“ಬೇಕಾದಂತೆ ಲಿಂಗ ಬದಲಿಸಲು ಸಾಧ್ಯವಿಲ್ಲ”: ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ರಿಷಿ ಸುನಕ್‌ ಕೀಳು ಮಟ್ಟದ ಹೇಳಿಕೆ

ಅಕ್ಟೋಬರ್ 4 ರಂದು 2023 ರ ಕನ್ಸರ್ವೇಟಿವ್ ಪಕ್ಷದ ಸಮ್ಮೇಳನದಲ್ಲಿ ಯುನೈಟೆಡ್‌ ಕಿಂಗ್‌ಡಮ್‌ನ ಪ್ರಧಾನ ಮಂತ್ರಿ ರಿಷಿ ಸುನಕ್ ಅವರು ತಮ್ಮ ಸಮಾರೋಪ ಭಾಷಣದಲ್ಲಿ ಪ್ರಸ್ತಾಪಿಸಿದ ಭಿನ್ನ ಲಿಂಗಿಗಳ ಬಗೆಗಿನ ಹೇಳಿಕೆ ಟೀಕೆಗೆ ಗುರಿಯಾಗಿದೆ. “ಜನರು ಅವರು ಬಯಸಿದ ಯಾವುದೇ ಲಿಂಗದಿಂದ ಗುರುತಿಸಿಕೊಳ್ಳಬಹುದು ಎಂದರೆ ಅದು ಸಾಧ್ಯವಿಲ್ಲ. ಒಬ್ಬ ಮನುಷ್ಯ ಪುರುಷ ಅಥವಾ ಮತ್ತು ಮಹಿಳೆಯಾಗಿ ಗುರುತಿಸಿಕೊಳ್ಳಲು ಮಾತ್ರ ಸಾಧ್ಯ. ಇದು ಸಾಮಾನ್ಯ ಜ್ಞಾನ,” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ಹೇಳಿಕೆಯನ್ನು ಟ್ರಾನ್ಸ್‌ಫೋಭಿಕ್‌ (ಲಿಂಗಾಂತರಿಗಳ ಬಗೆಗಿನ ಅಸಹನೆ) ಎಂಬ ನೆಲೆಯಿಂದ ಟೀಕಿಸಲಾಗುತ್ತಿದೆ.

ವಿಡಿಯೋ ನೋಡಿ: ರಿಷಿ ಸುನಕ್‌ ಅವರು ನೀಡಿದ ವಿವಾದಾತ್ಮಕ ಹೇಳಿಕೆ

ಯುಕೆ ಪ್ರಧಾನಿಯಾಗಿರು ರಿಷಿ ಸುನಕ್‌ ಅವರ ಈ ಹೇಳಿಕೆ ವೈಯಕ್ತಿಕ ಹೇಳಿಕೆಯಾಗಿರಲು ಸಾಧ್ಯವಿಲ್ಲ, ಇದು ಯುಕೆ ಸರ್ಕಾರದ ಅಭಿಪ್ರಾಯ ಎಂಬ ನೆಲೆಯಲ್ಲಿ ವ್ಯಾಪಕ ಟೀಕೆ ಮಾಡಲಾಗುತ್ತಿದೆ. ರಿಷಿ ಸುನಕ್‌ ಅವರನ್ನು ಟ್ರಾನ್ಸ್‌ಫೋಭಿಕ್‌ ಎಂದು ಕರೆಯಲಾಗುತ್ತಿದೆ.

ಸುನಕ್ ಅವರ ಭಾಷಣದ ಕೇವಲ ಒಂದು ದಿನದ ಹಿಂದೆ ಆರೋಗ್ಯ ಕಾರ್ಯದರ್ಶಿ ಸ್ಟೀವ್ ಬಾರ್ಕ್ಲೇ ಮಹಿಳೆಯರ ಆಸ್ಪತ್ರೆಯ ವಾರ್ಡ್‌ಗಳಲ್ಲಿ ಟ್ರಾನ್ಸ್‌ಜೆಂಡರ್ ಮಹಿಳೆಯರಿಗೆ ಚಿಕಿತ್ಸೆ ನೀಡುವುದನ್ನು ನಿಷೇಧಿಸುವ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಸ್ಕೈ ನ್ಯೂಸ್ ಪ್ರಕಾರ ಮಹಿಳೆಯರ ಆರೋಗ್ಯ ಸೇವೆಗಳ ಬಗೆಗಿನ ಚರ್ಚೆಗಳಲ್ಲಿ ಸೆಕ್ಸ್‌-ಸ್ಪೆಸಿಫಿಕ್ ಪರಿಭಾಷೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿದ್ದರು.

ಯುಕೆಯಲ್ಲಿ 1.5 ಮಿಲಿಯನ್‌ಗಿಂತಲೂ ಹೆಚ್ಚು ಜನರು (3.2%) LGBTQ++ ಎಂದು ಗುರುತಿಸಿಕೊಂಡಿದ್ದು, 260,000 ಕ್ಕಿಂತ ಹೆಚ್ಚು (0.5%) ಟ್ರಾನ್ಸ್ ವ್ಯಕ್ತಿಗಳು/ಜೆಂಡರ್‌- ನಾನ್ ಬೈನರಿಯ ಅಡಿಯಲ್ಲಿ ಬರುತ್ತಾರೆ. ಈ ನೆಲೆಯಿಂದ ಸುನಕ್ ಅವರ ಈ ಅಭಿಪ್ರಾಯ ಅಪಾಯಕಾರಿಯಾಗಿರುತ್ತದೆ.

ಯುಕೆ ಪ್ರಧಾನಮಂತ್ರಿ ಲಿಂಗಾಂತರಿ ನಾಗರಿಕರನ್ನು ಕೀಳಾಗಿ ನೋಡುವುದು ಹಾಗೂ ಇಂತಹ ಸಾರ್ವಜನಿಕ ಟೀಕೆಗಳನ್ನು ನೀಡುವುದು ಇದೇ ಮೊದಲೇನಲ್ಲ. ಜೂನ್ 2023 ರಲ್ಲಿ, ಬ್ರಿಟೀಷ್ ಪ್ರಧಾನಿ ರಹಸ್ಯವಾಗಿ ಟ್ರಾನ್ಸ್ ಮಹಿಳೆಯರನ್ನು ಅಪಹಾಸ್ಯ  ಮಾಡುವ ವಿಡಿಯೋವನ್ನು ಪಿಂಕ್‌ನ್ಯೂಸ್‌ ಹಂಚಿಕೊಂಡಿತ್ತು.

ಈ ವಿಡಿಯೋದಲ್ಲಿ ರಿಷಿ ಸುನಕ್ “ಮಹಿಳೆಯರು ಶಿಶ್ನ ಹೊಂದಿರುವ” ಬಗ್ಗೆ ತಮಾಷೆ ಮಾಡಿದ್ದರು. ಇದು ಟ್ರಾನ್ಸ್‌ ಮಹಿಳೆಯ ಬಗ್ಗೆ ನೇರವಾಗಿ ಮಾಡಿದ ಅನಾಗರಿಕ ಅಪಹಾಸ್ಯವಾಗಿತ್ತು. ಅಲ್ಲದೇ, ಟ್ರಾನ್ಸ್ ಹಕ್ಕುಗಳನ್ನು ಬೆಂಬಲಿಸಿದ್ದಕ್ಕಾಗಿ ಲಿಬರಲ್-ಡೆಮೋಕ್ರಾಟ್ ಪಕ್ಷದ ನಾಯಕ ಎಡ್ ಡೇವಿ ಅವರನ್ನು ಗೇಲಿ ಮಾಡಿದ್ದರು.

“…ಎಡ್ ಡೇವಿ ಎಷ್ಟು ಬ್ಯುಸಿ ಇದ್ದಾರೆ ಎಂದರೆ,  ತನ್ನಂತೆಯೇ ಮಹಿಳೆಯರಿಗೂ ಶಿಶ್ನ ಇರುತ್ತದೆ ಎಂದು ಎಲ್ಲರಿಗೂ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ,” ಎಂಬ ಅತ್ಯಂತ ಕೀಳಾದ ಹೇಳಿಕೆ ನೀಡಿದ್ದರು.

ಕರ್ನಾಟಕ ಮೂಲದ ಉದ್ಯಮಿಗಳಾದ ಇನ್ಫೋಸಿಸ್‌ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯರವರ ಅಳಿಯನಾಗಿರುವ ರಿಷಿ ಸುನಕ್‌ನ ಈ ಹೇಳಿಕೆಗಳು ಇಡೀ ವಿಶ್ವದಲ್ಲಿ ಟೀಕೆಗೆ ಒಳಗಾಗಿದೆ. ಇದು ಓರ್ವ ನಾಯಕನಿಗೆ ತಕ್ಕುದಲ್ಲದ ವರ್ತನೆ, ಟ್ರಾನ್ಸ್ ವ್ಯಕ್ತಿಗಳು ಪ್ರತಿದಿನ ಎದುರಿಸುತ್ತಿರುವ ಸವಾಲುಗಳು ಮತ್ತು ತಾರತಮ್ಯವನ್ನು ಗ್ರಹಿಸುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ ಎಂದು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ಮಾಡುತ್ತಿದ್ದಾರೆ.

X ನಲ್ಲಿ ರಿಷಿ ಸುನಕ್‌ ವಿರುದ್ದ ತೀವ್ರವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

1987 ರಲ್ಲಿ, ಥ್ಯಾಚರ್ ಟೋರಿ ಪಲ್ಪಿಟ್‌ನಿಂದ ಭಯಾನಕ ಹೋಮೋಫೋಬಿಕ್‌ ಮಾತುಗಳನ್ನು ಉಗುಳುತ್ತಿದ್ದರು. 2023 ರಲ್ಲಿ ರಿಷಿ ಸುನಕ್  ಟ್ರಾನ್ಸ್ ಜನರ ಮೇಲೆ ಇದೇ ರೀತಿಯಲ್ಲಿ ದಾಳಿ ಮಾಡುತ್ತಿದ್ದಾರೆ. ಆಗ ಹೆಚ್ಚಿನ ಜನರು ಥ್ಯಾಚರ್ ಅವರ ಭಾಷಣವನ್ನು ದ್ವೇಷಕ್ಕಾಗಿ ನೋಡುತ್ತಿದ್ದರು. ಈಗಲೂ ಹೆಚ್ಚಿನ ಜನರು ಸುನಕ್ ಅವರ ಭಾಷಣವನ್ನು ಅದೇ ರೀತಿಯಲ್ಲಿ ವೀಕ್ಷಿಸುತ್ತಿದ್ದಾರೆ. – @AidanCTweets

Related Articles

ಇತ್ತೀಚಿನ ಸುದ್ದಿಗಳು