ಬೆಂಗಳೂರು : ವಿಧಾನಮಂಡಲದ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ವಿಧಾನಸಭೆಯೊಳಗೆ ಪ್ರವೇಶಿಸುವ ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ವಿಧಾನಸಭೆಯ ಪಶ್ಚಿಮದ್ವಾರದ ಬಳಿ ಪ್ರತಿಭಟನೆ ನಡೆಸಿದರು.
ಪ್ರಜಾಪ್ರಭುತ್ವ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ರಾಜ್ಯಪಾಲರ ಅಧಿಕಾರವನ್ನು ಉಚ್ಛ ನ್ಯಾಯಾಲಯ ಎತ್ತಿಹಿಡಿದರೂ ಜನವಿರೋಧಿ ವಿಧೇಯಕಗಳಿಗೆ ಸಹಿ ಹಾಕುವಂತೆ ರಾಜ್ಯಪಾಲರಿಗೆ ಒತ್ತಡ ಹೇರುತ್ತಾ, ರಾಜ್ಯಪಾಲರ ಕುಲಾಧಿಪತಿ ಸ್ಥಾನಕ್ಕೆ ಕತ್ತರಿ ಹಾಕಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂಬ ಪ್ಲೇಕಾರ್ಡ್ಗಳನ್ನು ಪ್ರದರ್ಶಿಸಲಾಯಿತು.
ಸರ್ಕಾರದ ವಿರುದ್ಧ ಶಾಸಕರ ಭವನದಿಂದ ವಿಧಾನಸೌಧದ ವರೆಗೆ ದೋಸ್ತಿ ನಾಯಕರು ಪಾದಯಾತ್ರೆಯ ಮೂಲಕ ಪ್ರತಿಭಟನೆ ನಡೆಸಿದರು. ಭ್ರಷ್ಟಾಚಾರ, ದುರಾಡಳಿತ ಹಾಗೂ ಅಕ್ರಮಗಳನ್ನು ಮುಚ್ಚಿಕೊಳ್ಳಲು ಪದೇ ಪದೇ ರಾಜ್ಯಪಾಲರ ಹೆಸರಲ್ಲಿ ನೀಚರಾಜಕಾರಣ ಮಾಡುತ್ತಿರುವ ಭ್ರಷ್ಟ ಸರ್ಕಾರದ ನಿಲುವುಗಳು ಹಾಗೂ ದ್ವೇಷ ರಾಜಕಾರಣಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ವಿಧಾನ ಪರಿಷತ್ ನ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಾಣಸ್ವಾಮಿ, ಜೆಡಿಎಸ್ ಪಕ್ಷದ ಶಾಸಕಾಂಗ ನಾಯಕ ಸುರೇಶ್ ಬಾಬು ಸೇರಿದಂತೆ ಹಲವರು ಇದ್ದರು.