ಮಂಡ್ಯ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ (Crime) ಆಕೆಯ ಸಾವಿಗೆ ಕಾರಣನಾದ ಆರೋಪಿಗೆ ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮಂಡ್ಯ ನಗರದ ತಾವರಗೆರೆ ಬಡಾವಣೆಯ ನಿವಾಸಿ ಅಖೀಬ್ ಆಲಂ ಎಂಬಾತನಿಗೆ 20 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 7 ಲಕ್ಷ ರೂಪಾಯಿ ದಂಡ ವಿಧಿಸಿ ಮಂಡ್ಯದ ತ್ವರಿತಗತಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ದಿಲೀಪ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ಈ ಪ್ರಕರಣದ ಹಿನ್ನೆಲೆ
ಮಾಹಿತಿಗಳಪ್ರಕಾರ, ಆರೋಪಿ ಅಖೀಬ್ ಆಲಂ ಶಾಲಾ ಬಾಲಕಿಯನ್ನು ಪ್ರೀತಿಯ ಹೆಸರಿನಲ್ಲಿ ನಂಬಿಸಿ, ಆಕೆಯನ್ನು ಪುಸಲಾಯಿಸುತ್ತಿದ್ದನು. ಒಂದು ವೇಳೆ ತನ್ನನ್ನು ಪ್ರೀತಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಬಾಲಕಿಯನ್ನು ಹೆದರಿಸಿದ್ದನು. 2023ರಜನವರಿ 27ರಂದು ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದು ಶ್ರೀರಂಗಪಟ್ಟಣ ತಾಲ್ಲೂಕಿನ ಕರಿಘಟ್ಟ ಬೆಟ್ಟದ ಬಳಿ ಲೈಂಗಿಕ ದೌರ್ಜನ್ಯ ಎಸಗಿದ್ದನು. ಅಲ್ಲದೆ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಆಕೆಗೆ ಬೆದರಿಕೆ ಹಾಕಿದ್ದ.
ಆತ್ಮಹತ್ಯೆ ಮಾಡಿಕೊಂಡಿದ್ದ ಬಾಲಕಿ
ಆರೋಪಿಯ ಕಿರುಕುಳ ಹಾಗೂ ಈ ಘಟನೆಯಿಂದ ತೀವ್ರವಾಗಿ ಮನನೊಂದ ಬಾಲಕಿಯು ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಾಲಕಿಯ ಮರಣದ ನಂತರ ನಡೆದ ವೈದ್ಯಕೀಯ ತಪಾಸಣೆಯಲ್ಲಿ ಆಕೆ ಗರ್ಭಿಣಿಯಾಗಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಮಂಡ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲುಮಾಡಲಾಗಿತ್ತು. ತನಿಖಾಧಿಕಾರಿಯಾದ ಇನ್ಸ್‌ಪೆಕ್ಟರ್ ಆನಂದಕುಮಾರ್ ಅವರು ಸರಿಯಾದ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಮಹತ್ವದ ತೀರ್ಪು ಪ್ರಕಟಿಸಿದೆ. ಸರ್ಕಾರಿ ಅಭಿಯೋಜಕರಾದ ಹೆಬ್ಬಕವಾಡಿ ನಾಗರಾಜು ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
