Sunday, April 28, 2024

ಸತ್ಯ | ನ್ಯಾಯ |ಧರ್ಮ

ಜಾಗತಿಕ ಸಾಹಿತ್ಯ ಪ್ರಶಸ್ತಿಯ ಅಂತಿಮ ಸುತ್ತಿಗೆ ಮಮತಾ ಜಿ ಸಾಗರ ಆಯ್ಕೆ

ಬೆಂಗಳೂರು: ಸಾಹಿತ್ಯದಲ್ಲಿನ ಅತ್ಯುತ್ತಮ ಸಾಧನೆಗಾಗಿ ಕೊಡಮಾಡುವ ಜಾಗತಿಕ ಪ್ರಶಸ್ತಿಯ ಅಂತಿಮ ಸುತ್ತಿಗೆ ಖ್ಯಾತ ಸಾಹಿತಿ ಮಮತಾ ಜಿ ಸಾಗರ ಅವರನ್ನು ಭಾರತದಿಂದ ಆಯ್ಕೆ ಮಾಡಲಾಗಿದೆ.

ಸಾಹಿತಿಗಳ ಜಾಗತಿಕ ಸಂಘಟನೆ ವರ್ಲ್ಡ್ ಆರ್ಗನೈಜೇಷನ್ ಆಫ್ ರೈಟರ್ಸ್ (ಡಬ್ಲ್ಯುಒಡಬ್ಲ್ಯು) ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ಇದೆ ಏಪ್ರಿಲ್ 6 ರಂದು ನೈಜೀರಿಯಾದ ಅಬುಜಾದಲ್ಲಿ ಪ್ರದಾನ ಮಾಡಲಾಗುತ್ತಿದೆ ಎಂದು ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದೆ.  

ಮುಂಬರುವ ದಿನಗಳಲ್ಲಿ ಸಂಸ್ಕೃತಿ, ಸಾಹಿತ್ಯ ಹಾಗೂ ಆದ್ಯಾತ್ಮಿಕ ಮೌಲ್ಯಗಳನ್ನು ಮಾನವೀಯತೆಯ ಬುನಾದಿಯ ಮೇಲೆ ಸ್ಥಾಪಿಸಿ ಶಾಂತಿ ಹಾಗೂ ಸೌಹಾರ್ದತೆಯನ್ನು ಬೇಡುವ ಜಗತ್ತಿನ ಬರಹಗಾರರ ಕ್ರಿಯಾಶೀಲ ಪ್ರಯತ್ನಗಳನ್ನು ಕಲೆಹಾಕುವುದು ನಮ್ಮ ಪ್ರಯತ್ನ. ಈ ಸಲುವಾಗಿ ಸಾಹಿತಿಗಳ ಜಾಗತಿಕ ಸಂಘಟನೆಯೂ ಶ್ರಮಿಸುತ್ತಿದ್ದು ಇದೇ ಮೊದಲ ಬಾರಿಗೆ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಗೌರವಿಸಲು ‘ಡಬ್ಲ್ಯುಒ ಡಬ್ಲ್ಯು- ಜಾಗತಿಕ ಸಾಹಿತ್ಯ ಪ್ರಶಸ್ತಿ’ಯನ್ನು ಸ್ಥಾಪಿಸಿದೆ ಈ ಪ್ರಶಸ್ತಿ ಸಮಾರಂಭವನ್ನು ಪ್ಯಾನ್ ಆಫ್ರಿಕನ್ ಕಂಟ್ರೀಸ್ ಅಸೋಸಿಯೇಶನ್ ಆಫ್ ರೈಟರ್ಸ್, ಅಸೆಂಬ್ಲಿ ಆಫ್ ಯುರೇಷಿಯನ್ ಪೀಪಲ್ಸ್, ರಷ್ಯನ್ ಅಕಾಡೆಮಿ ಆಫ್ ಆರ್ಟ್ಸ್ ಜಂಟಿಯಾಗಿ ಹಮ್ಮಿಕೊಂಡಿವೆ.  

ಮಮತಾ ಸಾಗರ ಕನ್ನಡದ ಕವಿ, ಭಾಷಾಂತರಕಾರರು ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿದ್ದಾರೆ. ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಒಂಬತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇವರು ಪ್ರಸ್ತುತವಾಗಿ ಮಣಿಪಾಲ್ ವಿ. ವಿಯ ಸೃಷ್ಟಿ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಸೃಜನಾತ್ಮಕ ಬರವಣಿಗೆ ಅಧ್ಯಯನ ಸಂಸ್ಥೆ “ಕಾವ್ಯಸಂಜೆ”ಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  

 ಕೃತಿಗಳು: ‘ಕಾಡ ನವಿಲಿನ ಹೆಜ್ಜೆ’, ‘ನದಿಯ ನೀರಿನ ತೇವ’ ಮತ್ತು ‘ಹೀಗೆ ಹಳಿಯ ಮೇಲೆ ಹಾಡು’ ಕವನ ಸಂಕಲನಗಳು ಪ್ರಕಟಗೊಂಡಿವೆ. ‘ಹೈಡ್ ಅಂಡ್ ಸೀಕ್’ ಎಂಬ ಕವನಸಂಕಲನವನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.  

 ‘ಚುಕ್ಕಿ ಚುಕ್ಕಿ ಚಂದಕ್ಕಿ’, ‘ಮೈಯ್ಯೇ ಭಾರ ಮನವೇ ಭಾರ’ ನಾಟಕ ರಚಿಸಿರುವ ಇವರು, ಸ್ವಿಂಗ್‌ ಆಫ್‌ ಡಿಸೈರ್‌ ಎಂಬ ನಾಟಕವನ್ನು ಭಾಷಾಂತರಿಸಿದ್ದಾರೆ.  ಇಲ್ಲಿ ಸಲ್ಲುವ ಮಾತು ಇವರ ಅಂಕಣ ಬರಹ. ಇವರು ಬರೆದ ಫಯಾಜ್ ಅಹಮದ್ ಫಯಾಜರ ‘ಹ್ಯಾಮ್ ದೇಖೇ೦ಗೆ’ ಕವಿತೆಯ ತರ್ಜುಮೆಯು CAA ಪ್ರತಿಭಟನೆಯ ಸಮಯದಲ್ಲಿ ವೈರಲ್ ಆಗಿತ್ತು.  ಸ್ಲೊವೇನಿಯನ್ ಕವಿತೆ ಮತ್ತು ಕಥೆಗಳ ಸಂಕಲನವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.  ಡಾಂಟೆಯ ಡಿವೈನ್ ಕಾಮಿಡಿಯ ಕ್ಯಾಂಟೋಸ್ 15 ರ ಕನ್ನಡಾನುವಾದವನ್ನು ಇಟಲಿಯ ಲಿಟಲ್ ಮ್ಯೂಜಿಯಂ ನಲ್ಲಿ ಪ್ರಸ್ತುತ ಪಡಿಸಿದ್ದಾರೆ. 

ಪ್ರಪಂಚದಾದ್ಯಂತ ಹಲವು ಭಾಷೆಗಳ ಹಲವಾರು ಕವಿಗಳ ಕವಿತೆಗಳನ್ನು ಇವರು ಕನ್ನಡಕ್ಕೆ ತರ್ಜುಮೆ ಮಾಡಿರುವುದು ಇವರ ಹೆಗ್ಗಳಿಕೆಯಾಗಿದೆ.

ಕನ್ನಡದ ಕೆಲಸಕ್ಕಾಗಿ ಚಾರ್ಲ್ಸ್ ವಾಲೇಸ್ ಫೆಲೋಶಿಪ್ ಸಿಕ್ಕಿರುವ ಕನ್ನಡದ ಮೊದಲ ಅಭ್ಯರ್ಥಿ ಇವರು. ಈ ಫೆಲೋಶಿಪ್ ನಲ್ಲಿ ನೂರು ಪ್ರತಿರೋಧ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 

ಮಲೇಷಿಯಾದಲ್ಲಿ ಕಾಮನ್ ವೆಲ್ತ್ ಫೌಂಡೇಶನ್ನಿನಲ್ಲಿ ಮ್ಯಾಂಚೆಸ್ಟರ್, ಹೆಲ್ಸಿಂಕಿ, ಕೊಲಂಬೋ, ಲಂಡನ್, ನಾರಿಚ್, ವೇಲ್ಸ್  ಮುಂತಾದ ಕಡೆಗಳಲ್ಲಿ ಇವರು ಅಂತರಾಷ್ಟ್ರೀಯ ಮಟ್ಟದ ಕಾವ್ಯಗಾರಗಳನ್ನು  ನಡೆಸಿಕೊಟ್ಟಿದ್ದಾರೆ. ಇವರ ಕವಿತೆಗಳು ಭಾರತೀಯ ಬಹುತೇಕ ಭಾಷೆಗಳಿಗೆ ತರ್ಜುಮೆಯಾಗಿರುವುದಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ  ವೆಲ್ಷ್, ಸ್ಪಾನಿಷ್, ಜರ್ಮನ್, ಇಟಾಲಿಯನ್, ಸ್ಲೊವೇನಿಯನ್, ಅರಾಬಿಕ್, ಫ್ರೆಂಚ್, ಗ್ಯಾಲೀಷಿಯನ್, ರುಮೇನಿಯನ್, ರಷ್ಯನ್, ಮಾಲ್ಟೀಸ್, ಸಿನ್ಹಳ,  ಸ್ವೀಡಿಷ್, ಇಂಗ್ಲೀಷ್, ಜಪನೀಸ್ , ಚೈನೀಸ್, ವಿಯೆಟ್ನಾಮೀಸ್ ಹೀಗೆ ಹಲವಾರು ಅಂತರಾಷ್ಟ್ರೀಯ ಭಾಷೆಗಳಿಗೂ ತರ್ಜುಮೆಯಾಗಿವೆ.

ಇವರು ‘ಕಾವ್ಯ ಸಂಜೆ’ ಎಂಬ ಸಾಮುದಾಯಿಕ ಕಾವ್ಯ ಗುಂಪನ್ನು ಹುಟ್ಟುಹಾಕಿ ಕನ್ನಡ ಕವಿತೆಗಳನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಮ್ಯೂಜ್ ಇಂಡಿಯಾ ಅನ್ಲೈನ್  ಪತ್ರಿಕೆಗೆ ಕನ್ನಡ ಸಂಪಾದಕರಾಗಿ ಹಲವಾರು ವರುಷಗಳಿಂದ ಕನ್ನಡ ಸಾಹಿತ್ಯ ಸಂಸ್ಕೃತಿಯ ಕುರಿತು ಇಂಗ್ಲಿಷಿನಲ್ಲಿ ಬರೆಯುತ್ತಿದ್ದಾರೆ.  

Related Articles

ಇತ್ತೀಚಿನ ಸುದ್ದಿಗಳು