Home ದೆಹಲಿ ದೇಶಾದ್ಯಂತ ಕಲಬೆರಕೆ ಜಾಲ ಬಯಲು: ಹಾಲು, ಪನೀರ್‌, ಟೂತ್‌ಪೇಸ್ಟ್‌ ಮಸಾಲೆ ಎಲ್ಲವೂ ನಕಲಿ!

ದೇಶಾದ್ಯಂತ ಕಲಬೆರಕೆ ಜಾಲ ಬಯಲು: ಹಾಲು, ಪನೀರ್‌, ಟೂತ್‌ಪೇಸ್ಟ್‌ ಮಸಾಲೆ ಎಲ್ಲವೂ ನಕಲಿ!

0

ದೆಹಲಿ: ಭಾರತೀಯರು ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಬಳಸುವ ಬಹುತೇಕ ದಿನಬಳಕೆಯ ವಸ್ತುಗಳು ವಿಷಕಾರಿಯಾಗಿ ಕಲಬೆರಕೆಯಾಗುತ್ತಿವೆ ಎಂಬ ಆಘಾತಕಾರಿ ಸತ್ಯ ಕಳೆದ ಒಂದು ತಿಂಗಳ ಅವಧಿಯಲ್ಲಿ ದೇಶಾದ್ಯಂತ ನಡೆದ ದಾಳಿಗಳಿಂದ ಬೆಳಕಿಗೆ ಬಂದಿದೆ. ಹಾಲಿನ ಉತ್ಪನ್ನಗಳಿಂದ ಹಿಡಿದು ಟೂತ್‌ಪೇಸ್ಟ್‌ ತನಕ ಎಲ್ಲವನ್ನೂ ನಕಲಿ ಮಾಡುವ ದಂಧೆಕೋರರು ಒಂದು ಬೃಹತ್ ಸಿಂಡಿಕೇಟ್ ರಚಿಸಿಕೊಂಡು ಕೈಗಾರಿಕಾ ಮಟ್ಟದಲ್ಲಿ ಈ ಕೃತ್ಯ ಎಸಗುತ್ತಿರುವುದು ಪತ್ತೆಯಾಗಿದ್ದು, ಸಾರ್ವಜನಿಕರ ಆರೋಗ್ಯಕ್ಕೆ ದೊಡ್ಡ ಕಂಟಕ ಎದುರಾಗಿದೆ.

ದೆಹಲಿಯ ಕಾಂಜಾವಾಲಾದಲ್ಲಿ ‘ಸೆನ್ಸೊಡೈನ್’ ಬ್ರ್ಯಾಂಡ್‌ನ ಹೆಸರಿನಲ್ಲಿ ನಕಲಿ ಮತ್ತು ಹಾನಿಕಾರಕ ಟೂತ್‌ಪೇಸ್ಟ್ ತಯಾರಿಸುತ್ತಿದ್ದ ಕಾರ್ಖಾನೆಯನ್ನು ಕ್ರೈಂ ಬ್ರಾಂಚ್ ಇತ್ತೀಚೆಗೆ ಧ್ವಂಸಗೊಳಿಸಿದೆ. ಅಷ್ಟೇ ಅಲ್ಲದೆ, ಅವಧಿ ಮುಗಿದಿರುವ (Expired) ಕೋಕಾಕೋಲಾ, ಥಮ್ಸ್ ಅಪ್ ಮತ್ತು ಸ್ಪ್ರೈಟ್‌ನಂತಹ ಪಾನೀಯಗಳ ಕ್ಯಾನ್‌ಗಳ ಮೇಲಿರುವ ಹಳೆಯ ದಿನಾಂಕವನ್ನು ಅಳಿಸಿ, ಹೊಸ ದಿನಾಂಕಗಳನ್ನು ಮುದ್ರಿಸುತ್ತಿದ್ದ ಮತ್ತೊಂದು ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ ಸಾವಿರಾರು ನಕಲಿ ಪಾನೀಯ ಕ್ಯಾನ್‌ಗಳು ಮತ್ತು ಕೆಟ್ಟುಹೋಗಿದ್ದ ಬಿಸ್ಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇತ್ತ ಗುಜರಾತ್‌ನ ಸೂರತ್‌ನಲ್ಲಿ ಎಫ್‌ಎಸ್‌ಎಸ್‌ಎಐ (FSSAI) ಲೈಸೆನ್ಸ್ ಹೊಂದಿದ್ದ ಫ್ಯಾಕ್ಟರಿಯಲ್ಲೇ ಪಾಮ್ ಆಯಿಲ್ ಮತ್ತು ಅಸಿಟಿಕ್ ಆಸಿಡ್ ಬಳಸಿ ತಯಾರಿಸಲಾಗಿದ್ದ ಸುಮಾರು 1,401 ಕೆಜಿ ಕಲಬೆರಕೆ ಪನೀರ್ ಅನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ದಾಳಿಯಲ್ಲಿ ಅತ್ಯಂತ ಅಶುಚಿಯಾದ ವಾತಾವರಣದಲ್ಲಿ ಶುಂಠಿ-ಬೆಳ್ಳುಳ್ಳಿ ಸಿಪ್ಪೆಯ ಜೊತೆಗೆ ಗ್ಸಾಂಥನ್ ಗಮ್ ಪೌಡರ್ ಬೆರೆಸಿ ತಯಾರಿಸುತ್ತಿದ್ದ 4,032 ಕೆಜಿ ನಕಲಿ ಪೇಸ್ಟ್ ಪತ್ತೆಯಾಗಿದೆ. ಈ ವಸ್ತುಗಳ ಸೇವನೆಯಿಂದ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳು ಬರುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ವಿಶೇಷವೆಂದರೆ, ಮಾರುಕಟ್ಟೆಯಲ್ಲಿ ಕಲಬೆರಕೆ ವಸ್ತುಗಳ ಹಾವಳಿ ಹೆಚ್ಚಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ ನೆಟ್ಟಿಗರ ವಿರುದ್ಧವೇ ಎಫ್‌ಎಸ್‌ಎಸ್‌ಎಐ ಪ್ರಕರಣ ದಾಖಲಿಸಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಸಂಸ್ಥೆಯ ವೆಬ್‌ಸೈಟ್‌ನಿಂದ ಮಾಹಿತಿಯನ್ನು ಅಕ್ರಮವಾಗಿ ಪಡೆದು ವೈರಲ್ ಮಾಡಲಾಗುತ್ತಿದೆ ಎಂಬುದು ಅಧಿಕಾರಿಗಳ ವಾದವಾಗಿದೆ. ಒಟ್ಟಾರೆಯಾಗಿ, ಗ್ರಾಹಕರು ಬ್ರ್ಯಾಂಡೆಡ್ ವಸ್ತುಗಳನ್ನು ಖರೀದಿಸುವಾಗಲೂ ಹೆಚ್ಚಿನ ಜಾಗ್ರತೆ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.

You cannot copy content of this page

Exit mobile version