ಮುಂಬೈ ಮೇಯರ್ ಕಣ್ಣೆದುರೇ ತೆರೆದ ಮ್ಯಾನ್‌ಹೋಲ್ ಒಳಗೆ ಬಿದ್ದ ವ್ಯಕ್ತಿ: ವಾರ್ಡ್ ಅಧಿಕಾರಿಗಳ ಅಮಾನತಿಗೆ ಮೇಯರ್ ತಾವ್ಡೆ ಆದೇಶ!

ಮುಂಬೈ: ಮುಂಬೈ ಮೇಯರ್ ಅವರ ಕಣ್ಣೆದುರೇ ವ್ಯಕ್ತಿಯೊಬ್ಬರು ತೆರೆದ ಮ್ಯಾನ್‌ಹೋಲ್ ಒಳಗೆ ಬಿದ್ದಿರುವ ಆಘಾತಕಾರಿ ಘಟನೆ ನಡೆದಿದೆ. ಮುಂಬೈ ನಗರದಲ್ಲಿ ಮಂಗಳವಾರ ಮತ್ತು ಬುಧವಾರ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ, ವಾಸ್ತವ ಸ್ಥಿತಿಗತಿಗಳನ್ನು ಪರಿಶೀಲಿಸಲು ಮೇಯರ್ ರಿತು ತಾವ್ಡೆ ಅವರು ಅಧಿಕಾರಿಗಳೊಂದಿಗೆ ನಗರದಾದ್ಯಂತ ಪ್ರವಾಸ ಹಮ್ಮಿಕೊಂಡಿದ್ದರು.

ಮೇಯರ್ ಅವರು ತಮ್ಮ ಸಿಬ್ಬಂದಿಯೊಂದಿಗೆ ಮಳೆ ಹಾನಿ ಪರಿಸ್ಥಿತಿಯ ಕುರಿತು ಚರ್ಚಿಸುತ್ತಿದ್ದ ಸಮಯದಲ್ಲಿಯೇ ಅವರ ಮುಂದೆಯೇ ಈ ವ್ಯಕ್ತಿ ಮ್ಯಾನ್‌ಹೋಲ್ ಒಳಗೆ ಬಿದ್ದಿದ್ದಾರೆ. ತಕ್ಷಣವೇ ಎಚ್ಚೆತ್ತ ಮುನ್ಸಿಪಲ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆತನನ್ನು ಮೇಲಕ್ಕೆ ಎತ್ತಿದ್ದಾರೆ. ಅದೃಷ್ಟವಶಾತ್ ಅತ್ಯಂತ ಕಿರಿದಾದ ಅಂತರದಲ್ಲಿ ದೊಡ್ಡ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆಯಿಂದ ತೀವ್ರ ಆಕ್ರೋಶಗೊಂಡ ಮೇಯರ್ ರಿತು ತಾವ್ಡೆ ಅವರು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಎಲ್ಲೇ ಆದರೂ ಮ್ಯಾನ್‌ಹೋಲ್‌ಗಳನ್ನು ತೆರೆದಿಟ್ಟಿರುವುದು ಕಂಡುಬಂದರೆ, ಅದಕ್ಕೆ ನೇರ ಹೊಣೆಯಾಗಿಸಿ ಆಯಾ ವಾರ್ಡ್‌ನ ಇನ್‌ಚಾರ್ಜ್ ಅಧಿಕಾರಿಯನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡಲಾಗುವುದು ಎಂದು ಅವರು ಕಡಕ್ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಪ್ರತಿಯೊಂದು ಮ್ಯಾನ್‌ಹೋಲ್ ಸುತ್ತಲೂ ಕಡ್ಡಾಯವಾಗಿ ಅಪಾಯದ ಮುನ್ಸೂಚನೆ ನೀಡುವ ಅಲರ್ಟ್ ಸಿಂಬಲ್ ಅಳವಡಿಸಲಾಗುತ್ತಿದೆ ಎಂದು ತಾವ್ಡೆ ತಿಳಿಸಿದ್ದಾರೆ.

ಮಹಾನಗರ ಪಾಲಿಕೆ ಅಳವಡಿಸುತ್ತಿರುವ ಈ ಸುರಕ್ಷತಾ ಚಿಹ್ನೆಗಳನ್ನು ಸಾರ್ವಜನಿಕರು ಗಮನಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಅಂದಹಾಗೆ, ಮ್ಯಾನ್‌ಹೋಲ್ ಒಳಗೆ ಬಿದ್ದ ವ್ಯಕ್ತಿಯನ್ನು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಸಂಸ್ಥೆಗೆ ಸೇರಿದ ಪೌರಕಾರ್ಮಿಕ ಎಂದು ಗುರುತಿಸಲಾಗಿದೆ. ಈ ಬಾರಿ ಮುಂಬೈ ನಗರಕ್ಕೆ ನೈರುತ್ಯ ಮುಂಗಾರು ಮಳೆಯು ತಡವಾಗಿ ಪ್ರವೇಶಿಸಿದೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು