ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ಹಲವು ಬಾರಿ ಗಡುವು ವಿಸ್ತರಣೆ ಮಾಡಿದ ನಂತರ ಈಗ ಕಟ್ಟ ಕೊನೆಯ ಬಾರಿಗೆ ಕೊನೆಯ ದಿನಾಂಕ ಸಿಕ್ಕಿದೆ. ಇದೀಗ ಮಾರ್ಚ್ 31 ರ ಒಳಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಸದೇ ಇದ್ದರೆ ಬಾರಿ ಮೊತ್ತದ ದಂಡ ಬೀಳಲಿದೆ.
ಈ ಹಿಂದೆ ಮತ್ತೆ ಮತ್ತೆ ಗಡುವು ವಿಸ್ತರಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಮಾರ್ಚ್ 31, 2025ರ ವರೆಗೆ ಅವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ಉಳಿದಂತೆ ದಿನಾಂಕ 17-08-2023ರಲ್ಲಿ ಹೊರಡಿಸಿ ಆದೇಶದಲ್ಲಿ ಬೇರೆ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಈ ಎಚ್ಚರಿಕೆ ನಂತರವೂ ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ ದಂಡದ ಜೊತೆಗೆ ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ, ನಕಲಿ ಆರ್‌ಸಿ, ವಿಮೆ ಹಾಗೂ ಇನ್ನಿತರ ಕೆಲಸಗಳನ್ನು ಇಲಾಖೆ ಮಾಡಿ ಕೊಡುವುದಿಲ್ಲ ಎಂದು ತಿಳಿಸಿದೆ. ಸಾರಿಗೆ ಇಲಾಖೆ ಹೊರಡಿಸಿರುವ ಈ ಸೂಚನೆಯಿಂದ ಅಧಿಕೃತ ಆಗಿಲ್ಲದ ವಾಹನಗಳು ರಸ್ತೆಯಲ್ಲಿ ಸಂಚರಿಸುವುದನ್ನು ಸುಲಭವಾಗಿ ಪತ್ತೆ ಹಚ್ಚಲು ಸಹಾಯಕ ಆಗಲಿದೆ.
ರಾಜ್ಯದಲ್ಲಿ 1ನೇ ಏಪ್ರಿಲ್ 2019ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) (ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ) ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಹೆಚ್‌ಎಸ್‌ಆರ್ಪಿ) ಅಳವಡಿಸುವುದು ಕಡ್ಡಾಯವಾಗಿದೆ.