ಪಾಸ್‌ಪೋರ್ಟ್ ಪೌರತ್ವದ ಪುರಾವೆಯಲ್ಲ; ಅದು ಪ್ರಯಾಣ ದಾಖಲೆ ಮಾತ್ರ: ವಿದೇಶಾಂಗ ಸಚಿವಾಲಯ ಸ್ಪಷ್ಟನೆ!

ಪಾಸ್‌ಪೋರ್ಟ್ ಎಂಬುದು ಕೇವಲ ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ನೀಡಲಾಗುವ ಅಧಿಕೃತ ದಾಖಲೆಯಾಗಿದೆಯೇ ಹೊರತು, ಅದು ದೇಶದ ಪೌರತ್ವವನ್ನು ಧೃಡೀಕರಿಸುವ ಅಂತಿಮ ಪುರಾವೆಯಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಸ್ಪಷ್ಟಪಡಿಸಿದೆ.

ಕೇವಲ ಭಾರತೀಯ ನಾಗರಿಕರಿಗೆ ಮಾತ್ರ ಪಾಸ್‌ಪೋರ್ಟ್ ಜಾರಿಯಾಗುತ್ತಿದ್ದರೂ ಸಹ, ಅದನ್ನು ಪೌರತ್ವವನ್ನು ಖಚಿತಪಡಿಸುವ ದಾಖಲೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸಚಿವಾಲಯ ತಿಳಿಸಿದೆ. ‘ಪಾಸ್‌ಪೋರ್ಟ್ ಸೇವಾ ದಿವಸ್’ (Passport Seva Divas) ಸಂದರ್ಭದಲ್ಲಿ ವಿದೇಶಾಂಗ ಇಲಾಖೆ ಹೊರಡಿಸಿರುವ ಈ ಪ್ರಕಟಣೆಯು, ದೇಶದಲ್ಲಿ ಪೌರತ್ವಕ್ಕೆ ಇರುವ ನಿಜವಾದ ಮತ್ತು ಕಡ್ಡಾಯ ಆಧಾರಗಳು ಯಾವುವು ಎಂಬ ವಿಷಯದ ಕುರಿತು ಸಾರ್ವಜನಿಕ ವಲಯದಲ್ಲಿ ಮತ್ತೊಮ್ಮೆ ಭಾರಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಈ ಅಧಿಕೃತ ಪ್ರಕಟಣೆಯಲ್ಲಿ, ಪಾಸ್‌ಪೋರ್ಟ್ ಎಂಬುದು ಕೇವಲ ಅಂತರರಾಷ್ಟ್ರೀಯ ಪ್ರಯಾಣವನ್ನು ಸುಲಭಗೊಳಿಸಲು ಸರ್ಕಾರವು ನಾಗರಿಕರಿಗೆ ನೀಡುವ ಒಂದು ಪ್ರಾಥಮಿಕ ಪ್ರಯಾಣ ದಾಖಲೆ ಮಾತ್ರ ಎಂದು ತಿಳಿಸಲಾಗಿದೆ. ಇದು ಭಾರತ ಸರ್ಕಾರದ ಅಧಿಕೃತ ಸ್ವತ್ತಾಗಿದ್ದು, ಸರ್ಕಾರವು ಆದೇಶಿಸಿದಾಗ ಇದನ್ನು ಮರಳಿ ಒಪ್ಪಿಸಬೇಕಾಗುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಸಹ ‘ಆಧಾರ್’ ಕಾರ್ಡ್ ಎಂಬುದು ಕೇವಲ ವ್ಯಕ್ತಿಯ ಗುರುತಿನ ಚೀಟಿಯಾಗಿದೆಯೇ ಹೊರತು ಪೌರತ್ವಕ್ಕೆ ಕಡ್ಡಾಯ ನಿರೂಪಣೆಯಲ್ಲ ಎಂದು ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ಈಗ ವಿದೇಶಾಂಗ ಇಲಾಖೆಯು ಪಾಸ್‌ಪೋರ್ಟ್ ಕುರಿತು ಈ ಮಹತ್ವದ ಸ್ಪಷ್ಟನೆ ನೀಡಿರುವುದರಿಂದ, ದೇಶದಲ್ಲಿ ಪೌರತ್ವವನ್ನು ಸಾಬೀತುಪಡಿಸಲು ಸರಿಯಾದ ಮತ್ತು ಅಧಿಕೃತ ಆಧಾರ ಯಾವುದು ಎಂಬ ಗೊಂದಲ ಹಾಗೂ ಸಂದೇಹಗಳು ಹಲವರಲ್ಲಿ ಮೂಡತೊಡಗಿವೆ.

Related Articles

ಇತ್ತೀಚಿನ ಸುದ್ದಿಗಳು