“…ಟ್ರಂಪ್ ತೀರಾ ತಿಕ್ಕಲುತನದ ಮನುಷ್ಯ. ಆದರೂ ತನ್ನ ದೇಶದ ವಿದೇಶಾಂಗ ನೀತಿಯನ್ನೆ ಬುಡಮೇಲು ಮಾಡುವಂತೆ ಆತ ಉಕ್ರೇನಿನ ವಿರುದ್ಧವಾಗಿ ನಿಂತದ್ದು ಅಚ್ಚರಿಯೆನಿಸುತ್ತದೆ. ಯಾಕೆಂದರೆ, ಅಮೆರಿಕಾಕ್ಕೆ ರಷ್ಯಾ ಯಾವತ್ತೂ ಮಿತ್ರರಾಷ್ಟ್ರವಾಗಿ ವರ್ತಿಸಿಲ್ಲ; ಟ್ರಂಪ್‌ಗೆ ವ್ಲಾದಿಮಿರ್ ಪುತಿನ್ ಜೊತೆಗೂ ನಿಕಟ ಒಡನಾಟದ ಚರಿತ್ರೆಯಿಲ್ಲ…” ಮಾಚಯ್ಯ ಎಂ ಹಿಪ್ಪರಗಿಯವರ ಬರಹದಲ್ಲಿ
ವೈಟ್ ಹೌಸಿನಲ್ಲಿ ಮೊನ್ನೆ ಒಂದು ಘಟನೆ ನಡೆಯಿತು. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂಥಾ ತಿಕ್ಕಲು ವ್ಯಕ್ತಿ ಅನ್ನೋದು ಹೊಸ ಸಂಗತಿಯಲ್ಲ. ಕೋಟ್ಯಂತರ ಜನರನ್ನು ಪ್ರತಿನಿಧಿಸುವ ಒಬ್ಬ ಜನನಾಯಕನಿಗೆ ಇರಬೇಕಾದ ಸೌಜನ್ಯವಾಗಲಿ, ಸಂವೇದನೆಯಾಗಲಿ, ಕಡೇಪಕ್ಷ ತಾಳ್ಮೆಯಾಗಲಿ ಇಲ್ಲದ ಕ್ಷುದ್ರಜೀವಿ. ಉಕ್ರೇನಿನ ವಿಚಾರವಾಗಿ ಅದು ಮತ್ತೆ ಸಾಬೀತಾಗುತ್ತಿದೆಯಷ್ಟೆ. ಸ್ವತಃ ಟ್ರಂಪ್ ಆಹ್ವಾನಿಸಿದ್ದರಿಂದ ಉಕ್ರೇನಿನ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ ವೈಟ್ ಹೌಸಿಗೆ ಬಂದಿದ್ದರು. ಎರಡೂ ದೇಶಗಳ ನಡುವೆ ಖನಿಜಾಂಶ ಒಪ್ಪಂದದ ಭಾಗವಾಗಿ ಈ ಭೇಟಿ ಆಯೋಜಿಸಲಾಗಿತ್ತಾದರೂ, ಅದನ್ನು ಮೀರಿದ ಬೇರೊಂದು ಕಾರಣಕ್ಕೆ ಈ ಭೇಟಿ ಮಹತ್ವ ಪಡೆದುಕೊಂಡಿತ್ತು. ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿರೋದು, ಆ ಯುದ್ಧದಲ್ಲಿ ಉಕ್ರೇನಿನ ಲಕ್ಷಾಂತರ ಜನ ಹತರಾಗಿರೋದು, ಅಂತಾರಾಷ್ಟ್ರೀಯ ವೇದಿಕೆಗಳ ಒತ್ತಡದ ನಡುವೆಯೂ ರಷ್ಯಾ ಮತ್ತೆಮತ್ತೆ ಕದನವಿರಾಮ ಉಲ್ಲಂಘಿಸುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ರಷ್ಯಾ-ಉಕ್ರೇನ್ ಯುದ್ಧದಲ್ಲಿ ಇಷ್ಟು ದಿನ ಉಕ್ರೇನ್ ಪರವಾಗಿ ವಕಾಲತ್ತು ವಹಿಸುತ್ತಾ ಬಂದಿದ್ದ ಅಮೆರಿಕಾ ಸಾಕಷ್ಟು ಆರ್ಥಿಕ ನೆರವನ್ನೂ ನೀಡಿತ್ತು. ಆದರೆ ಟ್ರಂಪ್ ಅಧ್ಯಕ್ಷನಾಗುತ್ತಿದ್ದಂತೆಯೇ ಅಮೆರಿಕಾದ ವಿದೇಶಾಂಗ ನೀತಿಯೇ ತಲೆಕೆಳಗಾಗಿ ಹೋಯ್ತು. ಉಕ್ರೇನನ್ನು ವಿರೋಧಿಸುತ್ತಿರುವ ಟ್ರಂಪ್, ರಷ್ಯಾದ ವ್ಲಾಡಿಮಿರ್ ಪುತಿನ್ ಹೆಗಲಮೇಲೆ ಕೈಹಾಕಿ ಕೂತಿದ್ದಾರೆ. ಹಾಗಾಗಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯ ಈ ಭೇಟಿ ತುಂಬಾ ಮಹತ್ವ ದಕ್ಕಿಸಿಕೊಂಡಿತ್ತು.
ಆದರೆ ಮಾತುಕತೆಯ ವೈಖರಿ, ವೈಟ್‌ಹೌಸ್‌ನ ಘನತೆಗೆ ಕಪ್ಪುಚುಕ್ಕೆ ಇಟ್ಟಂತಿತ್ತು. ವಿರೋಧಿಯೆ ಆದರೂ, ಮನೆ ಬಾಗಿಲವರೆಗೆ ಬಂದವನನ್ನು ಅವಮಾನಿಸದಂತೆ ಎಚ್ಚರಿಕೆ ವಹಿಸುವುದು ಜನಸಾಮಾನ್ಯರ ಸೌಜನ್ಯ. ಹೀಗೆ ವರ್ತಿಸಲು ದೊಡ್ಡ ಡಿಪ್ಲೊಮೆಸಿ ಬೇಕಾಗಿಲ್ಲ. ಕಟ್ಟೆಪುರಾಣದ ಕಾಮನ್‌ಸೆನ್ಸ್ ಇರುವ ಉಗ್ರಿ, ಕಾಳಮಾವನಂತವರಿಗೂ ಅರ್ಥವಾಗುತ್ತೆ. ಆದರೆ ಟ್ರಂಪ್ ಎಂಬ ಹುಂಬನಿಗೆ ದೊಡ್ಡಣ್ಣನ ಧಿಮಾಕು ನೆತ್ತಿಗಡರಿತ್ತು. ತನ್ನಂತೆಯೇ ಇನ್ನೊಂದು ದೇಶದ ಅಧ್ಯಕ್ಷ ಅನ್ನೋದನ್ನು ಮರೆತು ಝೆಲೆನ್ಸ್ಕಿಯನ್ನು ಅವಮಾನಿಸಲು, ಆರೋಪಿಸಲು, ಏರು ದನಿಯಲ್ಲಿ ಗದರಿಸಲು ನೋಡಿದ. ಇದು ಹೊಸದೇನೂ ಅಲ್ಲ. ಆತ ಮೊದಲ ಬಾರಿ ಅಧ್ಯಕ್ಷನಾಗಿದ್ದಾಗ ಪಾಕಿಸ್ತಾನದ ಇಮ್ರಾನ್ ಖಾನ್ ಜೊತೆಗೂ ಡಿಪ್ಲೊಮೆಸಿಯ ಕರ್ಟಸಿ ಇಲ್ಲದೆ ತರಾಟೆಗೆ ತೆಗೆದುಕೊಂಡಿದ್ದ. ಇಮ್ರಾನ್ ಕಕ್ಕಾಬಿಕ್ಕಿಯಾಗಿ ತಲೆತಗ್ಗಿಸಿ ಕೂತಿದ್ದ. ಇಮ್ರಾನ್ ಪಾಕಿಸ್ತಾನದ ಪ್ರಧಾನಿಯಾಗಿದ್ದರಿಂದ ನಮಗೆ ಅವತ್ತು ಒಳಗೊಳಗೆ ಖುಷಿಯಾಗಿತ್ತು. ಆದರೆ ಟ್ರಂಪ್ ವರ್ತನೆ ಅತಿರೇಕದ್ದಾಗಿತ್ತು.
ಝೆಲೆನ್ಸ್ಕಿ ಜೊತೆಗೂ ಅದೇ ರೀತಿ ವ್ಯವಹರಿಸಲು ಮುಂದಾದ. ಆದರೆ ಆತ ಇಮ್ರಾನ್ ಖಾನ್‌ನಂತೆ ಇಳಿಮೋರೆ ಹಾಕಿಕೊಂಡು ಕೂರುವ ವ್ಯಕ್ತಿಯಲ್ಲ. ಟ್ರಂಪ್‌ಗಿಂತ ನಟಭಯಂಕರ! ಈ ಮಾತು ಲೇವಡಿ ಮಾಡುವ ಸಲುವಾಗಿ ಹೇಳುತ್ತಿಲ್ಲ. ಝೆಲೆನ್ಸ್ಕಿ ಉಕ್ರೇನಿನ ಅಧ್ಯಕ್ಷನಾಗಿದ್ದೇ ಟಿವಿ ಸೀರಿಯಲ್‌ನ ನಟನೆಯೊಂದರಿಂದ. ಅದಕ್ಕು ಮೊದಲು ಆತ ಹಲವಾರು ಸಿನಿಮಾಗಳಲ್ಲಿ, ನಾಟಕಗಳಲ್ಲಿ ಕಾಮಿಡಿ ಕಲಾವಿದನಾಗಿ ನಟನೆ ಮಾಡಿದ್ದವ. ಕ್ವಾರ್ಟಲ್ 95 ಎಂಬ ತನ್ನದೇ ಪ್ರೊಡಕ್ಷನ್ ಹೌಸ್ ನಿರ್ಮಿಸಿಕೊಂಡು ಎಂಟರ್‍ಟೈನ್‌ಮೆಂಟ್ ಕಾರ್ಯಕ್ರಮಗಳ ತಯಾರಿಕೆಯಲ್ಲೂ ತೊಡಗಿದ್ದವ. ನಿಜ ಹೇಳಬೇಕೆಂದರೆ, 2014ರಲ್ಲಿ ಆತ ನಿರ್ಮಾಣ ಮಾಡಿದ ಸರ್ವೆಂಟ್ ಆಫ್ ದಿ ಪೀಪಲ್ ಎಂಬ ಟೀವಿ ಸೀರಿಯಲ್ ನಟನೆಯೇ ಅವನನ್ನು ಅಧ್ಯಕ್ಷಗಿರಿಗೆ ತಂದು ಕೂರಿಸಿತೆಂದರೂ ತಪ್ಪಲ್ಲ. ಆ ಧಾರವಾಹಿಯಲ್ಲಿ ವ್ಯಾಸಿಲಿ ಗೋಲೋಬೊರ್ಡೋಕೊ ಎಂಬ ಪ್ರಧಾನ ಪಾತ್ರ ಬರುತ್ತೆ. ಹೈಸ್ಕೂಲಿನ ಹಿಸ್ಟರಿ ಮೇಷ್ಟ್ರು ಪಾತ್ರ. ರಾಜಕಾರಣದ ಗೊಡವೆ ಇಲ್ಲದೆ ತಾನಾಯಿತು, ತನ್ನ ಪಾಠವಾಯಿತು ಎಂಬಂತಿದ್ದ ಆ ಮೇಷ್ಟ್ರು ಅದೊಂದು ದಿನ ತನ್ನ ಕ್ಲಾಸು ತೆಗೆದುಕೊಳ್ಳಲೆಂದು ತರಗತಿ ಪ್ರವೇಶಿಸುತ್ತಾನೆ. ಅಲ್ಲಿ ವಿದ್ಯಾರ್ಥಿಗಳಿಲ್ಲ. ಪ್ರಿನ್ಸಿಪಾಲರು ಮಕ್ಕಳನ್ನೆಲ್ಲ ಸದ್ಯದಲ್ಲೇ ನಡೆಯಲಿದ್ದ ಪಾರ್ಲಿಮೆಂಟ್ ಚುನಾವಣೆಗೆ ಎಲೆಕ್ಷನ್ ಬೂತ್ ಅಣಿಮಾಡಲು ಕಳಿಸಿಕೊಟ್ಟಿರುತ್ತಾರೆ. ಕೆರಳಿ ಕೆಂಡವಾಗುವ ಗೋಲೋಬೋರ್ಡೋಕೊ, ತನ್ನ ಶಾಲೆಯ ವಿದ್ಯಾರ್ಥಿಕಗಳ ಮುಂದೆ ಉಕ್ರೇನಿನ ಭ್ರಷ್ಟ ರಾಜಕೀಯ ವ್ಯವಸ್ಥೆಯನ್ನು, ವೈಫಲ್ಯವನ್ನು ಹಿಗ್ಗಾಮುಗ್ಗಾ ಟೀಕಿಸಿ ಬೈದಾಡುತ್ತಾನೆ. ಒಬ್ಬ ತುಂಟ ಹುಡುಗ, ಮೇಷ್ಟ್ರು ಬೈಯ್ಯುತ್ತಿರೋದನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡ್ತಾನೆ. ರಾತ್ರೋರಾತ್ರಿ ಅದು ವೈರಲ್ ಆಗಿ, ಆ ಹಿಸ್ಟರಿ ಮೇಷ್ಟ್ರು ಜನರ ಪಾಲಿಗೆ ಬದಲಾವಣೆಯ ನಾಯಕನಂತೆ ಗೋಚರಿಸುತ್ತಾನೆ. ಜನರೇ ಕ್ರೌಡ್ ಫಂಡಿಂಗ್ ಮೂಲಕ ಅವನನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿ ಉಕ್ರೇನಿನ ಅಧ್ಯಕ್ಷನನ್ನಾಗಿ ಮಾಡುತ್ತಾರೆ. ಅಲ್ಲಿಂದಾಚೆಗೆ ಆತ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡುತ್ತಾನೆ. ಇದು ಆ ಧಾರವಾಹಿಯ ಕಥಾ ಸಾರಾಂಶ. ವಿಡಂಬನೆಯ ಮೂಲಕ ರಾಜಕೀಯ ಪರ್ಯಾಯದ ಸಾಧ್ಯತೆಯನ್ನು ತೆರೆದಿಡುವ ಕಥಾ ಹಂದರ. ಅದರ ಕಥೆಗಾರ, ನಿರ್ದೇಶಕ ಮಾತ್ರವಲ್ಲ, ಹಿಸ್ಟರಿ ಮೇಷ್ಟ್ರ ಪ್ರಧಾನ ಭೂಮಿಕೆ ನಿರ್ವಹಿಸಿದ್ದು ಇದೇ ಝೆಲೆನ್ಸ್ಕಿ.
ಉಕ್ರೇನಿನಲ್ಲಿ ಈ ಧಾರಾವಾಹಿ ಅದೆಷ್ಟು ಪ್ರಖ್ಯಾತಿ ಪಡೆಯಿತೆಂದರೆ, ಗೋಲೋಬೋರ್ಡೋಕೊ ಎಂಬ ಪಾತ್ರವನ್ನು ನಿಜದಂತೆ ಭಾವಿಸಿ, ಅದರಲ್ಲಿ ನಟಿಸಿದ ಝೆಲೆನ್ಸ್ಕಿಯನ್ನು ರಾಜಕೀಯವಾಗಿ ಸ್ವೀಕರಿಸಲು ಮುಂದಾದರು. ಕೊನೆಗೆ ಆ ಸೀರಿಯಲ್ ಹೆಸರಿನ `ಸರ್ವೆಂಟ್ ಆಫ್ ದಿ ಪೀಪಲ್’ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದ ಝೆಲೆನ್ಸ್ಕಿ, ಧಾರಾವಾಹಿಯಲ್ಲಿ ಘಟಿಸಿದಂತೆ ನಿಜಜೀವನದಲ್ಲೂ ಉಕ್ರೇನಿನ ಅಧ್ಯಕ್ಷನಾಗಿ ಆಯ್ಕೆಯಾದ!
ಝೆಲೆನ್ಸ್ಕಿಯ ರಾಜಕೀಯ ಹಿನ್ನೆಲೆ ಇಷ್ಟು ಫ್ಯಾಂಟಸಿಮಯವಾದದ್ದು. ಒಬ್ಬ ನಾಯಕ ಯಾವ ಕುಲುಮೆಯಲ್ಲಿ ರೂಪುಗೊಳ್ಳುತ್ತಾನೆ ಎಂಬುದರ ಮೇಲೆ ಅವನ ರಾಜಕೀಯ ವೈಖರಿ, ವರ್ತನೆಗಳು ನಿರ್ಧಾರವಾಗುತ್ತವೆ. ಭ್ರಷ್ಟ ವ್ಯವಸ್ಥೆ ಮತ್ತು ಆಂತರಿಕ ವ್ಯವಸ್ಥೆಯಿಂದ ಜರ್ಝರಿತವಾಗಿದ್ದ ಉಕ್ರೇನಿನ ಜನರಿಗೆ ಒಂದು ಧಾರವಾಹಿಯ ಪಾತ್ರಧಾರಿಯಾಗಿ ಹಠಾತ್ತನೆ ಇಷ್ಟವಾಗಿ, ಜನನಾಯಕನ ಪಟ್ಟಕ್ಕೇರಿದ ಝೆಲೆನ್ಸ್ಕಿಯಲ್ಲಿ ತುಸು ಫ್ಯಾಂಟಸಿಯ ಮತ್ತು ರೆಬೆಲ್ಲುತನಗಳ ಸಿಡುಕಿನ ವರ್ತನೆಯನ್ನು ಕಾಣಬಹುದು.
ಇದಕ್ಕೊಂದು ನಿದರ್ಶನ ಇಲ್ಲಿದೆ. ರಷ್ಯಾದ ಸೇನೆ ಉಕ್ರೇನಿನ ಮೇಲೆ ಯುದ್ಧ ಸಾರಿ, ರಾಜಧಾನಿ ಕೀವ್ ನಗರವನ್ನು ಬಾಂಬುಗಳಿಂದ ತೊಪ್ಪನೆ ತೋಯಿಸಿದ್ದ ಸಂದರ್ಭ ಅದು. ಉಕ್ರೇನ್ ಜನತೆಯನ್ನು ಅಧೀರಗೊಳಿಸಲು ರಷ್ಯಾ ಒಂದು ಸುದ್ದಿ ಹರಿಬಿಟ್ಟಿತು. ರಷ್ಯಾ ದಾಳಿಗೆ ಹೆದರಿ ಝೆಲೆನ್ಸ್ಕಿ ಕೀವ್ ತೊರೆದು ಪಲಾಯನ ಮಾಡಿದ್ದಾರೆ ಅನ್ನೋದು ಆ ಸುದ್ದಿ. ಈ ಝೆಲೆನ್ಸ್ಕಿ ಎಂಥಾ ಫ್ಯಾಂಟಸಿ ತುಂಬಿದ ವ್ಯಕ್ತಿಯೆಂದರೆ, ಸಿನಿಮೀಯ ಶೈಲಿಯಲ್ಲಿ ಯುದ್ಧಪೀಡಿತ ಕೀವ್ ನಗರದ ನಟ್ಟನಡುವಿನ ಚೌಕಕ್ಕೆ ಬಂದು ನಿಂತು ನಾನು ಎಲ್ಲಿಯೂ ಓಡಿಹೋಗಿಲ್ಲ, ರಷ್ಯಾದ ದಾಳಿಗೆ ಜಗ್ಗದೆ ನನ್ನ ದೇಶವನ್ನು ರಕ್ಷಿಸಿಕೊಳ್ಳ್ಳುತ್ತೇನೆ, ಕೊನೆವರೆಗೆ ಹೋರಾಡುತ್ತೇನೆ ಎಂದು ಒಬ್ಬ ಸಾಮಾನ್ಯ ಯೂಟ್ಯೂಬರ್ ಶೈಲಿಯಲ್ಲಿ ವೀಡಿಯೊ ಮಾಡಿ ಹರಿಬಿಟ್ಟು ರಷ್ಯಾ ತಂತ್ರವನ್ನು ಮಣಿಸಿದ. ಈ ಹಂತದಲ್ಲಿ ಹಲವರ ಪಾಲಿಗೆ ಝೆಲೆನ್ಸ್ಕಿ ದಿಟ್ಟ ನಾಯಕನಂತೆ, ಗಂಡೆದೆಯ ನೇತಾರನಂತೆ ಕಾಣಬಹುದು. ಆದರೆ ಜವಾಬ್ಧಾರಿಯುತ ನಾಯಕನಾದವನಿಗೆ ಬೇಕಾಗಿರೋದು ಗಂಡೆದೆಯಲ್ಲ; ತನ್ನನ್ನು ನಂಬಿ ಕೂತಿರುವ ಜನರನ್ನು ಪೊರೆಯುವ ತಾಯ್ತನ. ವಿವೇಚನೆ, ತಾಳ್ಮೆ, ಮುತ್ಸದ್ಧಿತನಗಳನ್ನು ಹೇಡಿತನವೆಂಬಂತೆ ಬಿಂಬಿಸಲಾಗುತ್ತಿರುವ ಇವತ್ತಿನ ಕಾಲದಲ್ಲಿ ಝೆಲೆನ್ಸ್ಕಿ ದಿಟ್ಟ ನಾಯಕನಂತೆ ಕಾಣಿಸಬಹುದು. ಆದರೆ, ಆತನ ದಿಟ್ಟತೆಯನ್ನು ಸಾಬೀತು ಪಡಿಸಲು ಹೆಣವಾದವರ ಆತ್ಮಗಳಿಗೇನು ಸಿಕ್ಕಿತು?
ಮೊನ್ನೆ, ಟ್ರಂಪ್ ವೈಟ್‌ಹೌಸಿನಲ್ಲಿ ಕೂತು ತನ್ನ ಮೀಡಿಯಾದವರ ಮುಂದೆ ತರಾಟೆಗೆ ತೆಗೆದುಕೊಳ್ಳಲು ಮುಂದಾದದ್ದು ಇಂಥ ಝೆಲೆನ್ಸ್ಕಿಯನ್ನು. ಇಮ್ರಾನ್ ಖಾನ್ ರೀತಿ ತಲೆತಗ್ಗಿಸುವ ಹಾಗಿದ್ದರೆ, ಟ್ರಂಪ್‌ವರೆಗೆ ಆತ ಕಾಯಬೇಕಿತ್ತು; ಪುತಿನ್ ಎದುರಿಗೇ ತಲೆ ತಗ್ಗಿಸಿರುತ್ತಿದ್ದರೆ ಯುದ್ಧ ನಿಂತು ಯಾವುದೋ ಕಾಲವಾಗಿರುತ್ತಿತ್ತು. ‘ನೀನು ನಿನ್ನ ಪ್ರತಿಷ್ಠೆಗಾಗಿ ಜನರ ಹೆಣಗಳನ್ನು ಬಯಸುತ್ತಿದ್ದೀಯಾ? ನಿನ್ನಿಂದಲೇ ಮೂರನೇ ಮಹಾಯುದ್ಧವಾಗಲಿದೆ! ನಿನಗೆ ಕೊಟ್ಟ ಸಹಕಾರಕ್ಕೆ ನೀನು ಅಮೆರಿಕಾಗೆ ಕೃತಜ್ಞತೆ ತೋರುತ್ತಿಲ್ಲ’ ಅಂತೆಲ್ಲ ಟ್ರಂಪ್ ದೊಡ್ಡಣ್ಣನ ದನಿಯಲ್ಲಿ ಮಾತನಾಡುವಾಗ, ಝೆಲೆನ್ಸ್ಕಿ ಕೂಡಾ ಏರುದನಿಯಲ್ಲಿ ಜವಾಬು ಕೊಟ್ಟು, ಮಾತುಕತೆಯ ಅರ್ಧದಲ್ಲೇ ಎದ್ದು ಹೊರಹೋದ.
ಟ್ರಂಪ್ ತೀರಾ ತಿಕ್ಕಲುತನದ ಮನುಷ್ಯ. ಆದರೂ ತನ್ನ ದೇಶದ ವಿದೇಶಾಂಗ ನೀತಿಯನ್ನೆ ಬುಡಮೇಲು ಮಾಡುವಂತೆ ಆತ ಉಕ್ರೇನಿನ ವಿರುದ್ಧವಾಗಿ ನಿಂತದ್ದು ಅಚ್ಚರಿಯೆನಿಸುತ್ತದೆ. ಯಾಕೆಂದರೆ, ಅಮೆರಿಕಾಕ್ಕೆ ರಷ್ಯಾ ಯಾವತ್ತೂ ಮಿತ್ರರಾಷ್ಟ್ರವಾಗಿ ವರ್ತಿಸಿಲ್ಲ; ಟ್ರಂಪ್‌ಗೆ ವ್ಲಾದಿಮಿರ್ ಪುತಿನ್ ಜೊತೆಗೂ ನಿಕಟ ಒಡನಾಟದ ಚರಿತ್ರೆಯಿಲ್ಲ. ಆದಾಗ್ಯೂ ಟ್ರಂಪ್ ಯಾಕೆ, ತನ್ನ ದಿಢೀರ್ ರಷ್ಯಾಕ್ಕೆ ಸನಿಹವಾಗಿ ಉಕ್ರೇನಿನ ವಿರುದ್ಧ ಹರಿಹಾಯುತ್ತಿದ್ದಾನೆ? ಇದಕ್ಕೊಂದು ಕಾರಣವಿದೆ. ಐದಾರು ವರ್ಷಗಳ ಹಿಂದಿನ ಮಾತು. ಅಂದರೆ 2019ರಲ್ಲಿ ಅಮೆರಿಕಾವು ಅಧ್ಯಕ್ಷೀಯ ಚುನಾವಣೆಗೆ ತಯಾರಾಗುತ್ತಿದ್ದ ಕಾಲ. ಆಗಷ್ಟೇ ಝೆಲೆನ್ಸ್ಕಿ ಉಕ್ರೇನಿನ ಅಧ್ಯಕ್ಷನಾಗಿ ಆಯ್ಕೆಯಾಗಿದ್ದ. ಅಮೆರಿಕಾದಲ್ಲಿ ಡೆಮಾಕ್ರೆಟಿಕ್ ಪಾರ್ಟಿಯಿಂದ ಜೋ ಬೈಡೆನ್ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸುವುದು ಖಚಿತವಾಗಿತ್ತು; ರಿಪಬ್ಲಿಕನ್ ಪಾರ್ಟಿಯಿಂದ ಹಾಲಿ ಅಧ್ಯಕ್ಷನಾಗಿದ್ದ ಟ್ರಂಪ್‌ಗೆ ಎದುರಾಗಿ! ಅಲ್ಲಿಯವರೆಗೂ ಜೋ ಬೈಡೆನ್ 2009ರಿಂದ 2017ರವರೆಗೆ ಅಮೆರಿಕಾದ ಉಪಾಧ್ಯಕ್ಷ ಹುದ್ದೆಯಲ್ಲಿದ್ದ ವ್ಯಕ್ತಿ. ಚುನಾವಣೆಯಲ್ಲಿ ಜೋ ಬೈಡೆನ್ ತನಗಿಂತ ಮುಂದಿರುವುದು ಖಾತ್ರಿಪಡಿಸಿಕೊಂಡ ಟ್ರಂಪ್, ಬೈಡೆನ್‌ಗೆ ಕೆಟ್ಟ ಹೆಸರು ತರಲು ಒಂದು ಆರೋಪ ಹರಿಬಿಟ್ಟ. ಬೈಡೆನ್ ಮಗ ಹಂಟರ್ ಉಕ್ರೇನಿನಲ್ಲಿ ಇಂಧನಕ್ಕೆ ಸಂಬಂಧಿಸಿದ ಒಂದು ಉದ್ಯಮ ನಡೆಸುತ್ತಿದ್ದ. ತನ್ನ ಮಗನಿಗೆ ಈ ಉದ್ಯಮದಲ್ಲಿ ಅನುಕೂಲ ಮಾಡಿಕೊಡಲು ಬೈಡೆನ್ ತಮ್ಮ ಉಪಾಧ್ಯಕ್ಷ ಕಚೇರಿಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಅನ್ನೋದು ಟ್ರಂಪ್ ಆರೋಪ. ಟ್ರಂಪ್ ಬಳಿ ತನ್ನ ಆರೋಪವನ್ನು ಸಾಬೀತು ಮಾಡುವ ಪುರಾವೆಗಳಿರಲಿಲ್ಲ.
ಅದಕ್ಕು ಮುನ್ನ ಉಭಯ ದೇಶಗಳ ನಡುವಿನ ಒಪ್ಪಂದದಂತೆ ಅಮೆರಿಕಾವು ಉಕ್ರೇನಿಗೆ 400 ಮಿಲಿಯನ್ ಅಮೆರಿಕನ್ ಡಾಲರ್ ನೆರವು ನೀಡಬೇಕೆಂದು ನಿರ್ಧಾರವಾಗಿತ್ತು. ಆ ನಿರ್ಧಾರವನ್ನೇ ಬಂಡವಾಳ ಮಾಡಿಕೊಂಡ ಅಧ್ಯಕ್ಷ ಟ್ರಂಪ್, ಝೆಲೆನ್ಸ್ಕಿಯ ಜೊತೆ ಒಂದು ಡೀಲ್ ಕುದುರಿಸಲು ಮುಂದಾದ. ತಾನು ಮಾಡಿರುವ ಆರೋಪಕ್ಕೆ ಪೂರಕವಾಗಿ ಬೈಡೆನ್ ಮಗನ ಉದ್ಯಮದಲ್ಲಿ ನಡೆದಿರಬಹುದಾದ ಅಕ್ರಮದ ಕುರಿತು ಉಕ್ರೇನ್ ಸರ್ಕಾರ ತನಿಖೆಗೆ ಮುಂದಾಗಬೇಕು ಎಂಬುದು ಟ್ರಂಪ್ ಷರತ್ತು. ಆಗ ಮಾತ್ರ ತಾನು ಒಪ್ಪಂದದ ನೆರವಿನ ನಿಧಿಯನ್ನು ಬಿಡುಗಡೆ ಮಾಡುತ್ತೇನೆ, ಇಲ್ಲವಾದಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಝೆಲೆನ್ಸ್ಕಿಗೆ ಒತ್ತಡ ತಂದಿದ್ದ. ಹಾಗೆ ತನಿಖೆಯೇನಾದರೂ ನಡೆದರೆ, ಅದನ್ನೆ ತನ್ನ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಚಾರ ಸರಕಾಗಿ ಮಾಡಿಕೊಂಡು ಜೋ ಬೈಡೆನ್‌ಗೆ ಹಿನ್ನಡೆಯಾಗುವಂತೆ ಮಾಡುವುದು ಟ್ರಂಪ್ ಎಣಿಕೆ. ಆದರೆ ಝೆಲೆನ್ಸ್ಕಿ ಅದಕ್ಕೆ ಸೊಪ್ಪುಹಾಕಲಿಲ್ಲ. ಬದಲಿಗೆ ಟ್ರಂಪ್ ತನ್ನ ಮೇಲೆ ಹೀಗೆ ಒತ್ತಡ ತರುತ್ತಿದ್ದಾರೆ, ಅದೇ ಕಾರಣಕ್ಕೆ ನೆರವಿನ ನಿಧಿಯನ್ನು ತಡೆಹಿಡಿದು ಕೂತಿದ್ದಾರೆ ಎಂದು ಜಾಹೀರು ಮಾಡಿದ.
ಅಮೆರಿಕಾದಲ್ಲಿ ಇದು ಕೋಲಾಹಲ ಉಂಟು ಮಾಡಿತು. ಅಮೆರಿಕಾದ ಪಾರ್ಲಿಮೆಂಟ್ ಹೌಸ್‌ನಲ್ಲಿ ಟ್ರಂಪ್ ವಿರುದ್ಧ ನಿಂದನಾ ನಿರ್ಣಯವನ್ನೂ ಅಂಗೀಕರಿಸಲಾಯ್ತು. ಪಾರ್ಲಿಮೆಂಟ್ ತನಿಖೆಯಲ್ಲಿ ಟ್ರಂಪ್ ತಪ್ಪಿತಸ್ಥನೆಂದು ಸಾಬೀತಾಯಿತು. ಆದರೆ ಸೆನೆಟ್‌ನಿಂದ ನಡೆದ ತನಿಖೆ ಟ್ರಂಪ್‌ಗೆ ಕ್ಲೀನ್ ಚಿಟ್ ನೀಡಿತು. ಆದರೆ ಅಷ್ಟರಲ್ಲಾಗಲೆ ಟ್ರಂಪ್‌ಗೆ ಆಗಬೇಕಾದ ಡ್ಯಾಮೇಜ್ ಆಗಿಹೋಗಿತ್ತು. ಪ್ರಚಾರದಲ್ಲಿ ಟ್ರಂಪ್‌ಗೆ ಹಿನ್ನಡೆಯಾಯ್ತು. ಬೈಡೆನ್ ಪರವಾಗಿ ಸಿಂಪಥಿ ಹೆಚ್ಚಾಯ್ತು. ಟ್ರಂಪ್ ಸೋತ. ಬೈಡೆನ್ ಗೆದ್ದು ಅಧ್ಯಕ್ಷನಾದ. ಆದರೆ ತನ್ನ ಸೋಲಿಗೆ ಪರೋಕ್ಷವಾಗಿ ಕಾರಣನಾದ ಝೆಲೆನ್ಸ್ಕಿಯ ಮೇಲೆ ಟ್ರಂಪ್‌ಗೆ ಸಿಟ್ಟು, ಸೇಡು ಬೆಳೆಯುತ್ತಾ ಬಂತು.
ಈ ಹಳೆಯ ಗಾಯವೇ ಈಗ ಟ್ರಂಪ್ ದಿಢೀರನೆ ಅಮೆರಿಕಾದ ವಿದೇಶಾಂಗ ನೀತಿಯನ್ನು ಬದಲಿಸಿ, ಉಕ್ರೇನ್ ವಿಚಾರದಲ್ಲಿ ಕಟುವಾಗುವಂತೆ ಮಾಡಲು ಕಾರಣ. ಟ್ರಂಪ್ ಎಂಬ ತಿಕ್ಕಲು ಮನುಷ್ಯ; ಝೆಲೆನ್ಸ್ಕಿ ಎಂಬ ಫ್ಯಾಂಟಸಿಯ ಕ್ಲಿಷ್ಟ ವ್ಯಕ್ತಿ; ವ್ಲಾದಿಮಿರ್ ಪುತಿನ್ ಎಂಬ ದರ್ಪಿಷ್ಟ ಆಸಾಮಿ… ಈ ಜಗತ್ತು ನಾಯಕರನ್ನಾಗಿಸಿಕೊಂಡು ನರಳಾಡುತ್ತಿರುವುದು ಇಂತಹ ವ್ಯಕ್ತಿಗಳನ್ನು! ಅಂದಹಾಗೆ, ಈ ಟ್ರಂಪ್ ನಮ್ಮ ಮೋದಿಯವರಿಗೆ ಆಪ್ತ ಗೆಳೆಯನಂತೆ! ಸಮಾನ ಮನಸ್ಸು-ಸಮಾನ ಅಭಿರುಚಿಗಳು ಗಾಢ ಗೆಳೆತನಗಳ ಮೂಲವಾಗಿರುತ್ತವೆ…
- ಮಾಚಯ್ಯ ಎಂ ಹಿಪ್ಪರಗಿ