೆ, ನಿರ್ಣಾಯಕ ಸಮಯದಲ್ಲಿ ತನ್ನನ್ನು ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಲು ಬಿಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಇವಿಎಂ (EVM)ಗಳನ್ನು ಸರಿಯಾಗಿ ಸೀಲ್ ಮಾಡದೆ ಸ್ಟ್ರಾಂಗ್ ರೂಂಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು ಅಂತಿಮ ಸುತ್ತಿನ ಎಣಿಕೆಯ ವೇಳೆ ಟಿಎಂಸಿ ಪ್ರತಿನಿಧಿಗಳು ಅಲ್ಲಿರಲಿಲ್ಲ ಎಂದು ಮಮತಾ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗ, ಸಿಆರ್‌ಪಿಎಫ್ ಮತ್ತು ಸ್ಥಳೀಯ ಚುನಾವಣಾ ಅಧಿಕಾರಿಗಳು ಕೇಂದ್ರ ಸರ್ಕಾರ ಮತ್ತು ಬಿಜೆಪಿಯ ಆದೇಶದಂತೆ ನಡೆದುಕೊಂಡಿದ್ದಾರೆ ಎಂದು ಅವರು ಟೀಕಿಸಿದ್ದಾರೆ. ಮತದಾರರ ಪಟ್ಟಿಯಲ್ಲೂ ಅಕ್ರಮ ನಡೆದಿದ್ದು, ಈ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಭವಾನಿಪುರ ಕ್ಷೇತ್ರದ ಮತ ಎಣಿಕೆಯು ಅತ್ಯಂತ ರೋಚಕವಾಗಿ ಸಾಗಿತ್ತು. ಆರಂಭದಲ್ಲಿ ಎರಡು ಸಾವಿರ ಮತಗಳ ಮುನ್ನಡೆಯಲ್ಲಿದ್ದ ಮಮತಾ, ಏಳನೇ ಸುತ್ತಿನ ವೇಳೆಗೆ 17 ಸಾವಿರ ಮತಗಳ ಭಾರಿ ಮುನ್ನಡೆ ಸಾಧಿಸಿದ್ದರು. ಆದರೆ 14ನೇ ಸುತ್ತಿನ ವೇಳೆಗೆ ಈ ಮುನ್ನಡೆ ನಾಲ್ಕು ಸಾವಿರಕ್ಕೆ ಕುಸಿಯಿತು. ಅಂತಿಮವಾಗಿ ಸುವೇಂದು ಅಧಿಕಾರಿ ಜಯಗಳಿಸುವ ಮೂಲಕ ಮಮತಾ ಬ್ಯಾನರ್ಜಿ ಅವರಿಗೆ ಶಾಕ್ ನೀಡಿದ್ದಾರೆ. ಇದು ಬಿಜೆಪಿಯ ವಿಜಯವಲ್ಲ, ಬದಲಿಗೆ ಇದೊಂದು ಅನೈತಿಕ ಆಟ ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
