ದೆಹಲಿ: ಕೇಂದ್ರ ಸರ್ಕಾರವು ಎಥೆನಾಲ್ ಮಿಶ್ರಿತ ಇಂಧನವನ್ನು ಬಿಡುಗಡೆ ಮಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ನನ್ನನ್ನು ರಾಜಕೀಯವಾಗಿ ಗುರಿಪಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ದುಷ್ಪ್ರಚಾರ ನಡೆಸಲಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಾಂಪ್ರದಾಯಿಕ ಇಂಧನದಲ್ಲಿ ಶೇ. 20ರಷ್ಟು ಎಥೆನಾಲ್ ಮಿಶ್ರಣ ಮಾಡಿ ಇ20 ಪೆಟ್ರೋಲ್ ಮಾರಾಟ ಮಾಡುವುದರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಉತ್ಪ್ರೇಕ್ಷೆಯ ಪ್ರಚಾರ ನಡೆಸಿ ಆತಂಕ ಸೃಷ್ಟಿಸಲಾಗುತ್ತಿದೆ ಎಂದರು.
ಈ ಇಂಧನವು ಸುರಕ್ಷಿತವಾಗಿದೆ ಎಂದು ನಿಯಂತ್ರಣ ಸಂಸ್ಥೆಗಳು ಮತ್ತು ವಾಹನ ತಯಾರಕರು ಇಬ್ಬರೂ ಇದಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ಹೇಳಿದರು. ಆಟೋಮೋಟಿವ್ ರಿಸರ್ಚ್ ಆಫ್ ಇಂಡಿಯಾ (ARAI) ಮತ್ತು ಸುಪ್ರೀಂ ಕೋರ್ಟ್ ಕೂಡ ಇ20 ಕಾರ್ಯಕ್ರಮದ ಬಗ್ಗೆ ಸ್ಪಷ್ಟತೆ ನೀಡಿದೆ ಎಂದರು. “ನನ್ನನ್ನು ಗುರಿಪಡಿಸಿ ರಾಜಕೀಯವಾಗಿ ವಿಷ ಪ್ರಚಾರ ನಡೆಸಲಾಗುತ್ತಿದೆ. ಇದು ಹಣ ಪಾವತಿಸಿ ಮಾಡಿಸುವ ಪ್ರಚಾರವಾದ್ದರಿಂದ ನಾನು ಅದರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ” ಎಂದು ಗಡ್ಕರಿ ಹೇಳಿದರು.
ಇ20 ಇಂಧನಕ್ಕೆ ಹೊಂದಿಕೆಯಾಗದ ಕಾರಣ ಹಲವು ಹಳೆಯ ವಾಹನಗಳು ಹಾಳಾಗುತ್ತಿವೆ ಎಂದು ದೇಶಾದ್ಯಂತ ಹಲವು ವಾಹನ ಮಾಲೀಕರು ಆರೋಪಿಸುತ್ತಿದ್ದರೂ, ಗಡ್ಕರಿ ಆ ಆರೋಪಗಳನ್ನು ನಿರ್ಲಕ್ಷಿಸಿದ್ದಾರೆ.