ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಪತ್ನಿಯ ವಿರುದ್ಧ ಕಾಂಗ್ರೆಸ್ ನಾಯಕ ಪವನ್ ಖೇರಾ ಮಾಡಿದ್ದ ಭ್ರಷ್ಟಾಚಾರದ ಆರೋಪಗಳು ಈಗ ಕಾನೂನು ಸಂಘರ್ಷಕ್ಕೆ ಕಾರಣವಾಗಿವೆ. ಈ ಸಂಬಂಧ ದಾಖಲಾದ ಎಫ್‌ಐಆರ್ ಆಧರಿಸಿ ಅಸ್ಸಾಂ ಪೊಲೀಸರು ಮಂಗಳವಾರ ದೆಹಲಿಯ ಖೇರಾ ನಿವಾಸದ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.
ಶೋಧ ಕಾರ್ಯದ ವೇಳೆ ಪವನ್ ಖೇರಾ ಮನೆಯಲ್ಲಿ ಇರಲಿಲ್ಲ ಎಂದು ಡಿಸಿಪಿ ದೆಬೋಜಿತ್ ನಾಥ್ ತಿಳಿಸಿದ್ದಾರೆ. “ತಪಾಸಣೆಯ ಸಮಯದಲ್ಲಿ ಕೆಲವು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯಗಳು ಲಭ್ಯವಾಗಿವೆ. ಆದರೆ ತನಿಖೆಯ ಹಿತದೃಷ್ಟಿಯಿಂದ ಈಗಲೇ ಹೆಚ್ಚಿನ ವಿವರಗಳನ್ನು ನೀಡಲು ಸಾಧ್ಯವಿಲ್ಲ,” ಎಂದು ಅವರು ಮಾಧ್ಯಮಗಳಿಗೆ ವಿವರಿಸಿದ್ದಾರೆ. ಈ ಕ್ರಮವನ್ನು ಕಾಂಗ್ರೆಸ್ ಪಕ್ಷವು “ರಾಜಕೀಯ ಸೇಡಿನ ಕ್ರಮ” ಎಂದು ತೀವ್ರವಾಗಿ ಖಂಡಿಸಿದೆ.
ಇನ್ನೊಂದೆಡೆ, ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಅವರು ಪವನ್ ಖೇರಾ ವಿರುದ್ಧ ವಾಗ್ದಾಳಿ ನಡೆಸಿದ್ದು, “ಪೊಲೀಸ್ ವಿಚಾರಣೆಗೆ ಹೆದರಿ ಖೇರಾ ಹೈದರಾಬಾದ್‌ಗೆ ಓಡಿಹೋಗಿದ್ದಾರೆ” ಎಂದು ಲೇವಡಿ ಮಾಡಿದ್ದಾರೆ. “ಅವರು ಪಾತಾಳದಲ್ಲಿದ್ದರೂ ಪೊಲೀಸರು ಅವರನ್ನು ಬಿಡುವುದಿಲ್ಲ, ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ,” ಎಂದು ಶರ್ಮಾ ಎಚ್ಚರಿಸಿದ್ದಾರೆ. ಸದ್ಯ ಹೈದರಾಬಾದ್‌ನಲ್ಲಿರುವ ಖೇರಾ ಅವರನ್ನು ಬಂಧಿಸಲು ಅಸ್ಸಾಂ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಈ ಬೆಳವಣಿಗೆಯು ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.
