Home ದೇಶ ಛತ್ತೀಸ್‌ಗಢದಲ್ಲಿ ಭಾರಿ ಎನ್‌ಕೌಂಟರ್: 10 ಮಾವೋವಾದಿಗಳು ಸಾವು..!

ಛತ್ತೀಸ್‌ಗಢದಲ್ಲಿ ಭಾರಿ ಎನ್‌ಕೌಂಟರ್: 10 ಮಾವೋವಾದಿಗಳು ಸಾವು..!

0

ರಾಯ್‌ಪುರ: ಛತ್ತೀಸ್‌ಗಢದ ಗರಿಯಾಬಂದ್ ಪ್ರದೇಶದಲ್ಲಿ ಗುರುವಾರ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ಎನ್‌ಕೌಂಟರ್ ನಡೆದಿದ್ದು, ಇದರಲ್ಲಿ ಇಲ್ಲಿಯವರೆಗೆ ಹತ್ತು ಜನರು ಹತರಾಗಿದ್ದಾರೆ ಎಂದು ವರದಿಯಾಗಿದೆ.

ಮಾವೋವಾದಿ ಕೇಂದ್ರ ಸಮಿತಿ ಸದಸ್ಯ ಮನೋಜ್ ಅಲಿಯಾಸ್ ಮೋಂಡಂ ಬಾಲಕೃಷ್ಣ ಕೂಡ ಈ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ರಾಯ್‌ಪುರ ವಲಯದ ಐಜಿ ಅಮ್ರೇಶ್ ಮಿಶ್ರಾ ಎನ್‌ಕೌಂಟರ್ ಅನ್ನು ದೃಢಪಡಿಸಿದ್ದಾರೆ.

ಗರಿಯಾಬಂದ್‌ ಎನ್ನುವಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ ಮತ್ತು ಇದು ಇನ್ನೂ ಮುಂದುವರಿದಿದೆ ಎಂದು ಅವರು ಹೇಳಿದರು. ಕೆಲ ಮಾವೋವಾದಿಗಳು ಮೃತರಾಗಿರಬಹುದು ಎಂದು ಐಜಿ ತಿಳಿಸಿದ್ದಾರೆ.

ಈ ನಡುವೆ, ಛತ್ತೀಸ್‌ಗಢದ ದಂತೇವಾಡ ಜಿಲ್ಲೆಯ ಪಲ್ಲಿ-ಬಾರ್ಸೂರ್ ರಸ್ತೆಯಲ್ಲಿ ಪ್ರೆಷರ್ ಐಇಡಿ ಸ್ಫೋಟದಲ್ಲಿ ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಘಟನೆಯ ನಂತರ, ಭದ್ರತಾ ಪಡೆಗಳು ನಸುಕಿನಿಂದಲೇ ಮಾವೋವಾದಿಗಳಿಗಾಗಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ.

ದಾಂತೇವಾಡ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಗೌರವ್ ರಾಯ್ ಅವರು ಮಾತನಾಡಿ, “ಸುರಂಗ ಮಾರ್ಗಗಳನ್ನು ನಿರ್ಮೂಲನೆ ಮಾಡುವ ಕಾರ್ಯಾಚರಣೆಯ ಸಮಯದಲ್ಲಿ ಸ್ಫೋಟ ಸಂಭವಿಸಿದೆ. ಪ್ರೆಷರ್ ಐಇಡಿ ಸ್ಫೋಟದಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರು ಇನ್ಸ್‌ಪೆಕ್ಟರ್ ಮತ್ತು ಮತ್ತೊಬ್ಬರು ಬಾಂಬ್ ಪತ್ತೆ ಮತ್ತು ವಿಲೇವಾರಿ ದಳದವರು” ಎಂದು ಹೇಳಿದರು.

ಗಾಯಗೊಂಡ ಇಬ್ಬರನ್ನೂ ದಂತೇವಾಡ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಉತ್ತಮ ಚಿಕಿತ್ಸೆಗಾಗಿ ಅವರನ್ನು ಹೆಲಿಕಾಪ್ಟರ್ ಮೂಲಕ ರಾಯ್‌ಪುರಕ್ಕೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ. ಗಾಯಗೊಂಡ ಸಿಬ್ಬಂದಿ ಸಿಆರ್‌ಪಿಎಫ್‌ನ 195ನೇ ಬೆಟಾಲಿಯನ್‌ಗೆ ಸೇರಿದವರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

You cannot copy content of this page

Exit mobile version