Home ಜನ-ಗಣ-ಮನ ಧರ್ಮ- ಸಂಸ್ಕೃತಿ ಮಂಗಳಾದೇವಿ ಜಾತ್ರೆ | ಸಂಘಪರಿವಾರದ  ಬಹಿಷ್ಕಾರಕ್ಕೆ ಕವಡೆ ಕಿಮ್ಮತ್ತು ನೀಡದ ಮಂಗಳೂರಿನ ಗ್ರಾಹಕರು

ಮಂಗಳಾದೇವಿ ಜಾತ್ರೆ | ಸಂಘಪರಿವಾರದ  ಬಹಿಷ್ಕಾರಕ್ಕೆ ಕವಡೆ ಕಿಮ್ಮತ್ತು ನೀಡದ ಮಂಗಳೂರಿನ ಗ್ರಾಹಕರು

0

ಮಂಗಳೂರು :  “ನಾವು ವಸ್ತುಗಳ ಗುಣ ಮಟ್ಟ ನೋಡಿ ಖರೀದಿ ಮಾಡುವುದು. ಎಲ್ಲಿ ಕಡಿಮೆ ಬೆಲೆ ಅಂತಾನೂ ನೋಡ್ತೇವೆ. ಈ  ಬ್ಯಾನರ್‌  ಗೀನರ್‌ ನೋಡಿ  ಅಲ್ಲ. ನಮಗೆ ಎಲ್ಲರೂ ಒಂದೇʼ  ಹೀಗೆ ಒಂದೇ ಉಸಿರಿನಲ್ಲಿ  ಗಂಭೀರವಾಗಿ ಹೇಳಿದವರು  ಮಂಗಳೂರಿನ ಮಂಗಳಾದೇವಿ  ದೇವಸ್ಥಾನದಲ್ಲಿ ನಡೆಯುತ್ತಿರುವ ದಸರಾ ಉತ್ಸವ ನೋಡಲು ಬಂದ ಓರ್ವ ಯುವತಿ. ಇದು ಮಂಗಳೂರಿನ ಜನತೆ  ಶಾಂತಿ ಸೌಹಾರ್ದ ಕೆಡವಲು ಬಯಸುವವರಿಗೆ ಕೊಟ್ಟ ಉತ್ತರ.

ಉತ್ಸವದ ಸಂದರ್ಭದಲ್ಲಿ ಮುಸಲ್ಮಾನರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ವಿಶ್ವ ಹಿಂದೂ ಪರಿಷತ್‌, ಸನಾತನ ವ್ಯಾಪಾರ ಸಂಘ ಹಾಗೂ ಭಜರಂಗದಳದವರು  ಆರಂಭದಲ್ಲಿ ಆಕ್ಷೇಪಣೆ ಎತ್ತಿದ್ದರು. ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಸಾರ್ವಜನಿಕ ಸ್ಥಳದಲ್ಲಿ ಮಹಾನಗರಪಾಲಿಕೆಯ ಅನುಮತಿಯೊಂದಿಗೆ ಮುಸ್ಲಿಮ್‌ ವ್ಯಾಪಾರಿಗಳಿಗೂ ಅವಕಾಶ ಕಲ್ಪಿಸಿತ್ತು. ಇಲ್ಲಿ 125 ಮಳಿಗೆಗಳಿದ್ದು ಒಟ್ಟು   6 ಮಳಿಗೆಗಳು ಮುಸ್ಲಿಂ ವರ್ತಕರದ್ದಾಗಿದೆ.

ಮುಸ್ಲಿಂ ವರ್ತಕರ ಬಳಿ ವ್ಯಾಪಾರ ವ್ಯವಹಾರ ತಡೆಯಲು ಕೊನೆಯ ಪ್ರಯತ್ನ ಎಂಬಂತೆ ವಿಶ್ವ ಹಿಂದೂ ಪರಿಷತ್‌  ಹಿಂದೂಗಳ ಅಂಗಡಿಗಳ ಮೇಲೆ ಭಗವಾಧ್ವಜವನ್ನು ಕಟ್ಟಿ  ಅಲ್ಲಿ ಮಾತ್ರ ವ್ಯಾಪಾರ ಮಾಡುವಂತೆ ಹಿಂದೂ ಗ್ರಾಹಕರಿಗೆ ಪರೋಕ್ಷ ಸೂಚನೆ ನೀಡಿತ್ತು. ಆದರೆ ಗ್ರಾಹಕರು ಧರ್ಮ, ಬಾವುಟ ಯಾವುದನ್ನೂ ನೋಡದೆ ಅಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ.

ಶಿವಮೊಗ್ಗದ  ಮಣಿಸರಕು ಅಂಗಡಿಯ  ದಾದಾ ಪೀರ್‌  ಹದಿನೈದು  ವರ್ಷಗಳಿಂದ  ಇಲ್ಲಿಗೆ ಬಂದು ವ್ಯಾಪಾರ ಮಾಡುವವರು. ಅವರ ಪ್ರಕಾರ ಈ ವರ್ಷ ವ್ಯಾಪಾರ ತುಂಬಾ ಕಡಿಮೆ.   ಟಿ ವಿ ಯವರು ಏನೇನೆಲ್ಲ ಸುದ್ದಿ ಹಾಕಿ ಜನರನ್ನು ಹೆದರಿಸಿದ್ದಾರೆ. “ನಮಗ್ಯಾಕೆ ಸುಮ್ಮಗೆ..”  ಅಂತ ಜನ ಬರುವುದು ಕಡಿಮೆಯಾಗಿದೆ. ಮುಸ್ಲಿಂ ಜನ ತುಂಬಾನೇ ಕಡಿಮೆ. ಆದರೆ  ಇಲ್ಲಿ ನಮಗೆ ಯಾವುದೇ ತೊಂದರೆಗಳಾಗಿಲ್ಲ. ಮಳಿಗೆ ಬಾಡಿಗೆಯೂ ಕಳೆದ ಬಾರಿಗಿಂತ ಕಡಿಮೆ . ಯಾಕೆಂದರೆ ಈ ಬಾರಿ ನೇರವಾಗಿ ಮಹಾನಗರಪಾಲಿಕೆಯೇ ದರ ನಿಗದಿ ಪಡಿಸಿದೆ.  ಯಾರೂ ಧರ್ಮ ನೋಡಿಲ್ಲ. ವ್ಯಾಪಾರದಲ್ಲಿ ಎಂತ ಬೇಧ ಭಾವ ?  ಎಂದು ಪ್ರಶ್ನಿಸುತ್ತಾರೆ.

“ನಾನು ಮಂಗಳೂರಿನವನೇ. ಸುಮಾರು 20 ವರ್ಷಗಳಿಂದ ಚಪ್ಪಲಿ ವ್ಯಾಪಾರ ಮಾಡ್ತಾ ಇದ್ದೇನೆ. ಒಮ್ಮೆಯೂ ಹಿಂದೂ ಮುಸ್ಲಿಂ ಅಂತ ಬೇಧ ಭಾವ ಕಂಡಿಲ್ಲ. ಈ ಬಾರಿಯೇ ಕೆಲವರು ಬೇಧ ಮಾಡಲು ಹೊರಟದ್ದು. ಅದು ಅವರಿಗೆ ಬೇಕಾದದ್ದು. ನಮ್ಮ ಜನರಿಗೆ ಅಲ್ಲ. ಈ ವರ್ಷ ನನಗೆ ಒಳ್ಳೆಯ ವ್ಯಾಪಾರ ಆಗುತ್ತಿದೆ. ಹಿಂದೂ ತಾಯಂದಿರು, ಮಕ್ಕಳೇ  ಜಾಸ್ತಿ” ಎನ್ನುತ್ತಾರೆ ಚಪ್ಪಲಿ ಮಳಿಗೆಯ ಖಾಸಿಂ ಅಡ್ಯಾರ್.‌

ಚಪ್ಪಲಿ ಖರೀದಿಸಲು ಅಮ್ಮ ಮಗಳು ಬಂದಿದ್ದರು. ನಮಗೆ ಬೇಕಾದುದನ್ನು ನಮಗೆ ಬೇಕಾದಲ್ಲಿಂದ ಖರೀದಿಸುತ್ತೇವೆ. ಯಾರು ಈ ಬಾವುಟ ಎಲ್ಲ ನೋಡ್ತಾರೆ?  ವಸ್ತು ಒಳ್ಳೆಯದಿರಬೇಕು ರೇಟ್‌ ಕಡಿಮೆ ಇರಬೇಕು . ಬಾವುಟ ಹಾಕಿದವರ ಮನೆಯವರೇ ಇದನ್ನೆಲ್ಲ ನೋಡ್ತಾರಾ ಎಂದು ಚೆಂದಗೆ ನಕ್ಕಳು ಮಗಳು. ಹೆಸರೇನು ಎಂದು ಕೇಳಿದ ತಕ್ಷಣವೇ ಹೆಸರು ಬೇಡ ಅಂದರು ಆಕೆಯ ತಾಯಿ.

ಇಲ್ಲಿ ಹೀಗಿದೆಯೇನ್ರೀ? ನನಗೊತ್ತೇ ಇಲ್ಲ. ಎಲ್ರೂ ಬಂದು ವ್ಯಾಪಾರ ಮಾಡಿ ಹೋಗ್ತಿದ್ದಾರೆ. ಬಾವುಟ ಕೂಡಾ ನಾನು ಗಮನಿಸಿಲ್ಲ. ಧರ್ಮದ ಆಧಾರದಲ್ಲಿ ಜಾತ್ರೆ ವ್ಯಾಪಾರ ನಡೆಸುವುದು  ಸರಿಯಲ್ಲ ಅಂದವರು  ಒಬ್ಬ ವ್ಯಾಪಾರಿ.  

ಹಲವು ಹಿಂದೂ ಮಳಿಗೆಗಳಲ್ಲಿ ಭಗವಾಧ್ಜಜ ಇರಲಿಲ್ಲ. ಈ ಬಾರಿ ಎಂದಿಗಿಂತ ಹೆಚ್ಚು ವ್ಯಾಪಾರ ಮಳಿಗೆಗಳಿವೆ  ಅನ್ನುತ್ತಾರೆ  ಪ್ರತೀ ವರ್ಷವೂ ಮಂಗಳಾದೇವಿ ಗೆ ಬರುವ ಒಬ್ಬ ಭಕ್ತೆ.

ಮಂಗಳೂರಿನ ಮಂಗಳಾದೇವಿ ಜಾತ್ರೆಗೆ ಬಂದವರು  ಬಾವುಟ ನೋಡಿ ಖರೀದಿಸಬೇಕು ಎಂದು ಫರ್ಮಾನು ಹೊರಡಿಸಿದವರ ಬಾಯಿ ಮುಚ್ಚಿಸಿದ್ದಾರೆ.  ಒಟ್ಟಿನಲ್ಲಿ ಬಡ ವ್ಯಾಪಾರಸ್ಥರ ಹೊಟ್ಟೆಗೆ ಹೊಡೆಯುವ ಪ್ರಯತ್ನ ಮಾಡಿದ ಮತಾಂಧ  ಶಕ್ತಿಗಳಿಗೆ ಮಂಗಳೂರಿನ ಜನತೆ  ಸರಿಯಾದ ಪಾಠ ಕಲಿಸಿದ್ದಾರೆ.

ಇದನ್ನೂ ಓದಿ-ಮುಸ್ಲಿಂ ವರ್ತಕರಿಗೆ ಬಹಿಷ್ಕಾರ: ಶರಣ್ ಪಂಪ್‌ವೆಲ್ ವಿರುದ್ಧದ ಎಫ್‌ಐಆರ್‌ ತಡೆ ಹಿಡಿದ ಹೈಕೋರ್ಟ್‌

You cannot copy content of this page

Exit mobile version