ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಭಾನುವಾರ ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆಗೆ ಮರು ಆಯ್ಕೆ ಮಾಡಿದ್ದಾರೆ. ಇದರ ಜೊತೆಗೆ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಆಕಾಶ್ ಆನಂದ್ ಅವರನ್ನು ಮೇ ತಿಂಗಳಲ್ಲಿ ಬಿಎಸ್‌ಪಿ ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಆ ನಂತರ ಒಂದು ತಿಂಗಳ ಅಂತರದಲ್ಲಿ ಈ ಬೆಳವಣಿಗೆ ನಡೆದಿದೆ.
ತಮ್ಮ ನಿರ್ಧಾರವನ್ನು ಪ್ರಕಟಿಸಿದ ಮಾಯಾವತಿ ಅವರು ರಾಜಕೀಯ ಪ್ರಬುದ್ಧತೆ ಪಡೆಯುವವರೆಗೆ ಅವರನ್ನು ಹುದ್ದೆಗಳಿಂದ ತೆಗೆದುಹಾಕಲಾಗುತ್ತಿದೆ ಎಂದು ಎಕ್ಸ್‌ನಲ್ಲಿ ಬರೆದಿದ್ದರು.
ಮೇ ತಿಂಗಳಲ್ಲಿ ತಮ್ಮ ಸಾಮಾಜಿಕ ಜಾಲತಾಣದ X ಖಾತೆಯಲ್ಲಿ ಮಾಯಾವತಿ ಅವರು, ಡಾ ಬಿಆರ್ ಅಂಬೇಡ್ಕರ್ ಅವರ ಆದರ್ಶಗಳು ಮತ್ತು “ಸಾಮಾಜಿಕ ಬದಲಾವಣೆಗಾಗಿ ನಡೆಯುತ್ತಿರುವ ಚಳುವಳಿ”ಗೆ ಪಕ್ಷದ ಬದ್ಧತೆಯನ್ನ ಪುನರುಚ್ಚರಿಸಿದ್ದಾರೆ.
ಸಧ್ಯ ಆಕಾಶ್ ಆನಂದ್ ಅವರನ್ನು ಬಿಎಸ್‌ಪಿಯ ರಾಷ್ಟ್ರೀಯ ಸಂಯೋಜಕರನ್ನಾಗಿ ನೇಮಿಸಲಾಗಿದೆ ಮತ್ತು ಈ ಆಂದೋಲನಕ್ಕೆ ವೇಗವನ್ನು ಒದಗಿಸುವುದಕ್ಕಾಗಿ ಮಾಯಾವತಿಯವರ ಉತ್ತರಾಧಿಕಾರಿ ಎಂದು ಘೋಷಿಸಲಾಗಿದೆ ಎಂದು ಅವರು ಹೇಳಿದರು.
ಸಮಾಜವಾದಿ ಪಕ್ಷದೊಂದಿಗಿನ ಸಂಬಂಧವನ್ನು ಕಡಿದುಕೊಂಡ ನಂತರ ಮಾಯಾವತಿ ಪಕ್ಷದ ಸಂಘಟನೆಯನ್ನು ಪುನರ್ ಸಂಘಟಿಸಲು ತೊಡಗಿದಾಗ 2019 ರಲ್ಲಿ ಆಕಾಶ್ ಆನಂದ್ ಬಿಎಸ್ಪಿಯ ರಾಷ್ಟ್ರೀಯ ಸಂಯೋಜಕರಾಗಿ ಆಯ್ಕೆಯಾಗಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಾಯಾವತಿ ಉತ್ತರಾಧಿಕಾರಿಯಾಗಿ ಆಕಾಶ್ ಆನಂದ್ ಅವರನ್ನು ಹೆಸರಿಸಲಾಗಿತ್ತು.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಉತ್ತರ ಪ್ರದೇಶದಲ್ಲಿ ಚುನಾವಣಾ ರ್ಯಾಲಿಯಲ್ಲಿ ಆಕ್ಷೇಪಾರ್ಹ ಭಾಷೆ ಬಳಸಿದ್ದಕ್ಕಾಗಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಆಕಾಶ್ ಆನಂದ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
“ಈ ಸರ್ಕಾರ ಬುಲ್ಡೋಜರ್ ಸರ್ಕಾರ ಮತ್ತು ದೇಶದ್ರೋಹಿಗಳ ಸರ್ಕಾರವಾಗಿದೆ. ಸ್ವತಃ ತನ್ನ ಪಕ್ಷದ ಕಾರ್ಯಕರ್ತರನ್ನು ಹಸಿವಿನಿಂದ ಬಳಲುವ ಮತ್ತು ತನ್ನ ಹಿರಿಯರನ್ನು ಗುಲಾಮರನ್ನಾಗಿ ಮಾಡುವ ಪಕ್ಷವು ಭಯೋತ್ಪಾದಕ ಸರ್ಕಾರವಾಗಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಇಂತಹ ಸರ್ಕಾರವನ್ನು ನಡೆಸುತ್ತಿದೆ” ಎಂದು ಆಕಾಶ್ ನಾಯಕ ಹೇಳಿದ್ದರು.